ಮೈನಸ್ ಬಿಎಸ್‌ವೈ ಬಿಜೆಪಿ ಇಸ್ ಝೀರೋ
ಕ.ಪ್ರ. ವಾರ್ತೆ ಲಿಂಗಸ್ಗೂರು ಮಾ.21
ರಾಜ್ಯದಲ್ಲಿ ಕರ್ನಾಟಕ ಜನತಾ ಪಕ್ಷ ಅಸ್ತಿತ್ವಕ್ಕೆ ಬಂದು ಕೇವಲ 101 ದಿನಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 270ಕ್ಕೂ ಅಧಿಕ ಸ್ಥಾನಗಳನ್ನು ಪಡೆದಿದೆ. ಆದರೆ ಬಿಜೆಪಿ ಸ್ಥಿತಿ ಏನಾಗಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳುವ ಜೊತೆಗೆ ಮೈನಸ್ ಬಿಎಸ್‌ವೈ ಬಿಜೆಪಿ ಇಸ್ ಝೀರೋ ಎಂದು ಜನರು ಗುರುತಿಸಿದ್ದಾರೆ ಎಂದು ಮಾಜಿ ಸಚಿವ, ಕೆಜೆಪಿ ಹಿರಿಯ ಮುಖಂಡ ಸಿ.ಎಂ. ಉದಾಸಿ ವ್ಯಂಗ್ಯವಾಡಿದರು.
ಪಟ್ಟಣದ ಶಾದಿಮಹಲ್‌ನಲ್ಲಿ ಕರ್ನಾಟಕ ಜನತಾ ಪಕ್ಷದಿಂದ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಸಸಿಗೆ ನೀರೆರೆದು ಉದ್ಘಾಟಿಸಿ ಮಾತನಾಡಿದ ಅವರು, ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಬಿಜೆಪಿ ನೇತೃತ್ವದ ಸರ್ಕಾರವನ್ನು ಅಧಿಕಾರಕ್ಕೆ ತಂದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರ ಅಧಿಕಾರಾವಧಿಯಲ್ಲಿ ಅವರ ವಿರುದ್ಧ ಅನಾವಶ್ಯಕ ಆರೋಪಗಳೇ ಹೆಚ್ಚು ಚರ್ಚೆಯಾದವೇ ವಿನಃ ಅವರು ಜಾರಿಗೆ ತಂದ ಮಹತ್ವದ ಯೋಜನೆಗಳು ಮರೆಯಾದವು ಎಂದರು.
ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮ: ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಎಲ್ಲ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ಒದಗಿಸುವ ಮೂಲಕ ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಗಮನಹರಿಸಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಅಲ್ಲದೆ 35 ಸಾವಿರ ಕೋಟಿ ಇದ್ದ ಬಜೆಟ್ ಗಾತ್ರವನ್ನು 1 ಲಕ್ಷ ಕೋಟಿಗೆ ಹೆಚ್ಚಿಸಿದ್ದಾರೆ, ದೇಶದಲ್ಲಿಯೇ ಪ್ರಥಮ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ಕೀರ್ತಿ ಅವರದ್ದಾಗಿದೆ.
ಆದರೆ ಇವರ ಉತ್ತಮ ಆಡಳಿತ ಮತ್ತು ಏಳಿಗೆ ಸಹಿಸದ ಕೆಲವರು ಬೆನ್ನಿಗೆ ಚೂರಿ ಹಾಕುವ ಮೂಲಕ ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಿದರು. ಇದರಿಂದ ಬೇಸತ್ತ ಯಡಿಯೂರಪ್ಪ ಅವರು ಕರ್ನಾಟಕ ಜನತಾ ಪಕ್ಷ ಎಂಬ ಪ್ರಾದೇಶಿಕ ಪಕ್ಷ ಸ್ಥಾಪಿಸಿದ್ದಾರೆ. ಅದು ಅಸ್ತಿತ್ವಕ್ಕೆ ಬಂದ 101 ದಿನಗಳಲ್ಲಿ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 270ಕ್ಕೂ ಅಧಿಕ ಸ್ಥಾನಗಳನ್ನು ಪಡೆದಿದೆ. ಆದರೆ ಬಿಜೆಪಿ ಸ್ಥಿತಿ ಏನಾಗಿದೆ ಎಂದು ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಅಲ್ಲದೆ ಮೈನಸ್ ಬಿಎಸ್‌ವೈ ಬಿಜೆಪಿ ಇಸ್ ಝೀರೋ ಎಂದು ಮೂದಲಿಸಿದರು.
ಯುದ್ಧೋಪಾದಿಯಲ್ಲಿ ಅಭ್ಯರ್ಥಿಗಳ ಗೆಲವಿಗೆ ಮುಂದಾಗಿ: ರಾಜ್ಯದ ಸಮಗ್ರ ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷ ಬೆಂಬಲಿಸುವುದು ಅವಶ್ಯವಾಗಿದ್ದು, ಬಿಎಸ್‌ವೈ ಅವರು ಜಾರಿಗೆ ತಂದ ಅಭಿವೃದ್ಧಿಪರ ಯೋಜನೆಗಳು ಜನಮಾನಸದಲ್ಲಿ ನೆಲೆಯೂರುವಂತೆ ಮಾಡಿದ್ದು, ಈ ನಿಟ್ಟಿನಲ್ಲಿ ಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲವಿಗೆ ಮುಖಂಡರು ಹಾಗೂ ಕಾರ್ಯಕರ್ತರು ಯುದ್ಧೋಪಾದಿಯಲ್ಲಿ ಕೆಲಸ ಮಾಡಲು ಮುಂದಾಗಬೇಕೆಂದು ಕರೆ ನೀಡಿದರು.
ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ. ಲಕ್ಷ್ಮೀನಾರಾಯಣ ಮಾತನಾಡಿ, ಯಡಿಯೂರಪ್ಪನವರು ತಮ್ಮ 40 ವರ್ಷಗಳ ಸುದೀರ್ಘ ಹೋರಾಟದಿಂದ ರಾಜ್ಯದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಅಧಿಕಾರಕ್ಕೆ ತರುವ ಮೂಲಕ ಗ್ರಾಮೀಣ ಭಾಗದ ಎಲ್ಲ ವರ್ಗದ ಜನಾಂಗದವರಿಗೆ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ಗಮನಹರಿಸಿದ್ದಾರೆ. ಬರುವ ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿಗಳ ಗೆಲವಿಗೆ ಎಲ್ಲ ವರ್ಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೆಲ್ಲಿಸುವುದು ಅವಶ್ಯವಾಗಿದ್ದು, ಈ ನಿಟ್ಟಿನಲ್ಲಿ ಮುಖಂಡರು ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಗುರುತಿಸುಲ್ಲಿ ನಿರತರಾಗಬೇಕೆಂದು ಕರೆ ನೀಡಿದರು.
ಇದೇ ವೇಳೆ ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ ಆನ್ವರಿ, ಲಿಂಗಸ್ಗೂರು ನಿಯೋಜಿತ ಅಭ್ಯರ್ಥಿ ಎಚ್.ಬಿ. ಮುರಾರಿ, ಜಿಪಂ ಮಾಜಿ ಅಧ್ಯಕ್ಷ ಹನುಮಂತಪ್ಪ ತೊಗರಿ ಮಾತನಾಡಿದರು. ಸಭೆಯಲ್ಲಿ ಜಿಲ್ಲಾ ಸಂಚಾಲಕರಾದ ವೆಂಕನಗೌಡ ಮಲ್ಕಾಪುರ, ಶಂಕರಗೌಡ ಹರವಿ, ಮಾನಪ್ಪ ನಾಯಕ, ಸುಭಾಷ ಬಿರಾದಾರ, ಜಿಲ್ಲಾಧ್ಯಕ್ಷ ಅಮಿನುದ್ದೀನ್, ಮಸ್ಕಿ ನಿಯೋಜಿತ ಅಭ್ಯರ್ಥಿ ಮಹಾದೇವಪ್ಪಗೌಡ, ಸಿಂಧನೂರು ನಿಯೋಜಿತ ಅಭ್ಯರ್ಥಿ ರಾಜಶೇಖರ ಪಾಟೀಲ, ಪುರಸಭೆ ಸದಸ್ಯ ಗುಂಡೇರಾವ್ ದೇಸಾಯಿ, ಮುಖಂಡರಾದ ವೀರನಗೌಡ ಕಾರಲಕುಂಟಿ, ಬಾಬನಗೌಡ ಆನ್ವರಿ, ದೊಡ್ಡಬಸಪ್ಪ ಅಂಗಡಿ ಸೇರಿದಂತೆ ಇನ್ನಿತರರು ಇದ್ದರು.