ರಾಜಕೀಯ ಚುರುಕು, ಚುನಾವಣೆಗೆ ಭರದ ಸಿದ್ಧತೆ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ರಾಯಚೂರು ಮಾ.21
ರಾಜ್ಯ ವಿಧಾನಸಭೆಗೆ ಚುನಾವಣೆ ದಿನಾಂಕ ನಿಗದಿಯಾಗುವ ಮೂಲಕ ಮತ್ತೆ ರಾಜಕೀಯ ಪಕ್ಷಗಳು ಚಟುವಟಿಕೆ ಚುರುಕುಗೊಳಿಸಿದ್ದು, ಏ.10ರಿಂದ ಆರಂಭವಾಗಲಿರುವ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ಜಿಲ್ಲಾಡಳಿತವೂ ಭರದ ಸಿದ್ಧತೆ ನಡೆಸಿದೆ.
ಜಿಲ್ಲೆಯ 7 ವಿಧಾನಸಭೆ ಕ್ಷೇತ್ರಗಳಿಗೆ ಮೇ.5ರಂದು ನಡೆಯಲಿರುವ ಚುನಾವಣೆಗೆ ರಾಜಕೀಯ ಪಕ್ಷಗಳು ಸಜ್ಜಾಗುತ್ತಿದ್ದು, ಈ ಮೊದಲು ನಗರ ಮತ್ತು ಸ್ಥಳೀಯ ಸಂಸ್ಥೆಯ ಚುನಾವಣೆಯ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಿದ್ದ ಸಂಘಟನಾ ಪ್ರಕ್ರಿಯೆಗೆ ಮತ್ತೆ ಚಾಲನೆ ನೀಡಿವೆ.
ತೀವ್ರ ಬೇಸರ: ಜಿಲ್ಲೆಯಲ್ಲಿ ಮೇ.5ರಂದು ನಡೆಯಲಿರುವ ಮತದಾನದಲ್ಲಿ ಸದ್ಯದ ಅಂಕಿ- ಅಂಶದಂತೆ ಒಟ್ಟು 7 ವಿಧಾನಸಭೆ ಕ್ಷೇತ್ರಗಳಲ್ಲಿ 12,93,067 ಮತದಾರರು ಮತ ಚಲಾಯಿಸಲಿದ್ದಾರೆ. ಅದರಲ್ಲಿ 6,50,858 ಪುರುಷರು ಹಾಗೂ 6,42,209 ಮಹಿಳೆಯರಿದ್ದಾರೆ.
ಇದೇ ತಿಂಗಳು ನಡೆದ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಗರ ಸೇರಿದಂತೆ ಜಿಲ್ಲೆಯ ಕೆಲವೆಡೆ ಸಾವಿರಾರು ಸಂಖ್ಯೆಯ ಮತದಾರರ ಹೆಸರುಗಳು ಪಟ್ಟಿಯಿಂದ ನಾಪತ್ತೆಯಾಗಿದ್ದರಿಂದ ಈಗಾಗಲೇ ಚುನಾವಣೆ ಆಯೋಗವು ಜಿಲ್ಲಾಡಳಿತದ ಕಾರ್ಯನಿರ್ವಹಣೆ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದೆ ಎಂದು ಗೊತ್ತಾಗಿದೆ.
ಪ್ರಕ್ರಿಯೆ ಚುರುಕು: ಯಾವುದೇ ಆಧಾರವಿಲ್ಲದೇ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದು ಹಾಕಿದ ಜಿಲ್ಲಾಡಳಿತದ ಕ್ರಮ ಮತದಾನದ ವೇಳೆಯೇ ಭಾರೀ ಗೊಂದಲಕ್ಕೆ ದಾರಿ ಮಾಡಿತ್ತು. ಅದರಿಂದ ಎಚ್ಚೆತ್ತಿರುವ ಜಿಲ್ಲಾಡಳಿತವು ಈಗಾಗಲೇ ಕೈಬಿಟ್ಟು ಹೋದ ಮತದಾರರ ಹೆಸರುಗಳ ಪುನಾ ಸೇರ್ಪಡೆ ಮತ್ತು ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಳ್ಳುವವರಿಗೆ ಅವಕಾಶ ಕಲ್ಪಿಸಿದೆ. ಅದರಂತೆ ಏ.7ರವರೆಗೆ ಮತದಾರರ ಪಟ್ಟಿಗೆ ಹೊಸದಾಗಿ ಮತದಾರರನ್ನು ಸೇರ್ಪಡೆಗೊಳಿಸಲಾಗುತ್ತದೆ ಎಂದು ಜಿಲ್ಲಾ ಚುನಾವಣೆ ವಿಭಾಗ ತಿಳಿಸಿದೆ.
ಇದರಿಂದಾಗಿ ಮುಂದಿನ ದಿನಗಳಲ್ಲಿ ಮತದಾರರ ಸಂಖ್ಯೆಯ ಪ್ರಮಾಣದಲ್ಲಿ ಏರಿಳಿತಗಳಾಗುವುದರಲ್ಲಿ ಸಂಶಯವಿಲ್ಲ. ಇನ್ನು ಚುನಾವಣೆ ಆಯೋಗವು ವಿಧಾನಸಭೆ ಚುನಾವಣೆಯಲ್ಲಿ ಮತದಾರರ ಗುರುತಿನ ಚೀಟಿ ಕಡ್ಡಾಯಗೊಳಿಸಿರುವುದರಿಂದ ಮತದಾರರ ಗುರುತಿನ ಚೀಟಿ ನೀಡುವ ಪ್ರಕ್ರಿಯೆ ಚುರುಕುಗೊಳಿಸಲಾಗಿದೆ.
ಬಿರುಸಿನ ಚಟುವಟಿಕೆ: ಜಿಲ್ಲಾಡಳಿತ ಇದುವರೆಗೆ ಜಿಲ್ಲೆಯಲ್ಲಿ 12,93,067 ಮತದಾರರ ಪೈಕಿ 12,68,654 ಮತದಾರರಿಗೆ ಅವರ ಭಾವಚಿತ್ರವಿರುವ ಗುರುತಿನ ಚೀಟಿ ನೀಡಿದ್ದು, ಇನ್ನುಳಿದ 24413 ಮತದಾರರಿಗೆ ಗುರುತಿನ ಚೀಟಿ ವಿತರಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಜಿಲ್ಲೆಯಲ್ಲಿ ಈಗಾಗಲೇ ಶೇ.98.11ರಷ್ಟು ಮತದಾರರಿಗೆ ಅವರ ಭಾವಚಿತ್ರವಿರುವ ಗುರುತಿನ ಚೀಟಿ ವಿತರಿಸಲಾಗಿದೆ ಎಂದು ಚುನಾವಣೆ ವಿಭಾಗ ತಿಳಿಸಿದೆ.
ಜಿಲ್ಲೆಯ ರಾಯಚೂರು ನಗರ, ರಾಯಚೂರು ಗ್ರಾಮಾಂತರ, ಮಾನವಿ, ಸಿಂಧನೂರು, ಮಸ್ಕಿ, ಲಿಂಗಸ್ಗೂರು ಮತ್ತು ದೇವದುರ್ಗ ವಿಧಾನಸಭೆ ಕ್ಷೇತ್ರಗಳಿಗೆ ಮೇ.5ರಂದು ನಡೆಯುವ ಚುನಾವಣೆಗೆ ರಾಜಕೀಯ ಕ್ಷೇತ್ರದಲ್ಲಿ ಬಿರುಸಿನ ಚಟುವಟಿಕೆ ಆರಂಭಗೊಂಡಿದೆ.
ಕೇಂದ್ರ ಚುನಾವಣೆ ಆಯೋಗವು ಬುಧವಾರ ಚುನಾವಣೆಯ ದಿನಾಂಕ ಮತ್ತು ಅಧಿಸೂಚನೆಯ ವಿವರಗಳನ್ನು ಪ್ರಕಟಿಸುತ್ತಿದ್ದಂತೆಯೇ ಟಿಕೆಟ್ ಆಕಾಂಕ್ಷಿಗಳ ಮಧ್ಯೆ ಪೈಪೋಟಿ ತೀವ್ರಗೊಂಡಿದೆ. ಪಕ್ಷದ ವರಿಷ್ಠರ ಓಲೈಕೆ ಕಾರ್ಯಕ್ಕೆ ಆಕಾಂಕ್ಷಿಗಳು ಮುಂದಾಗಿದ್ದಾರೆ.
ಕಾಂಗ್ರೆಸ್ನಲ್ಲಿ ಹುಮ್ಮಸ್ಸು: ಇತ್ತೀಚೆಗೆ ನಡೆದ ನಗರ ಮತ್ತು ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಸಿಂಧನೂರು ನಗರಸಭೆಯಲ್ಲಿ ನಿಚ್ಚಳ ಬಹುಮತ ಪಡೆದಿದೆ. ದೇವದುರ್ಗದಲ್ಲಿ ಬಿಜೆಪಿಗೆ ಬಹುಮತ ಲಭಿಸಿದೆ. ಆದರೆ ರಾಯಚೂರು ನಗರಸಭೆ, ಮಾನವಿ, ಲಿಂಗಸ್ಗೂರು ಪುರಸಭೆಗಳು, ಮುದಗಲ್ ಪಪಂ.ನಲ್ಲಿ ಪಕ್ಷೇತರರ ಬೆಂಬಲದೊಂದಿಗೆ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಕಾಂಗ್ರೆಸ್ ಹುಮ್ಮಸ್ಸಿನಿಂದಿದೆ.
ಇದೇ ವೇಳೆ ರಾಜ್ಯ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿನ ಗೆಲವಿನ ಸ್ಫೂರ್ತಿಯಿಂದಲೇ ಕಾಂಗ್ರೆಸ್ ಮುನ್ನುಗ್ಗಲಿದೆ. ಜೆಡಿಎಸ್ ಕಾಂಗ್ರೆಸ್ ಪಕ್ಷಕ್ಕೆ ಪೈಪೋಟಿ ನೀಡಲು ಸಜ್ಜಾಗುತ್ತಿದ್ದರೆ, ಜಿಲ್ಲೆಯಲ್ಲಿ ಕಳೆದ ಚುನಾವಣೆಯ ನಂತರ ಬಿಜೆಪಿಯ ಮೂವರು ಶಾಸಕರಿದ್ದರು.
ಆದರೆ ಈ ಬಾರಿ ಲಿಂಗಸ್ಗೂರಿನಲ್ಲಿ ಮಾನಪ್ಪ ವಜ್ಜಲ್ ಜೆಡಿಎಸ್ನತ್ತ ಹಾಗೂ ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪಗೌಡ ಪಾಟೀಲ್ ಕಾಂಗ್ರೆಸ್ಗೆ ಸೇರಲು ಸಿದ್ಧತೆ ನಡೆಸಿದ್ದು ಬಿಜೆಪಿಗೆ ತೀವ್ರ ಹಿನ್ನಡೆಯುಂಟು ಮಾಡಿದೆ. ಅಷ್ಟೇ ಅಲ್ಲ ಬಿಜೆಪಿ ಪಕ್ಷದ ನಾಯಕರಲ್ಲಿ ಆತಂಕಕ್ಕೂ ಕಾರಣವಾಗಿದೆ.