ಸಂಕ್ಷಿಪ್ತ ಸುದ್ದಿ
ಮಸ್ಕಿ: ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ
ಮಸ್ಕಿ: ಪಟ್ಟಣದ ಜೆಡಿಎಸ್ ಪಕ್ಷದ ಕಾರ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ನೂರಾರು ಜನರು ಪಕ್ಷವನ್ನು ಸೇರಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಸ್ಕಿ ವಿಧಾನಸಭೆ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ರಾಜಾ ಸೋಮನಾಥ ನಾಯಕ ಮಾತನಾಡಿ, ತಮ್ಮ ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ತಮಗೆ ಮಸ್ಕಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆಂದು ಹೇಳಿದರು. ಮಾಜಿ ಸಿಎಂ ಕುಮಾರಸ್ವಾಮಿ ಅವರ 20 ತಿಂಗಳ ಅವಧಿಯಲ್ಲಿ ಜಾರಿಯಾದ ರೈತರ ಹಾಗೂ ಜನಪರ ಯೋಜನೆಗಳಿಂದಾಗಿ ಜನರು ಪ್ರಭಾವಿತರಾಗಿದ್ದು, ಪಕ್ಷಕ್ಕೆ ಕ್ಷೇತ್ರದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಪಕ್ಷದ ಇನ್ನಷ್ಟು ಬಲವರ್ಧನೆಗೆ ಪಕ್ಷದ ಮುಖಂಡರೊಂದಿಗೆ ಕ್ಷೇತ್ರದ ಗ್ರಾಮಾಂತರ ಪ್ರದೇಶಗಳಲ್ಲಿ ಸಂಘಟನೆಯ ಮೂಲಕ ಬೆಂಬಲ ಪಡೆಯುವುದಾಗಿ ತಿಳಿಸಿದರು. ಜೆಡಿಎಸ್ ಕಾರ್ಯಾಧ್ಯಕ್ಷ ಅಮರೇಶ ಹಂಚಿನಾಳ, ಹಿಂದುಳಿದ ವರ್ಗಗಳ ಅಧ್ಯಕ್ಷ ಮಲ್ಲಪ್ಪ ಬಾರಕೇರ್, ಶೇಕರಗೌಡ ಪಾಟೀಲ್, ಶರಬನಗೌಡ ತಿಡಿಗೋಳ್ ಮತ್ತಿತರರು ಇದ್ದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ನಿಷೇಧಾಜ್ಞೆ ಜಾರಿ
ರಾಯಚೂರು: ಜಿಲ್ಲಾದ್ಯಂತ ಏ.1ರಿಂದ ಆರಂಭವಾಗುವ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಹಿನ್ನೆಲೆಯಲ್ಲಿ ಪರೀಕ್ಷೆ ಕೇಂದ್ರದ ಸುತ್ತಲೂ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಆದೇಶ ಹೊರಡಿಸಿದ್ದಾರೆ. ಪರೀಕ್ಷೆಯಲ್ಲಿ ನಕಲು ಮತ್ತು ಅಕ್ರಮ ತಡೆಗೆ ಈ ಅಕ್ರಮ ಕ್ರಮ ಕೈಗೊಂಡಿರುವ ಅವರು, ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ಪರೀಕ್ಷೆ ಸಮಯದಲ್ಲಿ ನಿಯೋಜಿಸಿರುವ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಪರೀಕ್ಷಾರ್ಥಿಗಳನ್ನು ಹೊರತುಪಡಿಸಿ ಇತರರಿಗೆ ಪ್ರವೇಶ ನಿಷೇಧಿಸಲಾಗಿದೆ. ಅದೇ ರೀತಿ ಪರೀಕ್ಷಾರ್ಥಿಗಳು ಮೊಬೈಲ್, ಪಠ್ಯಪುಸ್ತಕಗಳು, ಕ್ಯಾಲ್ಕುಲೇಟರ್ನ್ನು ಪರೀಕ್ಷೆ ಕೇಂದ್ರದೊಳಕ್ಕೆ ತರುವುದನ್ನು ಸಹ ನಿಷೇಧಿಸಿದ್ದಾರೆ. ಪರೀಕ್ಷಾ ವೇಳೆಯಲ್ಲಿ ಪರೀಕ್ಷಾ ಕೇಂದ್ರದ ಸುತ್ತಲಿನ ಜೆರಾಕ್ಸ್, ಸೈಬರ್ ಕೆಫೆಗಳನ್ನು ಮುಚ್ಚಲು ಆದೇಶಿಸಿದೆ.