ಕಾಂಗ್ರೆಸ್ ಎಸ್ಟಿ ವಿಭಾಗದ ಅಧ್ಯಕ್ಷರಾಗಿ ಬಸವರಾಜ
ಲಿಂಗಸ್ಗೂರು: ಲಿಂಗಸ್ಗೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಪಂಗಡ ವಿಭಾಗದ ನೂತನ ಅಧ್ಯಕ್ಷರನ್ನಾಗಿ ಬಸವರಾಜ ನಾಯಕ ದೊಡ್ಡಹೊಲ ಅವರನ್ನು ಎಸ್ಟಿ ವಿಭಾಗದ ಜಿಲ್ಲಾಧ್ಯಕ್ಷತಾಯಣ್ಣ ನಾಯಕ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಮಾಜಿ ಸಂಸದ ಎ.ವೆಂಕಟೇಶ ನಾಯಕ, ಸಮಿತಿ ಜಿಲ್ಲಾಧ್ಯಕ್ಷ ಎ.ವಸಂತ ಕುಮಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಮೇಟಿ ಅವರ ಸೂಚನೆ ಮೇರೆಗೆ ಬಸವರಾಜ ನಾಯಕ ಅವರನ್ನು ನೇಮಕ ಮಾಡಲಾಗಿದ್ದು, ಕೂಡಲೆ ಜವಾಬ್ದಾರಿ ವಹಿಸಿಕೊಂಡು ಪಕ್ಷದ ಬಲವರ್ಧನೆಗೆ ಶ್ರಮಿಸುವಂತೆ ಸೂಚಿಸಿರುತ್ತಾರೆ.
ಆಧಾರ್ ಕಾರ್ಡ್ಗಾಗಿ ನಿದ್ದೆಗೆಡಬೇಡಿ: ಮಲ್ಲಯ್ಯ
ಸಿಂಧನೂರು: ನಗರದ ಎಪಿಎಂಸಿ ರೈತ ಭವನದಲ್ಲಿ ಆಧಾರ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಲು ಸಾರ್ವಜನಿಕರು ರಾತ್ರಿ ಅಲ್ಲೇ ಮಲಗಿ ನಿದ್ದೆಗೆಡುತ್ತಿದ್ದು, ಇನ್ನು ಒಂದು ವರ್ಷದವರೆಗೆ ಅರ್ಜಿಗಳನ್ನು ಸ್ವೀಕರಿಸುವುದರಿಂದ ಸಾರ್ವಜನಿಕರು ಸಹಕರಿಸಬೇಕೆಂದು ಆಧಾರ್ ಕಾರ್ಡ್ನ ಅಧಿಕಾರಿ ಮಲ್ಲಯ್ಯ ಗೋರಕಲ್ ಮನವಿ ಮಾಡಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರೈತಭವನ ಆಧಾರ್ ಕೇಂದ್ರದಲ್ಲಿ ಕೇವಲ ನಗರ ಪ್ರದೇಶದ ಜನರಿಗೆ ಮಾತ್ರ ಆಧಾರ್ ಕಾರ್ಡ್ಗಳನ್ನು ವಿತರಿಸಲಾಗುತ್ತದೆ. ಇನ್ನು ಎರಡು ತಿಂಗಳೊಳಗೆ ಗ್ರಾಮೀಣ ಪ್ರದೇಶದಲ್ಲಿ ಆಧಾರ್ ಅರ್ಜಿ ಸ್ವೀಕಾರಕ್ಕೆ ವ್ಯವಸ್ಥೆ ಮಾಡಲಾಗುವುದು. ಆಧಾರ್ ಕಾರ್ಡ್ ಪಡೆಯಲು ಇನ್ನು ಸಾಕಷ್ಟು ಸಮಯವಿರುವುದರಿಂದ ಸಾರ್ವಜನಿಕರು ಕೇಂದ್ರದ ಮುಂದೆ ಬಂದು ಮಲಗುವ ಅವಶ್ಯಕತೆ ಇರುವುದಿಲ್ಲ. ಪ್ರತಿದಿನ 300 ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುವುದು. ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕೆಂದು ಅವರು ಕೋರಿದ್ದಾರೆ.
ಡಾಕ್ಟರೇಟ್ ಪ್ರದಾನ
ರಾಯಚೂರು: ಮೊಲಿಕ್ಯುಲರ್ ಕ್ಯಾರೆಕ್ಟ್ ರೈಜೇಶನ್ ಮತ್ತು ಬ್ಯಾಕ್ಟೇರಿಯೋಪೇಜ್ ಥೆರಪಿ ಫಾರ್ ಮಲ್ಟಿಡ್ರಗ್ ರಸಿಸ್ಟಂಟ್ ಗ್ರ್ಯಾಮ್ ಪೋಸಿಟಿವ್ ಫ್ಯಾಥೊಜೆನ್ಸ್ ಎಂಬ ವಿಷಯದ ಬಗ್ಗೆ ಅಜಯಕುಮಾರ್ ಓಲಿ ಮಂಡಿಸಿದ ಪ್ರಬಂಧಕ್ಕೆ ಗುಲ್ಬರ್ಗ ವಿವಿ ಇತ್ತೀಚೆಗೆ ನಡೆದ ಘಟಿಕೋತ್ಸವದಲ್ಲಿ ಡಾಕ್ಟರೇಟ್ ನೀಡಿ ಗೌರವಿಸಿದೆ. ಡಾ. ಚಂದ್ರಕಾಂತ ಕೆಳಮನಿ ಅವರ ಮಾರ್ಗದರ್ಶನದಲ್ಲಿ ಅಜಯಕುಮಾರ ಈ ಪ್ರಬಂಧ ಮಂಡಿಸಿದ್ದರು.