ಗೂಡ್ಸ್ ಲಾರಿ ಪಲ್ಟಿ: ಚಾಲಕ ಸಾವು
ರಾಯಚೂರು: ಲಿಂಗಸ್ಗೂರು- ರಾಯಚೂರು ರಸ್ತೆಯಲ್ಲಿ ಮಾನವಿ ತಾಲೂಕಿನ ಕವಿತಾಳ ಗ್ರಾಮದಲ್ಲಿ ಗೂಡ್ಸ್ ಲಾರಿಯೊಂದು ಪಲ್ಟಿಯಾಗಿ ಅದರ ಚಾಲಕ ಸಾವಿಗೀಡಾಗಿದ್ದಾನೆ. ಮೃತನನ್ನು ಖಾದರಾಬಾಷಾ ಎಂದು ಗುರುತಿಸಲಾಗಿದೆ. ಈತ ಗೂಡ್ಸ್ ಲಾರಿಯನ್ನು ವೇಗ ಮತ್ತು ನಿರ್ಲಕ್ಷ್ಯದಿಂದ ಓಡಿಸಿದ್ದರಿಂದ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಗ್ಗಿಗೆ ಲಾರಿ ಪಲ್ಟಿಯಾಗಿದ್ದರಿಂದ ತೀವ್ರ ಗಾಯಗೊಂಡ ಈತ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಸಾವಿಗೀಡಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಕವಿತಾಳ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಹೊಟ್ಟೆನೋವು: ವ್ಯಕ್ತಿ ಆತ್ಮಹತ್ಯೆ
ರಾಯಚೂರು: ಮಾನವಿ ತಾಲೂಕಿನ ತಡಕಲ್ ಗ್ರಾಮದ ನಿವಾಸಿಯೊಬ್ಬ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು ಗ್ರಾಮದ ದೊಡ್ಡ ದ್ಯಾವಪ್ಪ ಎಂದು ಗುರುತಿಸಲಾಗಿದೆ. ಈತ ಸುಮಾರು ದಿವಸಗಳಿಂದ ಹೊಟ್ಟೆ ಬೇನೆಯಿಂದ ಬಳಲುತ್ತಿದ್ದು, ಅದರಿಂದ ಪಾರಾಗಲು ಆಗಾಗ್ಗೆ ಮದ್ಯ ಸೇವಿಸುತ್ತಿದ್ದ. ಚಿಕಿತ್ಸೆ ಪಡೆದರೂ, ರೋಗ ಗುಣವಾಗದ ಹಿನ್ನೆಲೆ ಈತ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಕವಿತಾಳ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಆಯನೂರು; ಮಹಿಳೆ ಆತ್ಮಹತ್ಯೆ
ರಾಯಚೂರು: ಸಿಂಧನೂರು ತಾಲೂಕಿನ ಆಯನೂರು ಗ್ರಾಮದಲ್ಲಿ ಮಹಿಳೆಯೊಬ್ಬಾಕೆ ಮಕ್ಕಳಾಗಲಿಲ್ಲ ಎಂದು ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತಳನ್ನು ಸಣ್ಣ ಹನುಮಂತಿ ಎಂದು ಗುರುತಿಸಲಾಗಿದೆ. ಗ್ರಾಮದ ಸಿದ್ದಪ್ಪ ಎಂಬಾತನಿಗೆ ಮದುವೆ ಮಾಡಲಾಗಿತ್ತು. ಮದುವೆಯಾಗಿ 10 ವರ್ಷಗಳಾದರೂ ಮಕ್ಕಳಾಗದ್ದಕ್ಕೆ ನೊಂದಿದ್ದ ಈಕೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. ಬಳಗಾನೂರು ಠಾಣೆಯಲ್ಲಿ ಕೇಸ್ ದಾಖಲಾಗಿದೆ.