ನಿರ್ದಿಷ್ಟ ಗುರಿಯೊಂದಿಗೆ ವ್ಯಾಸಂಗ ಮಾಡಿ
ಕನ್ನಡಪ್ರಭ ವಾರ್ತೆ ರಾಯಚೂರು ಮಾ.22
ವಿದ್ಯಾರ್ಥಿ ಜೀವನದಲ್ಲಿ ನಿರ್ದಿಷ್ಟ ಗುರಿಯಿರಬೇಕು. ಗುರಿ ಸಾಧನೆಯ ಛಲದೊಂದಿಗೆ ವಿದ್ಯಾರ್ಥಿಗಳು ಅಧ್ಯಯನ ಮಾಡಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು ಎಸ್ಎಲ್ಎನ್ ಎಂಜಿನಿಯರಿಂಗ್ ಕಾಲೇಜು ಎಂಬಿಎ ವಿಭಾಗದ ಮುಖ್ಯಸ್ಥ ಪ್ರೊ. ಅಮರೇಶ್ ಪಾಟೀಲ್ ಹೇಳಿದರು.
ನಗರದ ಎಸ್ಎಸ್ಎಂ ಮಹಾವಿದ್ಯಾಲಯದಿಂದ ಇತ್ತೀಚೆಗೆ ಆಯೋಜಿಸಿದ್ದ ವೃತ್ತಿ ಮಾರ್ಗದರ್ಶನ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿ, ವೃತ್ತಿಯನ್ನು ಆಯ್ದುಕೊಳ್ಳುವಾಗ ಸಂಬಂಧಿಸಿದ ಕಂಪನಿಯು ವಿದ್ಯಾರ್ಥಿ ಪಡೆದ ಪದವಿ ಕಡೆಗೆ ಗಮನಿಸದೇ ಅಭ್ಯರ್ಥಿಯ ಸಾಮರ್ಥ್ಯ, ಸಂವಹನ ಕೌಶಲ್ಯಗಳು, ನಾಯಕತ್ವದ ಗುಣಗಳು ಮತ್ತು ಜ್ಞಾನವನ್ನು ಮಾತ್ರ ಗಮನಿಸುತ್ತವೆ ಎಂದು ಹೇಳಿದರು.
ಉದ್ಯೋಗ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿದ್ದು, ಅವಕಾಶಗಳಿಗೆ ಅನುಗುಣವಾಗಿ ಸಾಮರ್ಥ್ಯ, ಕೌಶಲ್ಯಗಳನ್ನು ಬೆಳೆಸಿಕೊಂಡು ವೃತ್ತಿಗೆ ಸಿದ್ಧತೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಯಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಎ. ಮಾಲಿಪಾಟೀಲ್, ಬಿಎ ಅಂತಿಮ ವರ್ಷದ ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಗುರಿಯನ್ನಿಟ್ಟುಕೊಂಡು ಅದನ್ನು ಸಾಧಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದಲ್ಲಿ ಉನ್ನತ ಹುದ್ದೆಗಳನ್ನು ಪಡೆದು ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿಗಳನ್ನು ಹೊಂದಬಹುದೆಂದು ತಿಳಿಸಿದರು.
ಸಮಾರಂಭದಲ್ಲಿ ವೃತ್ತಿ ಮಾರ್ಗದರ್ಶನ ಘಟಕದ ಸಲಹೆಗಾರ ಶ್ರೀನಿವಾಸ ರಾಯಚೂರುಕರ್, ಕಾಲೇಜಿನ ಬೋಧಕ ವರ್ಗ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.