ನೀರಿನ ಘಟಕಕ್ಕೆ ಅನುಮತಿ; ಎಡಿಸಿ ವಿರುದ್ಧ ನಿಂದನೆ ದೂರು
ಕನ್ನಡಪ್ರಭ ವಾರ್ತೆ ರಾಯಚೂರು ಮಾ.22
ಕುಡಿಯುವ ನೀರಿನ ಮಾರಾಟದಲ್ಲಿ ತೊಡಗಿರುವ ವಿವಿಧ ಘಟಕಗಳು ಬಿಎಸ್‌ಐ ಸಂಸ್ಥೆಯಿಂದ ಐಎಸ್‌ಐ ಪ್ರಮಾಣ ಪತ್ರ ಪಡೆದಿರದಿದ್ದಲ್ಲಿ ಅಂಥ ಘಟಕಗಳನ್ನು ಮುಚ್ಚುವಂತೆ ರಾಜ್ಯ ಉಚ್ಚ ನ್ಯಾಯಾಲಯವು ಆದೇಶ ನೀಡಿದ್ದರೂ ಜಿಲ್ಲಾಡಳಿತ ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ತೋರಿದೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸೇರಿ ವಿವಿಧ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ದೂರು ದಾಖಲಿಸುವುದಾಗಿ ಪ್ರಜಾಂದೋಲನ ಸಂಸ್ಥೆ ಎಚ್ಚರಿಸಿದೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಸ್ಥೆಯ ಅಧ್ಯಕ್ಷ ಲೋಚನೇಶ ಹೂಗಾರ್, 2012ರ ನ.9ರಂದು ರಾಜ್ಯದ ಉಚ್ಚ ನ್ಯಾಯಾಲಯವು ಕುಡಿವ ನೀರಿನ ಮಾರಾಟ ಉದ್ಯಮದಲ್ಲಿರುವವರು ಬಿಎಸ್‌ಐ ಸಂಸ್ಥೆಯಿಂದ ಐಎಸ್‌ಐ ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯವೆಂದು ಸೂಚಿಸಿದೆ. ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತರಲಾಗಿದೆ. ಆದರೆ ಆದೇಶದ ಪಾಲನೆಯಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಆರೋಪಿಸಿದರು.
ಶೀಘ್ರವೇ ನ್ಯಾಯಾಂಗ ನಿಂದನೆ ಅರ್ಜಿ: ಐಎಸ್‌ಐ ಪ್ರಮಾಣ ಪತ್ರ ಪಡೆಯದ ಅನೇಕ ಕುಡಿವ ನೀರಿನ ಪ್ಯಾಕೇಜ್ ಘಟಕಗಳನ್ನು ಜಿಲ್ಲಾಡಳಿತ ದಾಳಿ ಮಾಡಿ ಬೀಗ ಹಾಕಿದೆ. ಆದರೆ ಅಂಥ ಘಟಕಗಳವರಿಗೆ ಹಿಂಬಾಗಿಲಿನಿಂದ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಿರುವುದು ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಶೀಘ್ರದಲ್ಲಿಯೇ ಹೆಚ್ಚುವರಿ ಜಿಲ್ಲಾಧಿಕಾರಿ ತಿಮ್ಮಪ್ಪ ಮತ್ತಿತರರ ವಿರುದ್ಧ ದಾಖಲಿಸುವುದಾಗಿ ತಿಳಿಸಿದರು.
ರಾಜ್ಯದ ಚಿತ್ರದುರ್ಗ, ಹುಬ್ಬಳ್ಳಿ- ಧಾರವಾಡ, ಗುಲ್ಬರ್ಗ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಈ ಅಕ್ರಮ ನೀರಿನ ಮಾರಾಟಕ್ಕೆ ಈಗಾಗಲೇ ಕಡಿವಾಣ ಹಾಕುವಲ್ಲಿ ಅಲ್ಲಿನ ಜಿಲ್ಲಾಡಳಿತಗಳು ಕಾರ್ಯಪ್ರವೃತ್ತವಾಗಿವೆ. ಆದರೆ ರಾಯಚೂರು ಜಿಲ್ಲಾಡಳಿತವು ನ್ಯಾಯಾಲಯದ ತೀರ್ಪು ಹೊರಬಿದ್ದು 4 ತಿಂಗಳು ಕಳೆದರೂ ವಿವಿಧ ಹೆಸರುಗಳಲ್ಲಿ ಅಕ್ರಮವಾಗಿ ಐಎಸ್‌ಐ ಪ್ರಮಾಣ ಪತ್ರವಿಲ್ಲದ ಪ್ಯಾಕೇಜ್ ಕುಡಿಯುವ ನೀರಿನ ಘಟಕಗಳನ್ನು ಮುಚ್ಚುವ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಅಶುದ್ಧ ನೀರು- ನಿಗಾ ಇರಲಿ: ನೀರು ಜೀವನಾವಶ್ಯಕವಾಗಿದ್ದು, ಇಂದಿನ ಕಲುಷಿತ ವಾತಾವರಣದಲ್ಲಿ ಹಣ ನೀಡಿ ನೀರು ಖರೀದಿಸುವಂಥ ಸ್ಥಿತಿಯಿದೆ. ಇಂಥ ಸಂದರ್ಭದಲ್ಲಿ ಗುಣಮಟ್ಟದ ಬಗ್ಗೆ ಗ್ರಾಹಕರು ಗಮನಹರಿಸುತ್ತಿಲ್ಲ. ಇದರಿಂದಾಗಿ ಕುಡಿವ ನೀರಿನ ಅಕ್ರಮ ಮಾರಾಟದ ಜಾಲ ದೊಡ್ಡದಾಗಿ ಬೆಳೆದಿದೆ. ಜನತೆ ಪ್ಯಾಕೇಜ್ ಮಾಡಿದ ನೀರನ್ನು ಗುಣಮಟ್ಟದ್ದೆಂದು ಭಾವಿಸಿ ಸೇವಿಸುತ್ತಾರೆ. ಆದರೆ ಐಎಸ್‌ಐ ಪ್ರಮಾಣ ಪತ್ರವಿಲ್ಲದ ನೀರು ಅಶುದ್ಧ ಮತ್ತು ಅಪಾಯಕಾರಿ ಎಂಬುದನ್ನು ಸಾರ್ವಜನಿಕರು ತಿಳಿಯಬೇಕಿದೆ ಎಂದು ಸಲಹೆ ನೀಡಿದರು.
ನೆರೆಯ ಆಂಧ್ರದಿಂದ ದಿನವೂ 3.5 ಲಕ್ಷ ಐಎಸ್‌ಐ ಗುರುತಿಲ್ಲದ ಕುಡಿವ ನೀರಿನ ಪ್ಯಾಕೆಟ್‌ಗಳನ್ನು ಜಿಲ್ಲೆಗೆ ಮಾರಾಟಕ್ಕೆ ಸಾಗಿಸಲಾಗುತ್ತಿದೆ. ಇದರ ತಡೆಗೆ ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲ. ಈ ವಿಚಾರ ಸೇರಿದಂತೆ ಜಿಲ್ಲೆಯಲ್ಲಿನ ಅಕ್ರಮ ಕುಡಿವ ನೀರು ಉತ್ಪಾದನೆಯ ಘಟಕಗಳ ಬಗ್ಗೆ ದಾಖಲೆ ಸಮೇತ ಹೆಚ್ಚುವರಿ ಜಿಲ್ಲಾಧಿಕಾರಿ ತಿಮ್ಮಪ್ಪ ಮತ್ತು ಜಿಲ್ಲಾ ಅಂಕಿತ ಅಧಿಕಾರಿ ನಾಗರಾಜ್ ಅವರ ಗಮನಕ್ಕೆ ತರಲಾಗಿದೆ. ಆದರೆ ಅವರು ಮೌನ ವಹಿಸಿದ್ದಾರೆ ಎಂದು ಟೀಕಿಸಿದರು.
ಅಕ್ರಮ ಹರ್ಬಲ್ ವಾಟರ್ ಘಟಕ?: ಗಿಡಮೂಲಿಕೆಗಳು ಜಿಲ್ಲೆಯಲ್ಲಿ ಲಭ್ಯವಿಲ್ಲದಿದ್ದರೂ ಹರ್ಬಲ್ ವಾಟರ್ ಘಟಕಗಳು ತಲೆಎತ್ತಿವೆ. ಆ ಮೂಲಕ ಮತ್ತೊಂದು ಅಕ್ರಮಕ್ಕೆ ಅವಕಾಶ ಮಾಡಿಕೊಡಲಾಗಿದೆ. ಲಹರಿ ಮತ್ತು ಲಕ್ಷ್ಮಿ ಅಕ್ವಾ ಎಂಬ ಹೆಸರಿನ ಎರಡು ಸಂಸ್ಥೆಗಳು ಹರ್ಬಲ್ ವಾಟರ್ ತಯಾರಿಕೆಯಲ್ಲಿ ತೊಡಗಿದ್ದು, ಚೆನ್ನೈ ಮೂಲದ ಇಂಟರ್ ನ್ಯಾಷನಲ್ ಹರ್ಬಲ್ ವಾಟರ್ ಫೌಂಡೇಷನ್ ಎಂಬ ಸಂಸ್ಥೆಯಿಂದ ಈ ಎರಡೂ ಸಂಸ್ಥೆಗಳು ಅನುಮತಿ ಪತ್ರ ಪಡೆದಿರುವುದಾಗಿ ಹೇಳುತ್ತಿವೆ. ಆದರೆ ಚ್ನೆನೈನ ಸಂಸ್ಥೆಗೆ ಪ್ರಮಾಣ ಪತ್ರ ನೀಡಲು ಯಾವುದೇ ಅಧಿಕಾರವಿಲ್ಲ ಎಂದು ದೂರಿದರು.
ಇಂಥ ಹರ್ಬಲ್ ವಾಟರ್ ತಯಾರಿಕೆ ಮತ್ತು ಮಾರಾಟಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ತಿಮ್ಮಪ್ಪ ಅವರು ಅವಕಾಶ ಮಾಡಿಕೊಟ್ಟಿದ್ದು, ನ್ಯಾಯಾಲಯದಲ್ಲಿ ಕುಡಿವ ನೀರಿನ ಘಟಕಗಳ ಅಕ್ರಮದ ಬಗ್ಗೆ ಪ್ರಕರಣ ವಿಚಾರಣೆ ಹಂತದಲ್ಲಿರುವಾಗಲೇ ಅಧಿಕಾರಿ ಅನುಮತಿಸಿದ್ದು ನ್ಯಾಯಾಂಗ ನಿಂದನೆಯಾಗಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನ್ಯಾಯಾಲಯದಲ್ಲಿ ಶೀಘ್ರವೇ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸುವುದಾಗಿ ಎಚ್ಚರಿಸಿದರು.