ಮಾಧ್ಯಮ ಪ್ರತಿನಿಧಿ ಮೇಲೆ ಹಲ್ಲೆ: ಆರೋಪಿಗಳ ಬಂಧನಕ್ಕೆ ಒತ್ತಾಯ
ಕನ್ನಡಪ್ರಭ ವಾರ್ತೆ ಸಿಂಧನೂರು ಮಾ.22
ರಾಯಚೂರಿನಲ್ಲಿ ಇನ್ ಚಾನೆಲ್ನ ವರದಿಗಾರ ಉಪೇಂದ್ರ ಕೇಶವರಾವ್ ಮೇಲೆ ನಡೆಸಿರುವ ಹಲ್ಲೆಯನ್ನು ಖಂಡಿಸಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶುಕ್ರವಾರ ತಹಸೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಅಂಗ ಪತ್ರಿಕಾರಂಗ ಸದಾ ಜನಪರ ಧ್ವನಿಯಾಗಿ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಕೆಲಸ ಮಾಡುವ ವರದಿಗಾರರ ಮೇಲೆ ವಿನಾಕಾರಣ ದೌರ್ಜನ್ಯ, ಹಲ್ಲೆ ಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಇಷ್ಟರ ನಡುವೆ ರಾಯಚೂರಿನಲ್ಲಿ ವರದಿ ಮಾಡಲು ತೆರಳಿದ್ದ ಉಪೇಂದ್ರ ಕೇಶವರಾವ್ ಮೇಲೆ ಆರೋಪಿಗಳು ತಮ್ಮ ಅಕ್ರಮಕೂಟದೊಂದಿಗೆ ದೈಹಿಕ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಬೈಕ್ ಕಸಿದುಕೊಂಡು ದೌರ್ಜನ್ಯವೆಸಗಿದ್ದಾರೆ.
ಆರೋಪಿಗಳ ಬಂಧನಕ್ಕೆ ಆಗ್ರಹ: ಅಕ್ರಮಗಳ ಕುರಿತು ವರದಿ ಮಾಡಲು ಹೋದವರ ಮೇಲೆ ಈ ಹಲ್ಲೆ ನಡೆಸಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಿ, ಪತ್ರಕರ್ತರಿಗೆ ನೈತಿಕ ಬೆಂಬಲ ನೀಡಬೇಕೆಂದು ಒತ್ತಾಯಿಸಲಾಯಿತು.
ಸಂಘದ ಅಧ್ಯಕ್ಷ ಪ್ರಹ್ಲಾದ್ ಗುಡಿ, ಪತ್ರಕರ್ತರಾದ ಡಿ.ಎಚ್. ಕಂಬಳಿ, ಶ್ಯಾಮಕುಮಾರ, ಅಶೋಕ ಬೆನ್ನೂರು, ಪ್ರ. ಕಾರ್ಯದರ್ಶಿ ಎಂ.ಭಾಸ್ಕರ್, ಖಜಾಂಚಿ ಚಂದ್ರಶೇಖರ ಬೆನ್ನೂರು, ಅಮರೇಶ ಅಲಬನೂರು, ಮಲ್ಲಿಕಾರ್ಜುನ ಚಿಲ್ಕರಾಗಿ, ಶೇಖರ ಯರದಿಹಾಳ, ಬಸವರಾಜ ಹಳ್ಳಿ, ಎಸ್.ಎಸ್.ಜಾಗೀರದಾರ, ಹನುಮೇಶ ಕಮ್ಮಾರ್, ಬಸವರಾಜ ಪೂಜಾರ, ಹುಸೇನಪ್ಪ, ಇಮಾಮ್, ಶ್ರೀನಿವಾಸ, ಬಸವರಾಜ ಚಿಂಚರಕಿ ಇದ್ದರು.