ಲಂಚ: ಜೆಸ್ಕಾಂ ಜೆಇಗೆ 7 ವರ್ಷ ಸಜೆ
ರಾಯಚೂರು: ನಗರದ ಪಂಚಮುಖಿ ಕಾಲೋನಿ ನಿವಾಸಿಯೊಬ್ಬರಿಂದ ವಿದ್ಯುತ್ ಮೀಟರ್ ಸಮಸ್ಯೆ ಪರಿಹರಿಸಲು ಲಂಚ ಪಡೆದ ಜೆಸ್ಕಾಂ ಕಿರಿಯ ಎಂಜಿನಿಯರ್ಗೆ ಇಲ್ಲಿನ ನ್ಯಾಯಾಲಯವು 7 ವರ್ಷ ಶಿಕ್ಷೆ ಮತ್ತು 25 ಸಾವಿರ ದಂಡ ವಿಧಿಸಿ ತೀರ್ಪಿತ್ತಿದೆ.
ನಗರದ ಪಂಚಮುಖಿ ಕಾಲನಿ ನಿವಾಸಿ ಭೀಮಯ್ಯ ಎಂಬುವವರ ಮನೆಯ ವಿದ್ಯುತ್ ಮೀಟರ್ ತಪಾಸಣೆ ನಡೆಸಿದ ಜೆಸ್ಕಾಂ ಕಿರಿಯ ಎಂಜಿನಿಯರ್ ತಿಮ್ಮಯ್ಯ ಎಂಬುವವರು ದಂಡ ವಿಧಿಸುವ ಬೆದರಿಕೆಯೊಡ್ಡಿದ್ದಾರೆ. ಆದರೆ ಈ ಪ್ರಕರಣ ಕೈಬಿಡಲು 3 ಸಾವಿರ ಲಂಚಕ್ಕೆ ಬೇಡಿಯಿರಿಸಿದ್ದರು. ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತರು ದಾಳಿ ಮಾಡಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಎಚ್. ಮಿಟ್ಟಲಕೋಡ್ ಅವರು ಆರೋಪಿಗೆ 7 ವರ್ಷ ಶಿಕ್ಷೆ ಮತ್ತು 25 ಸಾವಿರ ದಂಡ ವಿಧಿಸಿ ತೀರ್ಪಿತ್ತಿದ್ದಾರೆ. ಲೋಕಾಯುಕ್ತ ವಿಶೇಷ ಸಾರ್ವಜನಿಕ ಅಭಿಯೋಜಕ ಸಿದ್ದಲಿಂಗಪ್ಪ ಬೋರಡ್ಡಿ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು ಎಂದು ಜಿಲ್ಲಾ ಲೋಕಾಯುಕ್ತ ಎಸ್ಪಿ ಎಸ್.ಬಿ. ಪಾಟೀಲ್ ತಿಳಿಸಿದ್ದಾರೆ.