ಹೋಳಿ: ಮದ್ಯ ಮಾರಾಟ ನಿಷೇಧ
ರಾಯಚೂರು: ಜಿಲ್ಲಾದ್ಯಂತ ಆಚರಿಸುವ ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಮಾ. 26 ಮತ್ತು 27ರಂದು ಮದ್ಯ ಮಾರಾಟ ನಿಷೇಧಿಸಲಾಗಿದೆ. ಹೋಳಿ ಹಬ್ಬದ ಪ್ರಯುಕ್ತ ಜರುಗುವ ಕಾಮದಹನ ಹಾಗೂ ಬಣ್ಣ ಹಾಕುವ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಬರುವ ದೃಷ್ಟಿಯಿಂದ ಜಿಲ್ಲಾದ್ಯಂತ ಮಾ. 26ರ ಬೆಳಗಿನ 6 ರಿಂದ ಮಾ.27ರ ಮಧ್ಯರಾತ್ರಿವರೆಗೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಆದೇಶ ಹೊರಡಿಸಿದ್ದಾರೆ.
ಅಂಚೆ ಮತಕ್ಕೆ ಅವಕಾಶ
ರಾಯಚೂರು: ಜಿಲ್ಲೆಯ ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ವಂತ ಮತ ಅಥವಾ ಅಂಚೆ ಮತ ಪತ್ರಗಳ ಮೂಲಕ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಸಿಬ್ಬಂದಿಯು ತಮ್ಮ ಕಾರ್ಯ ವ್ಯಾಪ್ತಿಯ ತಹಸೀಲ್ದಾರ್ ಕಚೇರಿಯಿಂದ ಈ ನಿಟ್ಟಿನಲ್ಲಿ ನಿಗದಿತ ನಮೂನೆ ಪಡೆದು ತಮ್ಮ ಹೆಸರನ್ನು ಸಂಬಂಧಿಸಿದ ವಿಧಾನಸಭೆ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಸೇರಿಸಿಕೊಳ್ಳುವ ಅಥವಾ ವರ್ಗಾಯಿಸಿಕೊಳ್ಳಲು ಮಾ.25 ಕಡೆಯ ದಿನ ಎಂದು ಹೆಚ್ಚುವರಿ ಡಿಸಿ ತಿಮ್ಮಪ್ಪ ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ
ರಾಯಚೂರು: ಇಲ್ಲಿನ ಎಲ್ಬಿಎಸ್ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ನಗರಸಭೆಯ ನೂತನ ಸದಸ್ಯರಿಗೆ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ನಗರಸಭೆಗೆ 29ನೇ ವಾರ್ಡಿನಿಂದ ಆಯ್ಕೆಯಾದ ಖಾಜಾಬಿ ಅವರಿಗೆ ಈ ವೇಳೆ ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಗುರು ಎಂ.ಎಚ್. ನಾಯಕ್ ವಹಿಸಿದ್ದರು. ಪ್ರಾಥಮಿಕ ಶಾಲೆಯ ಮುಖ್ಯ ಗುರು ಮರಿಯಪ್ಪ ಗೌಡರು ಪಾಲ್ಗೊಂಡಿದ್ದರು. ಶಾಲೆಯ ಬೋಧಕ ವರ್ಗ, ವಿದ್ಯಾರ್ಥಿಗಳು ಇದ್ದರು.
ಇಂದು ಫಿಲ್ಮ್ ಸೊಸೈಟಿ ಉದ್ಘಾಟನೆ
ಗುಲ್ಬರ್ಗ: ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯಿಂದ ಮಾ.23ರಂದು ಸಂಜೆ 5.30ಕ್ಕೆ ಆವಿಷ್ಕಾರ ಫಿಲ್ಮ್ ಸೊಸೈಟಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಉದ್ಘಾಟಕರಾಗಿ ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ ಕಾಸರವಳ್ಳಿ ಆಗಮಿಸಲಿದ್ದು, ಪ್ರೊ. ಸಂಜಯ ಮಾಕಲ್, ಅಂಬಾರಾವ ಉಪಳಾಂವಕರ್ ಅತಿಥಿಗಳಾಗಿ ಆಗಮಿಸಲಿದ್ದಾರೆ. ಆವಿಷ್ಕಾರ ಜಿಲ್ಲಾಧ್ಯಕ್ಷ ವಿ.ಜಿ. ದೇಸಾಯಿ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಗಿರೀಶ ಕಾಸರವಳ್ಳಿ ನಿರ್ದೇಶನದ ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ಕನಸೆಂಬೋ ಕುದುರೆಯನೇರಿ ಪ್ರದರ್ಶಿಸಿ ಈ ಚಲನಚಿತ್ರ ಕುರಿತು ಕಾಸರವಳ್ಳಿ ಅವರ ಜತೆ ಸಂವಾದ ನಡೆಸಲಾಗುವುದು.