ಗಡಿಯಾಚೆ ಬಿಜೆಪಿ ರಾಜಕೀಯ ರಣತಂತ್ರ ಸಭೆ: ಮತಯಾಚನೆ
ಕ.ಪ್ರ. ವಾರ್ತೆರಾಯಚೂರುಮಾ.23
ಚುನಾವಣೆ ಆಯೋಗ ನೀತಿ ಸಂಹಿತೆಯ ಪಾಲನೆಗೆ ನಿಗಾಯಿರಿಸಿರುವುದು ನಿಯೋಜಿತ ಅಭ್ಯರ್ಥಿಗಳಿಗೆ ಸಂಕಷ್ಟ ತಂದಿದೆ. ಹೀಗಾಗಿ ಅಭ್ಯರ್ಥಿಗಳು ರಂಗೋಲಿ ಕೆಳಗೆ ತೂರಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದಾರೆ. ಅಂದರೆ ಜಿಲ್ಲೆಯ ಗಡಿಯಾಚೆಗಿರುವ ಆಂಧ್ರದಲ್ಲಿ ರಾಜಕೀಯ ಸಭೆ ನಡೆಸುವ ತಂತ್ರ ಅನುಸರಿಸುತ್ತಿರುವುದು ಗೊತ್ತಾಗಿದೆ.
ರಾಯಚೂರು ಗ್ರಾಮೀಣ ವಿಧಾನಸಭೆ ಕ್ಷೇತ್ರದ ಬಿಜೆಪಿ ಪಕ್ಷದ ನಿಯೋಜಿತ ಅಭ್ಯರ್ಥಿ ತಿಪ್ಪರಾಜು ಅವರು ಶನಿವಾರ ಮಂತ್ರಾಲಯದ ಕರ್ನಾಟಕ ಅತಿಥಿ ಗೃಹದಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರದ ಅಂಗನವಾಡಿ ನೌಕರರು, ಸ್ತ್ರೀಶಕ್ತಿ ಗುಂಪುಗಳ ಸದಸ್ಯರು ಹಾಗೂ ಗ್ರಾಪಂ ಗಣಕ ಯಂತ್ರ ಆಪರೇಟರ್‌ಗಳ ಸಭೆಯನ್ನು ನಡೆಸಿ ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿದ್ದಾರೆಂದು ಮೂಲಗಳು ತಿಳಿಸಿವೆ.
ಈಗಾಗಲೇ ನೀತಿ ಸಂಹಿತೆ ಜಾರಿಯಾಗಿದ್ದು, ಅದರ ಕಟ್ಟುನಿಟ್ಟಿನ ಪರಿಪಾಲನೆಗೆ ಜಿಲ್ಲಾಡಳಿತ ಬಿಗಿ ಕ್ರಮ ಕೈಗೊಂಡಿದೆ. ಹಾಗಾಗಿ ರಾಜಕೀಯ ನಾಯಕರಿಗೆ ಹಾಗೂ ನಿಯೋಜಿತ ಅಭ್ಯರ್ಥಿಗಳಿಗೆ ಬಹಿರಂಗವಾಗಿ ಸಭೆಗಳನ್ನು ನಡೆಸುವುದು ಕಷ್ಟಸಾಧ್ಯ. ಈ ಹಿನ್ನೆಲೆಯಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರವು ಆಂಧ್ರದ ಗಡಿಗೆ ಹೊಂದಿಕೊಂಡಿರುವುದರಿಂದ ಈ ಅನುಕೂಲ ಬಳಸಿ ಅಲ್ಲಿಯೇ ರಾಜಕೀಯ ಸಭೆ ನಡೆಸುವ ತಂತ್ರಕ್ಕೆ ಶರಣಾಗಿದ್ದಾರೆಂದು ಹೇಳಲಾಗಿದೆ.