ನಗರಾಭಿವೃದ್ಧಿಗೆ ರಾಜಕೀಯ ಪ್ರವೇಶ: ಸಿದ್ದಿಖಿ
ಕನ್ನಡಪ್ರಭ ವಾರ್ತೆರಾಯಚೂರುಮಾ.23
ಶೈಕ್ಷಣಿಕ, ಔದ್ಯೋಗಿಕ, ಸಾಮಾಜಿಕ ಹಾಗೂ ಮತ್ತಿತರೆ ಕ್ಷೇತ್ರಗಳಲ್ಲಿ ರಾಯಚೂರು ನಗರ ಕ್ಷೇತ್ರ ತೀರಾ ಹಿಂದುಳಿದಿದೆ. ಇದುವರೆಗೆ ಆಳಿದವರ ನಿರ್ಲಕ್ಷ್ಯಕ್ಕೆ ಜನತೆಯ ಸಮಸ್ಯೆಗಳು ಪರಿಹಾರ ಕಂಡಿಲ್ಲ. ಈ ಕಾರಣಕ್ಕೆ ರಾಜಕೀಯ ಪ್ರವೇಶ ತಮಗೆ ಅನಿವಾರ್ಯವಾಯಿತೆಂದು ಬಹುಜನ ಸಮಾಜ ಪಕ್ಷದ ರಾಯಚೂರು ನಗರ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಹಾರೇಸ್ ಸಿದ್ದಿಖಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದಲ್ಲಿ ಕಳೆದ ಅನೇಕ ದಶಕಗಳಿಂದ ನೂರಾರು ಸಮಸ್ಯೆಗಳಿದ್ದು ಅವುಗಳು ಪರಿಹಾರ ಕಂಡಿಲ್ಲ. ಗುಣಮಟ್ಟದ ಶಿಕ್ಷಣ, ನಿರುದ್ಯೋಗಿಗಳಿಗೆ ಉದ್ಯೋಗ ನೀಡಿಕೆ, ಆರೋಗ್ಯ ಕ್ಷೇತ್ರ ಸೇರಿದಂತೆ ಎಲ್ಲೆಡೆ ಕೊರತೆಗಳ ಸರಮಾಲೆಯೇ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ಹೈ.ಕ.ದಲ್ಲೇ ತೀರಾ ಹಿಂದುಳಿದ ಜಿಲ್ಲೆ: ಹೈದರಾಬಾದ್ ಕರ್ನಾಟಕದಲ್ಲಿಯೇ ರಾಯಚೂರು ನಗರ ತೀರಾ ಹಿಂದುಳಿದಿದೆ. ಬೀದರ್, ಗುಲ್ಬರ್ಗ ಜಿಲ್ಲಾ ಕೇಂದ್ರಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾಣಬಹುದು. ಆದರೆ ರಾಯಚೂರು ನಗರದಲ್ಲಿನ ಹದಗೆಟ್ಟ ರಸ್ತೆಗಳು, ಒಳಚರಂಡಿ ಅವ್ಯವಸ್ಥೆ, ಅನಾರೋಗ್ಯಕರ ಪರಿಸ್ಥಿತಿಯಲ್ಲಿ ಜೀವನ ನಡೆಸುವ ಬಡವರು ಹಾಗೂ ಕೊಳಚೆ ಪ್ರದೇಶಗಳ ನಿವಾಸಿಗಳ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನ ನಡೆದಿಲ್ಲ ಎಂದು ದೂರಿದರು.
ತಾವು ಕಳೆದ 8 ವರ್ಷಗಳಿಂದ ನಗರದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಅನೇಕ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದು, ಸಮಾಜದ ಆಗು-ಹೋಗುಗಳ ಮೇಲೆ ನಿರಂತರ ನಿಗಾಯಿರಿಸಿರುವುದಾಗಿ ತಿಳಿಸಿದ ಅವರು, ನಗರದ ಜನತೆ ಎದುರಿಸುತ್ತಿರುವ ಮೂಲ ಸೌಲಭ್ಯಗಳ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ರಾಜಕೀಯದತ್ತ ಒಲವೇಕೆ?: ನಗರದ ಅಭಿವೃದ್ಧಿಗೆ ತಮ್ಮದೇ ಆದ ಯೋಜನೆಗಳಿದ್ದು ಅವುಗಳ ಜಾರಿಗೆ ರಾಜಕೀಯವಾಗಿ ಅಧಿಕಾರ ಹೊಂದುವುದು ಅನಿವಾರ್ಯ. ಈ ಹಿನ್ನೆಲೆಯಲ್ಲಿ ರಾಜಕೀಯ ಪ್ರವೇಶ ಮಾಡಿದ್ದು, ನಗರದ ಜನತೆಯ ಬೇಕು ಬೇಡಗಳ ಬಗ್ಗೆ ಕಳೆದ ಎಂಟು ವರ್ಷಗಳಲ್ಲಿ ಸಮಗ್ರ ಅಧ್ಯಯನ ನಡೆಸಿದ್ದಾಗಿ ತಿಳಿಸಿದರು.
ನಗರದಲ್ಲಿ ಎರಡು ವೈದ್ಯಕೀಯ ಕಾಲೇಜುಗಳಿದ್ದರೂ ಅವುಗಳಲ್ಲಿ ಸ್ಥಳೀಯ ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆ. ಕಳೆದ 10 ತಿಂಗಳಿಂದ ಒಪೆಕ್ ಆಸ್ಪತ್ರೆ ಮುಚ್ಚಿದ್ದರೂ ಅದನ್ನು ಪುನಾರಂಭಿಸುವ ಕಾರ್ಯ ಸರ್ಕಾರ ಮಾಡಿಲ್ಲ. ಹಾಗೆಯೇ ವೈದ್ಯರನ್ನು ಪ್ರತಿ ಬಾರಿ ಕರೆತರುವುದು ಸರಿಯಾದ ಕ್ರಮವಲ್ಲ. ಬದಲಿಗೆ ಸ್ಥಳೀಯವಾಗಿ ಎಲ್ಲ ರೀತಿಯ ಚಿಕಿತ್ಸೆ ದೊರೆಯುವಂತೆ ಮಾಡುವುದು ತಮ್ಮ ಉದ್ದೇಶ ಎಂದರು.
ಸಮಾನ ಮನಸ್ಕರ ಸಮಿತಿ: ನಗರದ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಎಲ್ಲ ಜಾತಿ, ಜನಾಂಗದವರಿರುವ ಸಮಾನ ಮನಸ್ಕರ ಸಮಿತಿ ರಚಿಸಲಾಗುತ್ತದೆ. ಆ ಮೂಲಕ ಅಭಿವೃದ್ಧಿಗೆ ಪೂರಕ ವೇದಿಕೆ ಸಜ್ಜುಗೊಳಿಸಲಾಗುತ್ತದೆ. ಈ ನಿಟ್ಟಿನಲ್ಲಿ ಜನರ ಅಭಿಪ್ರಾಯ ಸಂಗ್ರಹಣೆ ಕಾರ್ಯವನ್ನು ಈಗಾಗಲೇ ತಾವು ಈ ಹಿಂದೆಯೇ ಕೈಗೊಂಡಿದ್ದಾಗಿ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಪ್ರಮುಖ ವೈ.ನರಸಪ್ಪ, ಜಿಲ್ಲೆಯಲ್ಲಿ ಸದ್ಯ ರಾಯಚೂರು ನಗರ ಕ್ಷೇತ್ರದಲ್ಲಿ ಅಭ್ಯರ್ಥಿಯ ಘೋಷಣೆಯಾಗಿದ್ದು, ಇನ್ನುಳಿದ 6 ಕ್ಷೇತ್ರಗಳಲ್ಲಿಯೂ ಬಿಎಸ್ಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತದೆ. ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲಿ ಬಿಎಸ್ಪಿ ಪಕ್ಷ ಸ್ಪರ್ಧಿಸಲಿದೆ ಎಂದು ತಿಳಿಸಿದರು.
ಖಂಡನೆ: ನಗರದಲ್ಲಿ ಇತ್ತೀಚೆಗೆ ಪತ್ರಕರ್ತ ಉಪೇಂದ್ರ ಕೇಶವರಾವ್ ಮೇಲೆ ದುಷ್ಕರ್ಮಿಗಳು ನಡೆಸಿದ ಹಲ್ಲೆ ಘಟನೆಯನ್ನು ಬಿಎಸ್ಪಿ ಪಕ್ಷವು ಖಂಡಿಸುತ್ತದೆ. ಪತ್ರಿಕಾ ರಂಗದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಸೂಕ್ತ ಬಿಗಿಭದ್ರತೆ ಒದಗಿಸುವ ಕಾರ್ಯವನ್ನು ಆಡಳಿತ ಮಾಡಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವೈ.ನರಸಪ್ಪ ಆಗ್ರಹಿಸಿದರು.