ಸಂಕ್ಷಿಪ್ತ ಸುದ್ದಿ
ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಸಿಂಧನೂರು: ಸ್ಥಳೀಯ ಡೆಫೋಡಿಲ್ ಹಾಗೂ ದುದ್ದುಪುಡಿ ಕನ್ನಡ ಮತ್ತು ತೆಲುಗು ಮಾಧ್ಯಮ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯನ್ನು ಉಲ್ಲಂಘಿಸಲಾಗಿದ್ದು ಈ ಸಂಸ್ಥೆಗಳ ಮಾನ್ಯತೆ ರದ್ದುಗೊಳಿಸುವಂತೆ ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ಮತ್ತು ಜೈ ಕರ್ನಾಟಕ ರಕ್ಷಣಾ ವೇದಿಕೆಯಿಂದ ಜಂಟಿಯಾಗಿ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಎರಡು ಶಾಲೆಗಳಲ್ಲಿ ಆರ್ಟಿಇ ಕಾಯ್ದೆ ಪ್ರಕಾರ ಮಕ್ಕಳ ನೋಂದಣಿ ಮಾಡಿಕೊಳ್ಳುತ್ತಿಲ್ಲ. ಶಾಲೆಗಳು ಆರ್ಟಿಇ ಕಾಯ್ದೆಗೆ ಒಳಪಟ್ಟಿದ್ದರೂ ಅಲ್ಪಸಂಖ್ಯಾತರ ಶಾಲೆಗಳೆಂದು ಹೇಳಿ ಕಾಯ್ದೆ ಉಲ್ಲಂಘಿಸುತ್ತಿದ್ದಾರೆ. ಈ ಕುರಿತಾಗಿ ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೇಲಾಧಿಕಾರಿಗಳಿಗೆ ಕ್ರಮಕ್ಕೆ ಒತ್ತಾಯಿಸಿ ಶಿಫಾರಸ್ಸು ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಉಚಿತ ಶಿಕ್ಷಣ ಕಾಯ್ದೆಯನ್ನು ಉಲ್ಲಂಘಿಸುತ್ತಿರುವ ಇಂತಹ ಶಾಲೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಬಡಮಕ್ಕಳಿಗೆ ಶಿಕ್ಷಣ ದೊರಕುವಂತೆ ಮಾಡಬೇಕೆಂದು ಒತ್ತಾಯಿಸಲಾಯಿತು. ಜೈಕರವೇ ತಾಲೂಕಾಧ್ಯಕ್ಷ ಅಮರೇಶ ಗಿರಿಜಾಲಿ, ಜಯ ಕರ್ನಾಟಕ ತಾಲೂಕಾಧ್ಯಕ್ಷ ಬಸವರಾಜ ಬಡಿಗೇರ, ಉಲ್ಲೇಶ, ನರಸಪ್ಪ, ನಾಗೇಶ ಮರಾಠಿ, ಎಂ.ಎಸ್. ಮುತ್ತು, ಆಲಂಬಾಷಾ ಗೋಮರ್ಸಿ, ಕೆ.ಹನುಮಂತ, ಮುನ್ನಾ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ಕರವೀರಪ್ರಭುಗೆ ಪ್ರಶಸ್ತಿ; ಸಂತಸ
ಸಿಂಧನೂರು: ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಹಾಗೂ ವೈದ್ಯಕೀಯ ಕ್ಷೇತ್ರ ಹಿರಿಯ ಸಾಹಿತಿ ಡಾ. ಕರವೀರಪ್ರಭು ಕ್ಯಾಲಕೊಂಡ ಅವರು ಬರೆದ ಎರಡು ವೈದ್ಯಕೀಯ ಪುಸ್ತಕಗಳಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಶ್ರೇಷ್ಠ ಲೇಖಕ ಪ್ರಶಸ್ತಿ ನೀಡಿರುವುದನ್ನು ಹಿರಿಯ ಸಾಹಿತಿ, ಸಂಶೋಧಕ ಶಾಶ್ವತಸ್ವಾಮಿ ಮುಕ್ಕುಂದಿಮಠ ಅಭಿನಂದಿಸಿ, ಸಂತಸ ವ್ಯಕ್ತಪಡಿಸಿದ್ದಾರೆ. ಅವರು ಈ ಕುರಿತು ಪತ್ರಿಕಾ ಹೇಳಿಕೆ ನೀಡಿ, ವೈದ್ಯಕೀಯ ವಿಷಯಗಳ ಬಗ್ಗೆ ಕನ್ನಡದಲ್ಲಿ ಬರೆಯುವವರು ಅತೀ ವಿರಳ. ಆದರೂ ಕ್ಯಾಲಕೊಂಡ ಅವರು ತಮ್ಮ ನಿತ್ಯದ ವೈದ್ಯಕೀಯ ಕಾಯಕದ ಜೊತೆಗೆ ಕಳೆದ 30 ವರ್ಷಗಳಿಂದ ಸಾಹಿತ್ಯ ಕೃಷಿ ಮಾಡುತ್ತಿರುವುದು ಅವರ ಆಸಕ್ತಿಗೆ ಕಾರಣವಾಗಿದೆ. ವೈದ್ಯಕೀಯ ಕ್ಷೇತ್ರವಲ್ಲದೆ ಇನ್ನು ಹಲವಾರು ಪ್ರಕಾರಗಳಲ್ಲಿಯೂ ಪುಸ್ತಕಗಳನ್ನು ಬರೆದಿದ್ದಾರೆ. ಬಿಜಾಪುರ, ಬಾಗಲಕೋಟೆ, ಬಾದಾಮಿಯ ಪರಿಸರದ ಸಾಹಿತ್ಯ, ಸಂಸ್ಕೃತಿ ಮತ್ತು ಕಲೆಗಳು ಅವರ ಕೃತಿಗಳಲ್ಲಿ ಅಭಿವ್ಯಕ್ತಗೊಂಡಿವೆ. ವೈದ್ಯಕೀಯ ವೃತ್ತಿ ಮಧ್ಯದಲ್ಲಿಯೂ ಬರೆಯುವ ಹವ್ಯಾಸವನ್ನು ಹೊಂದಿರುವ ಅಪರೂಪದ ಸಾಹಿತಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಉಪಯುಕ್ತ ವೈದ್ಯಕೀಯ ಪುಸ್ತಕಗಳು ಹೊರಬರಲಿ ಎಂದು ಹಾರೈಸಿದ್ದಾರೆ.