ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

20 ವರ್ಷದಲ್ಲಿ ಜಲಕ್ಷಾಮ: ಮಂಜುನಾಥ ಆತಂಕ

Rashmi Kasaragodu
Updated On : 25 Mar 2013, 11:36 am

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಮಾ.24
ನಾವು ನೀರನ್ನು ದುರುಪಯೋಗ, ಪೋಲು ಹಾಗೂ ಮಲೀನಗೊಳಿಸುತ್ತಿದ್ದೇವೆ. ನೀರಿನ ಕೊರತೆ, ಅತಿ ಬಳಕೆ ಹಾಗೂ ಅಸಮ ಹಂಚಿಕೆಗಳು ದೇಶದಲ್ಲಿ ಜಲ ಬಳಕೆ ಸಂಬಂಧಿತ ಸಮಸ್ಯೆಗಳಿಗೆ ಕಾರಣ ಎಂದು ಚಂದ್ರಕಾಂತ ಪಾಟೀಲ್ ಕಾಲೇಜಿನ ಪ್ರಾಚಾರ್ಯ ಮಂಜುನಾಥ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಶರಣಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಮುಂದಿನ 20 ವರ್ಷದಲ್ಲಿ ಜಲಕ್ಷಾಮ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಖಜಾಂಚಿ ಗಿರೀಶ ಕಡ್ಲೆವಾಡ ಮಾತನಾಡಿ, ನೀರಿನ ಸಂರಕ್ಷಣೆ ಸಂಬಂಧಿಸಿದ ಪ್ರಯತ್ನಗಳನ್ನು ಹೆಚ್ಚಿಸಬೇಕಾದ ಅವಶ್ಯಕತೆ ಇದೆ. ಮಳೆ ನೀರಿನ ಕೊಯ್ಲು ಮಾಡುವತ್ತ ಹಾಗೂ ಜಲಾನಯನಗಳನ್ನು ನಿರ್ಮಿಸುತ್ತ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ತುರ್ತು ಅಗತ್ಯವಿದೆ ಎಂದರು.
ಪ್ರಾದೇಶಿಕ ನಿರ್ದೇಶಕ ಡಾ. ಸಂಗಮೇಶ ಹಿರೇಮಠ ಮಾತನಾಡಿ, ಭಾರತದಲ್ಲಿ ವರ್ಷಕ್ಕೆ ಮಳೆ ಮೂಲಕ ಸಿಗುವ ಒಟ್ಟು ನೀರಿನ ಶೇ.10ರಷ್ಟು ಮಾತ್ರ ಬಳಕೆ ಮಾಡುತ್ತಿದ್ದೇವೆ.  ಈ ಉಪಯೋಗ ಇತರ ದೇಶಗಳಿಗೆ ಹೋಲಿಸಿದಾಗ ಬಹಳ ಕಡಿಮೆ. ನಾವು ನೀರನ್ನು ಹೆಚ್ಚು ಹೆಚ್ಚು ಸಂಗ್ರಹಿಸಿ ಶೇಖರಿಸಿಟ್ಟುಕೊಂಡು ಬಳಕೆ ಮಾಡುವುದನ್ನು ಕಲಿತುಕೊಳ್ಳಬೇಕಾಗಿದೆ ಎಂದರು.
ಶರಣಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಶಾಂತಪ್ಪ ಎಸ್ ಅಧ್ಯಕ್ಷತೆ ವಹಿಸಿದ್ದರು. ಸಾವಿತ್ರಿ ಬಿ. ಸ್ವಾಗತಿಸಿದರು. ವಿಷ್ಣುಕಾಂತ ಮೈಲಾರೆ ಕಾರ್ಯಕ್ರಮ ನಿರೂಪಿಸಿದರು. ಬಸವರಾಜ ಏ. ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement