ಅಂತರಂಗ ಬಹಿರಂಗ ಒಂದಾಗಲಿ: ಜತ್ತಿ
ಶಹಾಪುರ: ಶಿವನನ್ನು ಒಲಿಸಿಕೊಳ್ಳಬೇಕಾದರೆ ಲಿಂಗಪೂಜೆಯ ನಿಷ್ಠೆ, ಅಂತರಂಗ ಬಹಿಂರಂಗ ಒಂದಾಗಬೇಕು ಎಂದು ಬಸವ ಸಮಿತಿಯ ರಾಜ್ಯಾಧ್ಯಕ್ಷ ಅರವಿಂದ ಜತ್ತಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಸವ ಸಮಿತಿ, ರಾಜ್ಯದ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಬಸವ ಜಯಂತಿ ಶತಮಾನೋತ್ಸವ ನಿಮಿತ್ತ ಜಿಲ್ಲೆಯಿಂದ ಜಿಲ್ಲೆಗೆ ಶರಣ ಸಂಸ್ಕೃತಿ ಮಹಾ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಬಸವ ವಿಚಾರಧಾರೆ ಪ್ರಚಾರ: 1913ರಲ್ಲಿ ಹರ್ಡೇಕರ್ ಮಂಜಪ್ಪನವರ ನೇತೃತ್ವದಲ್ಲಿ ದಾವಣಗೆರೆಯಲ್ಲಿ ಬಸವ ಜಯಂತಿಯನ್ನು ಮೊಟ್ಟ ಮೊದಲು ಆಚರಿಸಲಾಯಿತು. ಈಗ 2013 ಬಸವ ಜಯಂತಿಗೆ ಶತಮಾನೋತ್ಸವದ ಸಂಭ್ರಮ. ಈ ಯಾತ್ರೆಯಿಂದ ಜನರಲ್ಲಿ ಶರಣ ಸಂಸ್ಕೃತಿ ಪ್ರಜ್ಞೆಯನ್ನು ಮೂಡಿಸುವುದರ ಜೊತೆಗೆ ರಾಷ್ಟ್ರ ಚಾರಿತ್ರ್ಯ ಶ್ರೀಮಂತಗೊಳಿಸುವುದು. ನೆರೆ ರಾಜ್ಯಗಳಾದ ಕೇರಳ, ತಮಿಳುನಾಡಿನಲ್ಲಿ ಸಾವಿರಾರು ಕಿ.ಮೀ. ದೂರವನ್ನು ಕ್ರಮಿಸಿ ಬಸವಣ್ಣನವರ ಶರಣ ಸಂಸ್ಕೃತಿಯ ವಿಚಾರಗಳನ್ನು ನಾಡಿನ ಉದ್ದಗಲಕ್ಕೂ ಪರಿಚಯಿಸಿ ಹೊರ ದೇಶಗಳಲ್ಲಿಯೂ ಈ ವಿಚಾರಗಳು ಮಂಥನಗೊಂಡು ಆಚರಿಸಲಾಗುತ್ತಿದೆ ಎಂದರು.
ವಚನ ಸಾಹಿತ್ಯವನ್ನು ಫ.ಗು. ಹಳಕಟ್ಟಿ ಅವರು ಮೊಟ್ಟಮೊದಲು ಜನರ ಬಳಿಗೆ ಪರಿಚಯಿಸಿದರು. ಬಸವ ಜಯಂತಿಯ ದಿನದಂದು ನಂದಿಯನ್ನು ಪೂಜಿಸುವ ಪರಂಪರೆ ದೂರಾಗುತ್ತ ಈಗ ಬಸವಣ್ಣನವರ ಶರಣ ಸಂಸ್ಕೃತಿ ವಚನ ಸಾಹಿತ್ಯದ ಪರಿಚಯ ಬಸವ ಭಕ್ತರಿಗೆ ಆಗಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಫಕೀರೇಶ್ವರ ಮಠದ ಗುರುಪಾದ ಸ್ವಾಮೀಜಿ ಮಾತನಾಡಿದರು. ಕುಂಬಾರಗೇರಿ ಹಿರೇಮಠದ ಸೂಗೂರು ದೇವರು, ತಾಲೂಕು ವೀರಶೈವ ಮುಖಂಡರಾದ ಚಂದ್ರಶೇಖರ ಆರಬೋಳ, ಸಿದ್ದಲಿಂಗಪ್ಪ ಆನೇಗುಂದಿ, ಡಾ. ಚಂದ್ರಶೇಖರ ಸುಬೇದಾರ, ಬಸವರಾಜ ಹಿರೇಮಠ, ಸುರೇಂದ್ರ ಪಾಟೀಲ ಮಡ್ನಾಳ, ಡಾ. ಗಂಗಮ್ಮ ಬೀಡಿ, ವಿಶ್ವರಾಧ್ಯ ಸತ್ಯಂಪೇಟೆ, ಹೊನ್ನಪ್ಪ ಹೊಸೂರು, ಗುರುಶಾಂತಯ್ಯ ಗುಂಬಳಾಪುರಮಠ, ಪರ್ವತರಡ್ಡಿ ಬೆಂಡೆಬೆಂಬಳೆ, ಸೂಗಪ್ಪ ಚಟ್ರಕಿ, ಯುವ ವೀರಶೈವ ಘಟಕದ ಅಧ್ಯಕ್ಷ ಗುರು ಕಾಮಾ, ಅರವಿಂದ ಉಪ್ಪಿನ, ಬಸವರಾಜ ಚೌಧರಿ, ರಾಜಶೇಖರ ಗಂಧದಮಠ, ಮಹೇಶ ಗಂವಾರ, ಶಿವಕುಮಾರ ಮುಂಡಾಸ, ನಾಗರಾಜ ತುಂಬಗಿ, ಮಲ್ಲು ಮಡ್ನಾಳ, ಮಂಜು ಕೊದ್ದಡ್ಡಿ, ಸುಭಾಷ ಪತ್ತಾರ, ಗೂಳಪ್ಪ ಬಾಳಿ, ಚಂದ್ರಶೇಖರ ಕೊಲ್ಲೂರ, ನೂರಾರು ಜನ ಬಸವಾಭಿಮಾನಿಗಳು ಭಾಗವಹಿಸಿದ್ದರು.
ಶಾರದಾ ಜತ್ತಿ ವಚನಗಳನ್ನು ಹೇಳಿದರು. ಸುಧೀರ ಚಿಂಚೋಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಶತಮಾನೋತ್ಸವದ ಶರಣ ಸಂಸ್ಕೃತಿ ಮಹಾಯಾತ್ರೆಯ ಮೆರವಣಿಗೆ ಬಸವೇಶ್ವರ ವೃತ್ತದಿಂದ ಮಾರುತಿ ರಸ್ತೆ, ಮೋಚಿಗಡ್ಡಾ, ಗಾಂಧಿಚೌಕ್ದಿಂದ ಫಕೀರೇಶ್ವರ ಮಠಕ್ಕೆ ಆಗಮಿಸಿತು.