ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಆಧಾರ್ ವಿತರಣೆಗೆ ಕೊನೆಯ ದಿನ ಇಲ್ಲ: ಗೋರಕಲ್

Rashmi Kasaragodu
Updated On : 25 Mar 2013, 11:27 am

ಸಿಂಧನೂರು: ಆಧಾರ್ ಕಾರ್ಡ್ ಪಡೆಯಲು ಯಾವುದೇ ಕೊನೆಯ ದಿನಾಂಕವನ್ನು ನಿಗದಿಪಡಿಸಿಲ್ಲ, ನಿರಂತರವಾಗಿ ಈ ಪ್ರಕ್ರಿಯೆ ಮುಂದುವರಿಯುತ್ತದೆ. ಫಲಾನುಭವಿಗಳು ಅವಸರದಿಂದ ರಾತ್ರೋರಾತ್ರಿ ಸರದಿಗೆ ನಿಲ್ಲುವ ಅಗತ್ಯವಿಲ್ಲ ಎಂದು ಆಧಾರ್ ಕಾರ್ಡ್ ಸಂಯೋಜಕ ಮಲ್ಲಯ್ಯ ಗೋರಕಲ್ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಗ 12 ಕಂಪ್ಯೂಟರ್ಗಳನ್ನು ಆಧಾರ್ ಕಾರ್ಡ್ಗಾಗಿ ಬಳಸಲಾಗುತ್ತಿದ್ದು, ಪ್ರತಿದಿನ 300 ಜನರನ್ನು ಆಧಾರ್ ಕಾರ್ಡ್ ಫಲಾನುಭವಿಗಳಾಗಿ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿ ವಾರ್ಡ್ನಲ್ಲಿಯೂ ಕೌಂಟರ್ ತೆರೆಯುವ ಉದ್ದೇಶವಿದೆ. ಗ್ರಾಮಾಂತರ ಪ್ರದೇಶದ ಜನರು ಸಿಂಧನೂರಿಗೆ ಬಂದು ಕಾರ್ಡ್ ಪಡೆಯುವ ಅಗತ್ಯ ಇಲ್ಲ. ಗ್ರಾಪಂ ಮಟ್ಟದಲ್ಲಿ ಕೌಂಟರ್ ತೆರೆದು ಕಾರ್ಡ್ಗಳನ್ನು ವಿತರಿಸುತ್ತೇವೆ ಎಂದರು.
ಹಳ್ಳಿಗಳಲ್ಲಿರುವ ಶಾಲಾ- ಕಾಲೇಜುಗಳಿಗೆ ತಾವೇ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಿ ಆಧಾರ್ ಕಾರ್ಡ್ ಕೊಡುವುದಾಗಿ ತಿಳಿಸಿದ ಅವರು, ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಪ್ರಸ್ತುತ ರೈತ ಭವನದಲ್ಲಿರುವ ಕೇಂದ್ರಕ್ಕೆ ಬರುವ ಅಗತ್ಯವಿಲ್ಲ ಎಂದು ಮಲ್ಲಯ್ಯ ಗೋರಕಲ್ ವಿವರಿಸಿದರು.
ತಾಲೂಕಿನ ಎಲ್ಲ ಜನರಿಗೂ ಆಧಾರ್ ಕಾರ್ಡ್ಗಳನ್ನು ಕೊಡಲಾಗುತ್ತಿದೆ. ಅವಸರ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ರಾತ್ರಿಯಿಡೀ ಕೇಂದ್ರದ ಮುಂದೆ ಮಲಗುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಉಪಯೋಗಗಳು: ಭಾಗ್ಯಲಕ್ಷ್ಮೀ ಬಾಂಡ್ ಪಡೆಯಲು ಆಧಾರ್ ಕಾರ್ಡ್ ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಇರತಕ್ಕದ್ದು. ಪಡಿತರ ಚೀಟಿ ಪಡೆಯಲು ಸಹ ಈ ಕಾರ್ಡ್ನ ನಂಬರ್ ನಮೂದಿಸಬೇಕಾಗುತ್ತದೆ. ವೃದ್ಧಾಪ್ಯ ವೇತನ ಪಡೆಯುವ ವ್ಯಕ್ತಿಗಳು ಆಧಾರ್ ಕಾರ್ಡ್ನ್ನು ಹೊಂದಿರಬೇಕಾಗುತ್ತದೆ. ಗ್ಯಾಸ್ ಸಿಲಿಂಡರ್ ಸೌಲಭ್ಯ ಪಡೆಯುವ ವ್ಯಕ್ತಿಗಳಿಗೆ, ಸ್ಕಾಲರ್ಶಿಪ್ ಪಡೆಯುವ ವಿದ್ಯಾರ್ಥಿಗಳಿಗೆ ಅಲ್ಲದೆ ಮತ್ತಿತರ ಸರ್ಕಾರಿ ಸೌಲಭ್ಯಕ್ಕೂ ಆಧಾರ್ ಕಾರ್ಡ್ ನಂಬರ್ ಅವಶ್ಯವಿರುತ್ತದೆ ಎಂದು ಅವರು ತಿಳಿಸಿದರು.
ಈಗ 12 ಜನರು ಮಾತ್ರ ಕಂಪ್ಯೂಟರ್ ಆಪರೇಟರ್ಗಳಿದ್ದು ದೆಹಲಿಯಲ್ಲಿ ತರಬೇತಿ ಪಡೆದ ಇನ್ನೂ 40 ಜನ ಕಂಪ್ಯೂಟರ್ ಆಪರೇಟರ್ಗಳನ್ನು ತುಂಬಿಕೊಳ್ಳಲಾಗುತ್ತಿದೆ. ತದನಂತರ ಸಾರ್ವಜನಿಕರಿಗೆ ಹೆಚ್ಚಿನ ರೀತಿಯಲ್ಲಿ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ಮಲ್ಲಯ್ಯ ವಿವರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement