ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಕೈ' ಕೋಟೆ ಲಗ್ಗೆಗೆ ಕಸರತ್ತು

Rashmi Kasaragodu
Updated On : 25 Mar 2013, 11:31 am

ನಾರಾಯಣ ಹೆಗಡೆ
ಕನ್ನಡಪ್ರಭ ವಾರ್ತೆ  ಯಾದಗಿರಿ  ಮಾ.24
ಕಾಂಗ್ರೆಸ್ ಭದ್ರಕೋಟೆ ಹಾಗೂ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸತತ 8 ಬಾರಿ ಆಯ್ಕೆ ಮಾಡಿ ಕಳುಹಿಸಿದ ಗುರುಮಠಕಲ್ ವಿಧಾನಸಭಾ ಕ್ಷೇತ್ರಕ್ಕೆ ಲಗ್ಗೆ ಇಡಲು ಈ ಬಾರಿ ಎಲ್ಲ ಪಕ್ಷಗಳೂ ಸಜ್ಜಾಗಿವೆ. ಕೈ ಕೋಟೆ ವಶಪಡಿಸಿಕೊಳ್ಳಲು ತೀವ್ರ ಕಸರತ್ತು ನಡೆಸುತ್ತಿವೆ.
ಶಾಸಕ ಬಾಬುರಾವ ಚಿಂಚನಸೂರ ಸದ್ಯ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಇದು ಖರ್ಗೆ ಅವರ ತವರು ಕ್ಷೇತ್ರ ಎಂದೇ ಜನಜನಿತ. 2008ರ ಚುನಾವಣೆಯಲ್ಲಿ ಮೀಸಲಾತಿ ಬದಲಾಗಿ ಖರ್ಗೆ ಕ್ಷೇತ್ರ ಬದಲಾಯಿಸಿದಾಗ ಬಾಬುರಾವ ಚಿಂಚನಸೂರ ಗುರುಮಠಕಲ್ನಿಂದ ಸ್ಪರ್ಧಿಸಿ ಆಯ್ಕೆಯಾದರು. ಆದರೆ ಕ್ಷೇತ್ರದಲ್ಲಿ ಈ ಬಾರಿ ಸ್ವಪಕ್ಷದವರಿಂದಲೇ ಅಪಸ್ವರ ಎದುರಿಸುತ್ತಿದ್ದಾರೆ. ಜತೆಗೆ ವಿವಿಧ ಸಮಾಜದವರೂ ಚಿಂಚನಸೂರ ಮೇಲೆ ಮುನಿಸಿಕೊಂಡಿದ್ದಾರೆ. ಇದು ಇತರ ಪಕ್ಷಗಳ ಅಭ್ಯರ್ಥಿಗಳಿಗೆ ಗೆಲ್ಲುವ ಕನಸು ಕಾಣುವಂತೆ ಮಾಡಿದೆ.
ಮುದ್ನಾಳಗೆ ಕೆಜೆಪಿ ಟಿಕೆಟ್: ಗುರುಮಠಕಲ್ ಕ್ಷೇತ್ರದ ಬಿಜೆಪಿ ಮುಖಂಡರಾಗಿದ್ದ ವೆಂಕಟರೆಡ್ಡಿ ಮುದ್ನಾಳ ಈ ಬಾರಿ ಕೆಜೆಪಿಗೆ ಸೇರಿದ್ದು, ಅವರಿಗೆ ಪಕ್ಷ ಟಿಕೆಟ್ ಘೋಷಿಸಿದೆ. ಕಳೆದ ಬಾರಿ ಸ್ವತಂತ್ರವಾಗಿ ಸ್ಪರ್ಧಿಸಿ ಗಣನೀಯ ಪ್ರಮಾಣದಲ್ಲಿ ಮತ ಗಳಿಸಿ ಸೋತಿದ್ದರು. ಆದ್ದರಿಂದ ಈ ಬಾರಿ ಶತಾಯ ಗತಾಯ ಗೆಲ್ಲುವ ಛಲದೊಂದಿಗೆ ಮುದ್ನಾಳ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ.
ಅಲ್ಲದೇ ಚಿಂಚನಸೂರ ವಿರೋಧಿ ಅಲೆಯನ್ನು ತಮ್ಮ ಕಡೆ ಮಾಡಿಕೊಳ್ಳುವ ಯತ್ನದಲ್ಲಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಸಾಂಪ್ರದಾಯಿಕ ಮತ ಬ್ಯಾಂಕ್ ಇರುವುದರಿಂದ ಹೊಸ ಪಕ್ಷ ಕೆಜೆಪಿಗೆ ಗೆಲವು ಅಷ್ಟು ಸುಲಭವಲ್ಲ ಎನ್ನಲಾಗುತ್ತಿದೆ. ಆದರೂ ಮುದ್ನಾಳ ಮತದಾರರನ್ನು ಓಲೈಸಿಕೊಳ್ಳಲು ಯಾವ ರೀತಿಯ ಮೋಡಿ ಮಾಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಮಟ್ಟಣ್ಣವರ ಬೆಸ್ಟಣ್ಣ: ವೆಂಕಟರೆಡ್ಡಿ ಮುದ್ನಾಳ ಅವರು ಬಿಜೆಪಿ ತ್ಯಜಿಸಿದ್ದರಿಂದ ಕ್ಷೇತ್ರದಿಂದ ಸ್ಪರ್ಧಿಸಲು ಉತ್ಸುಕರಾಗಿದ್ದ ಗಿರೀಶ ಮಟ್ಟಣ್ಣವರಗೆ ಟಿಕೆಟ್ ವಿಷಯದಲ್ಲಿದ್ದು ಅಡ್ಡಿ, ಆತಂಕ ದೂರವಾಗಿದೆ. ಆದ್ದರಿಂದ ಅವರು ಟಿಕೆಟ್ ಪಕ್ಕಾ ಮಾಡಿಕೊಂಡಿದ್ದಾರೆ. ಕೋಲಿ ಸಮಾಜದ ಮತದ ಮೇಲೆ ಕಣ್ಣಿಟ್ಟು ಕಳೆದ ಮೂರು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಈಚೆಗೆ ನಡೆದ ಪಪಂ ಚುನಾವಣೆಯಲ್ಲಿ 4 ವಾರ್ಡುಗಳಲ್ಲಿ ಗೆದ್ದು ಬಿಜೆಪಿ ಇರುವಿಕೆಯನ್ನು ಸಾಬೀತುಪಡಿಸಿದ್ದಾರೆ. ಚಿಂಚನಸೂರ ವಿರೋಧಿ ಅಲೆಯ ಲಾಭ ಪಡೆಯಲು ಶ್ರಮಿಸುತ್ತಿದ್ದಾರೆ.
ನನಗೂ ಒಂದು ಅವಕಾಶ ಕೊಡಿ: ಜೆಡಿಎಸ್ ಜಿಲ್ಲಾಧ್ಯಕ್ಷ ನಾಗನಗೌಡ ಕಂದಕೂರ ಅವರಿಗೆ ಗುರುಮಠಕಲ್ ಕ್ಷೇತ್ರದ ಟಿಕೆಟ್ ನಿಶ್ಚಿತ. ಕಳೆದ ಚುನಾವಣೆಯಲ್ಲೂ ಸ್ಪರ್ಧಿಸಿ ಸೋತಿದ್ದರು. ಈ ಬಾರಿಯೂ ಆರಂಭದಿಂದಲೇ ಸಂಘಟನೆ ಮಾಡಿ ಗೆಲ್ಲುವ ಕನಸು ಕಾಣುತ್ತಿದ್ದಾರೆ. ತಮ್ಮನ್ನು ಒಮ್ಮೆ ಗೆಲ್ಲಿಸಿ ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಸೇವೆ ಮಾಡಲು ಅವಕಾಶ ನೀಡುವಂತೆ ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ.
ಬಿಎಸ್ಸಾರ್ನತ್ತ ಬಂಜಾರ ಸಮುದಾಯ?: ಇನ್ನು ಬಿಎಸ್ಸಾರ್ ಕಾಂಗ್ರೆಸ್ನಿಂದ ಅಂಬರೀಷ ರಾಠೋಡ ಅಥವಾ ಬಾಬು ಚವ್ಹಾಣ ಹೆಸರು ಕೇಳಿಬರುತ್ತಿದೆ. ಚಿಂಚನಸೂರ ವಿರುದ್ಧ ತಿರುಗಿ ಬಿದ್ದಿರುವ ಬಂಜಾರಾ ಸಮುದಾಯದವರು ತಮ್ಮ ಸಮಾಜದ ಅಭ್ಯರ್ಥಿ ನಿಲ್ಲಿಸಿದರೆ ಬೆಂಬಲಿಸುವುದಾಗಿ ಹೇಳಿದ್ದು, ಇವರಿಗೆ ಪ್ಲಸ್ ಪಾಯಿಂಟ್ ಆಗಲಿದೆ. ಕ್ಷೇತ್ರದಲ್ಲಿ 42 ಸಾವಿರಕ್ಕೂ ಹೆಚ್ಚು ಬಂಜಾರಾ ಸಮುದಾಯದ ಮತಗಳಿರುವುದರಿಂದ ಈ ಮತದ ಮೇಲೆ ಎಲ್ಲ ಪಕ್ಷಗಳು ಕಣ್ಣಿಟ್ಟಿವೆ.
ಚಿಂಚನಸೂರ ದಿಲ್ಲಿಯಲ್ಲಿ..: ಕಾಂಗ್ರೆಸ್ನ ಹಾಲಿ ಶಾಸಕರಿಗೆಲ್ಲ ಟಿಕೆಟ್ ಖಾತ್ರಿ ಎನ್ನಲಾಗುತ್ತಿದ್ದರೂ ಚಿಂಚನಸೂರ ದಿಲ್ಲಿಯಲ್ಲೇ ಠಿಕಾಣಿ ಹೂಡಿದ್ದಾರೆ ಎನ್ನಲಾಗುತ್ತಿದೆ. ಕ್ಷೇತ್ರದ ಕಾಂಗ್ರೆಸ್ ಮುಖಂಡರೇ ಚಿಂಚನಸೂರ ಅವರನ್ನು ವಿರೋಧಿಸುತ್ತಿದ್ದಾರೆ. ಈ ಬಾರಿ ಅವರಿಗೆ ಟಿಕೆಟ್ ನೀಡಿದರೆ ತಾವು ಬೆಂಬಲಿಸುವುದಿಲ್ಲ ಎಂದು ಬ್ಲಾಕ್ ಅಧ್ಯಕ್ಷರಾಗಿದ್ದ ಸಾಯಿಬಣ್ಣಾ ಬೋರಬಂಡಾ, ಜಿಪಂ ಮಾಜಿ ಸದಸ್ಯ ಲಕ್ಷ್ಮಾರೆಡ್ಡಿ ಇತರರು ಹೇಳುತ್ತಿದ್ದಾರೆ. ಆದ್ದರಿಂದ ಕ್ಲೀನ್ ಇಮೇಜ್ ಹೊಂದಿರುವ ಖರ್ಗೆ ನಿಷ್ಠ ಮಾಜಿ ಎಂಎಲ್ಸಿ ಚೆನ್ನಾರೆಡ್ಡಿ ತುನ್ನೂರ ಅವರಿಗೆ ಗುರುಮಠಕಲ್ ಟಿಕೆಟ್ ನೀಡುವ ಬಗ್ಗೆಯೂ ಚರ್ಚೆ ನಡೆದಿವೆ ಎನ್ನಲಾಗುತ್ತಿದೆ.
ಆದ್ದರಿಂದ ಚಿಂಚನಸೂರ ಟಿಕೆಟ್ಗಾಗಿ ದೆಹಲಿಯಲ್ಲೇ ಬೀಡು ಬಿಟ್ಟಿದ್ದಾರೆ. ಕ್ಷೇತ್ರದಲ್ಲಿ ಚಿಂಚನಸೂರ ವಿರೋಧಿ ಅಲೆ ಇದ್ದರೂ ಕಾಂಗ್ರೆಸ್ಗೆ ಪರವಾದ ವಾತಾವರಣ ಇರುವುದು ಸತ್ಯ. ಆದ್ದರಿಂದ ಕಾಂಗ್ರೆಸ್ ಟಿಕೆಟ್ ನೀಡಿಕೆ ಮೇಲೆ ಕೈ ಭದ್ರಕೋಟೆಯ ಭವಿಷ್ಯ ನಿರ್ಧಾರವಾಗಲಿದೆ. ಇದುವರೆಗೆ ಕಾಂಗ್ರೆಸ್ ಬೆಂಬಲಿಸಿದ ಮತದಾರ ಈ ಬಾರಿ ಯಾರ ಕೈ ಹಿಡಿಯುತ್ತಾರೆ ಎನ್ನುವುದು ನಂತರವೇ ಗೊತ್ತಾಗಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement