ಜನಸಂಗ್ರಾಮ ಪರಿಷತ್ ಎಚ್ಚರಿಕೆ
ಕನ್ನಡಪ್ರಭ ವಾರ್ತೆ ರಾಯಚೂರು ಮಾ.24
ನಗರದ ಸಂಚಾರಿ ಅವ್ಯವಸ್ಥೆ ಸರಿಪಡಿಸುವ ನಿಟ್ಟಿನಲ್ಲಿ ಸಂಚಾರಿ ನಿಯಮಗಳ ಕಟ್ಟುನಿಟ್ಟಿನ ಪಾಲನೆಗೆ ಜಿಲ್ಲಾ ಪೊಲೀಸ್ ಇಲಾಖೆ ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಜನಸಂಗ್ರಾಮ ಪರಿಷತ್ ಧರಣಿ ನಡೆಸಲಿದೆ.
ನಗರದಲ್ಲಿ ಭಾನುವಾರ ಈ ವಿಷಯ ತಿಳಿಸಿದ ಸಂಘಟನೆಯ ಮುಖಂಡ ರಜಾಕ್ ಉಸ್ತಾದ್, ಜಿಲ್ಲಾ ಪೊಲೀಸ್ ಇಲಾಖೆಯು ನಗರದ ಸಂಚಾರಿ ವ್ಯವಸ್ಥೆ ಸುಧಾರಣೆ ನಿಟ್ಟಿನಲ್ಲಿ ದಿವ್ಯ ನಿರ್ಲಕ್ಷ್ಯ ತಾಳಿದೆ. ಇದರಿಂದಾಗಿ ನಗರ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಿದೆ ಎಂದು ಟೀಕಿಸಿದರು.
ನಗರದ ಕೆಲ ರಸ್ತೆಗಳಲ್ಲಿ ಸಂಚಾರ ಪೊಲೀಸ್ ಇಲಾಖೆಯು ನಿಲುಗಡೆ ನಿಷೇಧಿಸಿದೆ. ಆದರೆ ಅವುಗಳ ಪಾಲನೆಯಾಗುತ್ತಿಲ್ಲ. ಅಷ್ಟೇ ಅಲ್ಲ ನಿಲುಗಡೆ ನಿಷೇಧಿಸಿದ ಸ್ಥಳದಲ್ಲಿ ಪೊಲೀಸ್ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಅದರಿಂದ ವಾಹನಗಳ ಸರಾಗ ಸಂಚಾರಕ್ಕೆ ಅಡಚಣೆಯಾಗಿದೆ ಎಂದು ಆರೋಪಿಸಿದರು.
ರಸ್ತೆ ಸಂಚಾರ ನಿಯಮ ಪಾಲನೆಯಾಗುತ್ತಿಲ್ಲ: ನಗರದ ತೀನ್ ಕಂದೀಲ್, ಮಹಾವೀರ ವೃತ್ತ, ಚಂದ್ರಮೌಳೇಶ್ವರ ವೃತ್ತದ ಬಳಿಯಿಂದ ಸಾಗುವ ಏಕಮುಖ ರಸ್ತೆಗಳಲ್ಲಿ ಸಂಚಾರ ನಿಯಮಗಳ ಪಾಲನೆಯಾಗುತ್ತಿಲ್ಲ. ಸಂಚಾರ ಪೊಲೀಸ್ ಇಲಾಖೆಯವರೇ ಗುರುತಿಸಿದ ಏಕಮುಖ ರಸ್ತೆಯಲ್ಲಿ ವಾಹನಗಳ ಸಂಚಾರ ತಡೆಗೆ ಇಲಾಖೆ ನಿರ್ಲಕ್ಷ್ಯ ತೋರುತ್ತಿದೆ. ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಅಸಮರ್ಪಕ ಕಾರ್ಯನಿರ್ವಹಣೆಯಿಂದ ಜನತೆ ತೊಂದರೆ ಎದುರಿಸುವಂತಾಗಿದೆ ಎಂದು ದೂರಿದರು.
ನಗರದ ಶಿವಂ ಆಸ್ಪತ್ರೆ, ಭಂಡಾರಿ ಆಸ್ಪತ್ರೆ, ಶೇಖರ್ ಪ್ಯಾರಾಡೈಸ್ ಮುಂಭಾಗದಲ್ಲಿ ವಾಹನಗಳನ್ನು ರಸ್ತೆಯ ಮೇಲೆಯೇ ನಿಲುಗಡೆ ಮಾಡುತ್ತಿದ್ದು, ಅದರಿಂದ ವಾಹನಗಳ ಸಂಚಾರ ದಿನವೂ ಗೊಂದಲಮಯವಾಗಿದೆ. ರಸ್ತೆ ಅತಿಕ್ರಮಿಸಿ ವಾಹನಗಳ ನಿಲುಗಡೆಗೆ ಅವಕಾಶ ಮಾಡಿಕೊಟ್ಟಿದ್ದು ಪೊಲೀಸರ ಕರ್ತವ್ಯ ಲೋಪ ಸ್ಪಷ್ಟವಾಗಿಸಿದೆ ಎಂದು ಆರೋಪಿಸಿದರು.
ಮಿತಿಮೀರಿದ ಬೈಕ್ಗಳ ಹಾವಳಿ: ನಗರದಲ್ಲಿ ಬೈಕ್ ಮತ್ತು ಕಾರುಗಳಿಗೆ ನಿಷೇಧಿಸಿರುವ ಹೈಮಾಸ್ ದೀಪಗಳನ್ನು ಅಳವಡಿಸಿ ವೇಗವಾಗಿ ಸಂಚರಿಸುತ್ತಿದ್ದರೂ ಪೊಲೀಸರು ಅಂಥ ಬೈಕ್ಗಳ ಹಾವಳಿ ತಡೆಗೆ ಮುಂದಾಗಿಲ್ಲ. ಇಂಥ ದೀಪದ ಬಳಕೆಯಿಂದ ಎದುರಿನಿಂದ ಬರುವ ವಾಹನಗಳ ಸವಾರರಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು.
ಅದೇ ರೀತಿ ನಗರದಲ್ಲಿ ಬಸ್, ಲಾರಿಗಳು ಸೇರಿದಂತೆ ಬೃಹತ್ ವಾಹನಗಳನ್ನು ತೀನ್ ಕಂದೀಲ್ ಮಾರ್ಗವಾಗಿ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ. ಕಿರಿದಾದ ರಸ್ತೆಯಲ್ಲಿ ಈ ವಾಹನಗಳು ಸಾಗುವುದರಿಂದ ವಾಹನಗಳ ಸವಾರರು ಹಾಗೂ ಪಾದಚಾರಿಗಳಿಗೆ ಭಾರೀ ಅಡಚಣೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಸ್ನಿಲ್ದಾಣ ಮುಂದೆ ಸಂಚಾರ ಅಧ್ವಾನ: ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಮುಂದಿನ ರಸ್ತೆಯಲ್ಲಿ ಬಸ್ಗಳು ಪ್ರಯಾಣಿಕರನ್ನು ಕರೆದೊಯ್ಯಲು ನಿಲುಗಡೆ ಮಾಡುತ್ತಿದ್ದು, ಅದರಿಂದ ದಿನದ ಬಹುತೇಕ ಸಮಯ ಈ ಮಾರ್ಗದಲ್ಲಿ ಸಂಚಾರ ವ್ಯವಸ್ಥೆ ಅಧ್ವಾನವಾಗಿರುತ್ತದೆ. ಅದೇ ರೀತಿ ಬಸ್ ಗಳು ತೀರಾ ಕಿರಿದಾದ ಟಿಪ್ಪು ಸುಲ್ತಾನ್ ರಸ್ತೆಯಲ್ಲಿ ಸಾಗುತ್ತಿವೆ. ಇದರಿಂದ ಬೈಕ್ ಮತ್ತು ಆಟೋಗಳ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಆರೋಪಿಸಿದರು.
ಸರಕು ಸಾಗಣೆ ವಾಹನಗಳಲ್ಲಿ ಜನರನ್ನು ಸಾಗಿಸುವ ದಂಧೆ ಅವ್ಯಾಹತವಾಗಿ ನಡೆದಿದ್ದು ಅಪಘಾತ ಸಂಭವಿಸಿದರೆ ಆಗುವ ಪ್ರಾಣ ಹಾನಿಗೆ ಪೊಲೀಸ್ ಇಲಾಖೆಯೇ ಹೊಣೆಯಾಗಲಿದೆ. ಈ ಎಲ್ಲ ಸಂಚಾರ ಸಮಸ್ಯೆಗಳ ಬಗ್ಗೆ ಜಿಲ್ಲಾ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿ ವರ್ಷ ಕಳೆದರೂ ಇದುವರೆಗೆ ಕ್ರಮ ಜರುಗಿಲ್ಲ. ಈ ಹಿನ್ನೆಲೆಯಲ್ಲಿ ಶೀಘ್ರವೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನಗರದಲ್ಲಿ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ಜನಸಂಗ್ರಾಮ ಪರಿಷತ್ ಜಿಲ್ಲಾ ಎಸ್ಪಿ ಕಚೇರಿ ಎದುರು ಧರಣಿ ನಡೆಸಲಿದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಬಂದಪ್ಪಗೌಡರು, ಮೊಹ್ಮದ್ ಫರೀದುದ್ದೀನ್ ಇದ್ದರು.