ಜಿಲ್ಲೆಯ ಕ್ಷೇತ್ರದಲ್ಲಿ ಸಿಪಿಐಎಂಎಲ್ ಸ್ಪರ್ಧೆ
ಕನ್ನಡಪ್ರಭ ವಾರ್ತೆ ರಾಯಚೂರು ಮಾ.24
ರಾಜ್ಯ ವಿಧಾನಸಭೆಯ ಚುನಾವಣೆಯಲ್ಲಿ ಸಿಪಿಐ(ಎಂಎಲ್)ಪಕ್ಷವು ಸಕ್ರಿಯವಾಗಿ ಭಾಗವಹಿಸಲು ಈಚೆಗೆ ನಡೆದ ರಾಜ್ಯ ಸಮಿತಿ ಸಭೆಯಲ್ಲಿ ನಿರ್ಧರಿಸಿದ್ದು, ಅದರಂತೆ ಜಿಲ್ಲೆಯಲ್ಲಿ ಸಹ ಎಲ್ಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತದೆ. ಒಂದೇ ಚಿಹ್ನೆಯಡಿ ಎಲ್ಲೆಡೆ ಸ್ಪರ್ಧಿಸಲು ನಿರ್ಧರಿಸಲಾಗಿದೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಚಿನ್ನಪ್ಪ ಕೊಟ್ರಿಕಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸಕ್ತ ಚುನಾವಣೆಯಲ್ಲಿ ಜಾಗತೀಕರಣ, ಭ್ರಷ್ಟಾಚಾರ, ಕೋಮುವಾದ ಹಾಗೂ ಜಾತಿವಾದಗಳು ಪ್ರಮುಖ ಸವಾಲಾಗಿವೆ. ಈ ನಾಲ್ಕು ಜನ ವಿರೋಧಿ ನೀತಿಗಳ ವಿರುದ್ಧ ಹೋರಾಡುವ ಉದ್ದೇಶದಿಂದಲೇ ಚುನಾವಣೆ ಕಣಕ್ಕಿಳಿಯಲು ಪಕ್ಷ ನಿರ್ಧರಿಸಿದೆ ಎಂದು ತಿಳಿಸಿದರು.
ರಾಜ್ಯ ಸಮಿತಿಗೆ 24 ಜನರ ಹೆಸರು: ಜಿಲ್ಲೆಯ 7 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತದೆ. ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸುವ ಕಾರ್ಯವನ್ನು ರಾಜ್ಯ ಸಮಿತಿ ಮಾಡಲಿದೆ. ಜಿಲ್ಲೆಯಿಂದ ಒಟ್ಟು 24 ಜನರ ಹೆಸರು ಅಂತಿಮಗೊಳಿಸಿ ರಾಜ್ಯ ಸಮಿತಿಗೆ ಈಗಾಗಲೇ ಕಳಿಸಲಾಗಿದೆ ಎಂದು ಅವರು ತಿಳಿಸಿದರು.
ಹತ್ತು ವರ್ಷಗಳ ಸತತ ಕಾನೂನಾತ್ಮಕ ಹೋರಾಟದ ನಂತರದಲ್ಲಿ ಕೇಂದ್ರ ಚುನಾವಣೆ ಆಯೋಗವು ಸಿಪಿಐ(ಎಂಎಲ್) ಪಕ್ಷದ ನೋಂದಣಿಗೆ ಅಂಕಿತ ಹಾಕಿದೆ. ಈ ಚುನಾವಣೆಯಲ್ಲಿ ನೋಂದಾಯಿತ ಪಕ್ಷವಾಗಿ ರಾಜ್ಯ ಆಯೋಗದ ಮುಂದೆ ಪಕ್ಷದ ಎಲ್ಲ ಅಭ್ಯರ್ಥಿಗಳಿಗೆ ಒಂದೇ ಚಿಹ್ನೆಯನ್ನು ನೀಡುವಂತೆ ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಏ.5ರೊಳಗೆ ಚಿಹ್ನೆ ಪ್ರಕಟ ನಿರೀಕ್ಷೆ: ಏ.5ರೊಳಗೆ ರಾಜ್ಯ ಆಯೋಗವು ಪಕ್ಷದ ಚಿಹ್ನೆಯನ್ನು ಪ್ರಕಟಿಸುವ ನಿರೀಕ್ಷೆಯಿದೆ. ಪಕ್ಷದ ನೋಂದಣಿ ಹಾಗೂ ಸಾಮಾನ್ಯ ಚಿಹ್ನೆಯ ಚುನಾವಣೆ ಹೋರಾಟದಲ್ಲಿ ಕೆಲವು ಅನುಕೂಲಗಳನ್ನು ತಂದುಕೊಡಲಿದೆ. ಈ ಬಾರಿಯ ಚುನಾವಣೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಪಕ್ಷವು ನಿರ್ಧರಿಸಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಈಗಲೇ ಮತದಾರರಿಗೆ ವಿವಿಧ ಆಮಿಷವೊಡ್ಡುವ ಕಾರ್ಯವನ್ನು ವಿವಿಧ ರಾಜಕೀಯ ಪಕ್ಷಗಳು ಮಾಡುತ್ತಿದ್ದು, ಈ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುತ್ತದೆ. ರಾಜಕೀಯ ಪಕ್ಷಗಳ ನಾಯಕರು ಮತದಾರರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮತದಾರರ ಖಾತೆ ಸಂಖ್ಯೆ ಸಂಗ್ರಹಣೆ ಮತ್ತು ಹೊಸದಾಗಿ ಖಾತೆಗಳನ್ನು ತೆರೆಯುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ದೂರಿದರು.
ಆನ್ಲೈನ್ ಮೂಲಕ ಖಾತೆಗೆ ಹಣ?: ಆನ್ಲೈನ್ ಮೂಲಕ ಖಾತೆಗೆ ಹಣ ಜಮಾ ಮಾಡುವ ಕಾರ್ಯಕ್ಕೆ ರಾಜಕೀಯ ಪಕ್ಷಗಳು ಮುಂದಾಗಿವೆ. ಆ ಮೂಲಕ ಆಯೋಗದ ಕಣ್ಣುತಪ್ಪಿಸಿ ಮತದಾರರ ಓಲೈಕೆಗೆ ತಂತ್ರ ಹೂಡಿವೆ. ಇದರಲ್ಲಿ ಬಿಜೆಪಿ, ಕಾಂಗ್ರೆಸ್, ಬಿಎಸ್ಸಾರ್ ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಸ್ಥಳೀಯ ಮುಖಂಡರು ನಿರತರಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಮತದಾರರ ಓಲೈಕೆಗೆ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಹಣ ಜಮಾ ಮಾಡಲು ತೆರೆದ ಖಾತೆಗಳನ್ನೂ ಬಳಸಿಕೊಳ್ಳುವ ತಂತ್ರ ನಡೆದಿದೆ ಎಂದು ಟೀಕಿಸಿದರು.
ರಾಜ್ಯದ ಸಂಪತ್ತು ಕೊಳ್ಳೆ ಹೊಡೆದಂಥ ವಿವಿಧ ರಾಜಕೀಯ ಪಕ್ಷಗಳ ಹೋರಾಟ ನಡೆಸಲು ಚುನಾವಣೆಯೇ ಸದವಕಾಶವಾಗಿದ್ದು, ಈ ಹಿನ್ನೆಲೆಯಲ್ಲಿ ರೈತ, ದಲಿತ ಹಾಗೂ ಕನ್ನಡ ಪರ ಸಂಘಟನೆಗಳು ರಾಜಕೀಯ ನಿಲುವು ತಾಳುವುದಕ್ಕೆ ಸೂಕ್ತ ಕಾಲವಾಗಿದೆ. ಈ ಹಿನ್ನೆಲೆಯಲ್ಲಿ ಈ ಸಂಘಟನೆಗಳು ಸಿಪಿಐಎಂಎಲ್ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲಿಸಲು ಮನವಿ ಮಾಡಿದರು.
ಪ್ರಸ್ತಾವಿತ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಈ ಸಂದರ್ಭದಲ್ಲಿ ಅವರು ಜಿಲ್ಲೆಯ 7 ಕ್ಷೇತ್ರಗಳ ಪ್ರಸ್ತಾವಿತ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದರು. ಪಕ್ಷದ ಪ್ರಮುಖರಾದ ಎಸ್.ರಾಜಶೇಖರ್, ಕೆ.ನಾಗಲಿಂಗಸ್ವಾಮಿ, ರಮೇಶ್ ಪಾಟೀಲ್, ಮಲ್ಲಯ್ಯ ಕಟ್ಟಿಮನಿ, ವೈ.ಬಸವರಾಜ್, ಮಲ್ಲೇಶ್ ಸೇರಿದಂತೆ ಅನೇಕರಿದ್ದರು.