ತತ್ವ ಪದಕ್ಕಿದೆ ಜೀವನ ಮೌಲ್ಯ ಬದಲಿಸೋ ಸಾಮರ್ಥ್ಯ
ಕ.ಪ್ರ. ವಾರ್ತೆ ಸಿಂಧನೂರು ಮಾ.24
ತತ್ವ ಪದಗಳು ಜೀವನದ ಮೌಲ್ಯ ಬದಲಾಯಿಸುವ ಸಾಮರ್ಥ್ಯ ಹೊಂದಿವೆ ಎಂದು ಪ್ರಾಚಾರ್ಯ ಪ್ರಹ್ಲಾದ ರೆಡ್ಡಿ ಹೇಳಿದರು.
ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಶನಿವಾರ ಏರ್ಪಡಿಸಿದ್ದ ತತ್ವಪದಗಳ ಚಿಂತನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತತ್ವ ಪದಗಳಲ್ಲಿದೆ ನಿಜವಾದ ಸಾಹಿತ್ಯ: ತತ್ವಪದಗಳು ಪ್ರತಿಯೊಬ್ಬರ ಸಾಧನೆಗೆ ಮೆಟ್ಟಿಲಿನ ಸ್ವರೂಪವಾಗಿವೆ. ಪ್ರಸ್ತುತ ವಿದ್ಯಮಾನದಲ್ಲಿ ಯುವಕರು ಕೆಟ್ಟ ಚಟುವಟಿಕೆಯಿಂದ ಹಾಳಾಗುತ್ತಿದ್ದಾರೆ. ಆದ ಕಾರಣ ಯುವಕರು ಒಳ್ಳೆಯ ವಿಷಯವನ್ನು ಅರಿತುಕೊಂಡು ನಡೆದಾಗ ಯಶಸ್ವಿ ಕಾಣಲು ಸಾಧ್ಯ. ಈಗಿನ ಸಾಹಿತ್ಯವು ನೀರಿನ ಮೇಲೆ ಗುಳ್ಳೆ ಇದ್ದಂತೆ. ನಾವು ತತ್ವ ಪದಗಳನ್ನೂ ಅರಿತುಕೊಂಡಾಗ ನಿಜವಾದ ಸಾಹಿತ್ಯದ ಬೆಲೆ ಗೊತ್ತಾಗುತ್ತದೆ ಎಂದು ನುಡಿದರು.
ನಂತರ ಪ್ರಾಸ್ತಾವಿಕವಾಗಿ ಮಾತನಾಡಿದ ಸಾಹಿತಿ ಹಾಗೂ ಉಪನ್ಯಾಸಕ ನಾಗಣ್ಣ ಕಿಲ್ಲಾರಿ, ಬಸವಣ್ಣನವರ ಕಾಲದಿಂದಲೂ ಬಂದ ಈ ತತ್ವ ಪದಗಳು ಈಗಲೂ ಸಾಹಿತ್ಯ ಆಸಕ್ತರಲ್ಲಿ ಮೂಡು ಬರುತ್ತಿವೆ. ಈ ತತ್ವ ಪದಗಳಿಂದ ಎಂತಹ ಕೆಟ್ಟ ಮಾನವ ಒಳ್ಳೆಯ ಹಾದಿ ಮುಟ್ಟಿ ಸಾಧನೆ ಮಾಡಬಹುದು. ಸಂತ ಶಿಶುನಾಳ ಶರೀಫರಂತಹ ಸಂತರು ತಮ್ಮ ಜೀವನವನ್ನೂ ಸಮಾಜದ ಏಳಿಗೆಗಾಗಿ, ತನ್ನ ಬದುಕನ್ನೂ ಮುಡುಪಾಗಿಟ್ಟು ಜನಸಾಮನ್ಯರಲ್ಲಿ ಮೌಲ್ಯಗಳ ಬಗ್ಗೆ ಅರಿವು ಮೂಡಿಸಿದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಲಾವಿದರಾದ ವೀರೇಶ ಸಾಲಿಮಠ, ಶಿಕ್ಷಕ ಮಾರುತೇಶ, ಅಮರೇಗೌಡ ಮಾಲಿಪಾಟೀಲ್, ಶ್ರೀಶೈಲ ಪತ್ತಾರ್, ಉಪನ್ಯಾಸಕರಾದ ಖಾದರ್ ಭಾಷ, ವೆಂಕಟರೆಡ್ಡಿ, ರಾಮಣ್ಣ, ಸಂಗಮೇಶ, ಬಸವರಾಜ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಇದ್ದರು.
ವಿದ್ಯಾರ್ಥಿಗಳಿಗೆ ಉಪನ್ಯಾಸಕರಾದ ನಾಗಣ್ಣ ಕಿಲ್ಲಾರಿ, ಖಾದರ್ ಭಾಷಾ, ಕನ್ನಡ ಸಾಹಿತ್ಯದ ಬಗ್ಗೆ ಇರುವ ಕಾಳಜಿ, ಪ್ರೇಮ, ಮೆಚ್ಚಿಗೆ ವ್ಯಕ್ತಪಡಿಸಿದರು.