ಪಿಂಚಣಿ ಮಂಜೂರಾತಿ; ಅವಧಿ ಕಡಿತಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ ರಾಯಚೂರು ಮಾ.24
ರಾಜ್ಯದಲ್ಲಿ ಸರ್ಕಾರಿ ನೌಕರರ ನಿವೃತ್ತಿ ನಂತರ ಸರ್ಕಾರ ನೀಡುವ ಪಿಂಚಣಿಯನ್ನು ನಿಗದಿತ ದಿನಾಂಕಕ್ಕೆ ಪಾವತಿಸುವಂತೆ ಕರ್ನಾಟಕ ದಲಿತ ನೌಕರರ ಒಕ್ಕೂಟದ ಜಿಲ್ಲಾ ಸಮಿತಿ ಆಗ್ರಹಿಸಿದೆ.
ಈ ಕುರಿತು ನಿವೃತ್ತಿ ವಿಭಾಗದ ರಾಜ್ಯ ಮಹಾಲೇಖಪಾಲರಿಗೆ ಮನವಿ ಸಲ್ಲಿಸಿರುವ ಸಂಘಟನೆಯು, ನಿವೃತ್ತಿ ಮತ್ತು ಮರಣ ಹೊಂದಿದ ಸರ್ಕಾರಿ ನೌಕರರ ಕುಟುಂಬದವರಿಗೆ ಪಿಂಚಣಿಯನ್ನು ಸಕಾಲದಲ್ಲಿ ಮಂಜೂರು ಮಾಡದೇ ಮಂಜೂರಾತಿ ನೀಡುವ ಅವಧಿಯನ್ನು 75 ದಿನಗಳಿಗೆ ವಿಸ್ತರಿಸಿರುವುದು ತೊಂದರೆಗೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
ಸರ್ಕಾರದ ಹೊಸ ನಿರ್ಧಾರದಿಂದ ಪಿಂಚಣಿದಾರರ ಕುಟುಂಬದ ಜೀವನ ನಿರ್ವಹಣೆಗೆ ಕಷ್ಟವಾಗುತ್ತಿದ್ದು, 75 ದಿನಗಳ ಬದಲಿಗೆ ಈ ಮೊದಲಿನಂತೆ 30 ದಿನಗಳಿಗೆ ಪಿಂಚಣಿ ಮಂಜೂರಾತಿ ಅವಧಿಯನ್ನು ಕಡಿತಗೊಳಿಸುವಂತೆ ಆಗ್ರಹಿಸಿರುವ ಸಂಘಟನೆಯು ಪಿಂಚಿಣಿ ಮಂಜೂರಾತಿಗೆ ನಿವೃತ್ತಿ ಹೊಂದಿದ ನೌಕರರೇ ಬೆಂಗಳೂರಿನ ಕಚೇರಿಗೆ ಹಾಜರಾಗುವಂತೆ ಮಹಾಲೇಖಪಾಲರು ಸೂಚಿಸುತ್ತಿದ್ದು ಅದರಿಂದ ವಯೋವೃದ್ಧರು, ಅನಾರೋಗ್ಯದಿಂದ ಬಳಲುತ್ತಿರುವವರಿಗೆ ತೊಂದರೆಯಾಗಿದೆ ಎಂದು ದೂರಿದ್ದಾರೆ. ಈ ನಿಟ್ಟಿನಲ್ಲಿ ಇಲಾಖೆಯು ಕೂಡಲೇ ಮಹಾಲೇಖಪಾಲರನ್ನು ಪಿಂಚಣಿ ಮಂಜೂರಾತಿ ಪ್ರಸ್ತಾವನೆಗಳಿಗೆ ತುರ್ತು ಸ್ಪಂದಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.