'ವಸತಿ' ಅಕ್ರಮ; 1.41 ಕೋಟಿ ಲೂಟಿ
ಕನ್ನಡಪ್ರಭ ವಾರ್ತೆ ರಾಯಚೂರು ಮಾ.24
ದೇವದುರ್ಗ ತಾಲೂಕಿನ ಪಲಕನಮರಡಿ ಗ್ರಾಪಂ.ನಲ್ಲಿ ವಸತಿ ಯೋಜನೆ ಅಡಿ ಖೊಟ್ಟಿ ಫಲಾನುಭವಿಗಳ ಹೆಸರಿನಲ್ಲಿ 1.41ಕೋಟಿ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದ್ದು, ಈ ಅಕ್ರಮಕ್ಕೆ ಸಂಬಂಧಿಸಿ ಹಿಂದೆ ಗ್ರಾಪಂ ಅಧ್ಯಕ್ಷ ಹನುಮಂತಪ್ಪ ಮತ್ತು ತಾಪಂ ಇಒ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸದಿದ್ದಲ್ಲಿ ಹೋರಾಟ ನಡೆಸುವುದಾಗಿ ಭಾರತ ಯುವಸೇನೆ ಅಧ್ಯಕ್ಷ ಸಿದ್ದಪ್ಪ ಎಚ್ಚರಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಲಕನಮರಡಿ ಗ್ರಾಪಂ.ಗೆ ಸಿಪಿಎಂ ಸದಸ್ಯ ಹನುಮಂತಪ್ಪ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಮೂರು ವರ್ಷಗಳಲ್ಲಿ ಒಟ್ಟು 1.41 ಕೋಟಿಯನ್ನು ಬಸವ ಮತ್ತು ಆಶ್ರಯ ವಸತಿ ಯೋಜನೆ ಅಡಿ ಖೊಟ್ಟಿ ಫಲಾನುಭವಿಗಳಿಗೆ ಚೆಕ್ ನೀಡುವ ಮೂಲಕ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.
ಹೊರ ಜಿಲ್ಲೆಗಳ ಮೂಲಕ ಚೆಕ್ ನಗದೀಕರಣ: ಈ ಯೋಜನೆಗಳಡಿ ಫಲಾನುಭವಿಗಳಿಗೆ ನೀಡಿದ ಚೆಕ್ಗಳನ್ನು ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿನ ಬ್ಯಾಂಕ್ಗಳ ಮೂಲಕ ನಗದು ಮಾಡಿಕೊಂಡಿರುವುದು ಅಕ್ರಮಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದ ಅವರು, ಗ್ರಾಪಂ.ನ ಭಾರತೀಯ ಸ್ಟೇಟ್ ಬ್ಯಾಂಕ್ನ ಖಾತೆಯಿಂದ ಚೆಕ್ ನೀಡಿದ್ದರೂ ಅನುದಾನ ದುರ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಹೊರ ಜಿಲ್ಲೆಗಳ ಮೂಲಕ ಚೆಕ್ಗಳನ್ನು ನಗದೀಕರಿಸಲಾಗಿದೆ ಎಂದು ದೂರಿದರು.
2012ರಲ್ಲಿ ಗೋವಿಂದ ಎಂಬುವವರಿಗೆ 15 ಸಾವಿರ ಮೌಲ್ಯದ ಒಟ್ಟು 9 ಚೆಕ್ಗಳನ್ನು ನೀಡಿದ್ದು, ಅವುಗಳನ್ನು ಬಳ್ಳಾರಿಯ ಬ್ಯಾಂಕ್ಗಳಿಂದ ನಗದೀಕರಿಸಲಾಗಿದೆ. ಅದೇ ರೀತಿ ಚಂದಮ್ಮ ಎಂಬ ಫಲಾನುಭವಿಗೆ ನೀಡಿದ ಚೆಕ್ ಗಳನ್ನೂ ಬೇರೆ ಜಿಲ್ಲೆಗಳಲ್ಲಿ ನಗದೀಕರಿಸಲಾಗಿದೆ ಎಂದು ಆರೋಪಿಸಿದರು.
ಖೊಟ್ಟಿ ಫಲಾನುಭವಿಗಳು: ದೇವದುರ್ಗ ತಾಲೂಕಿನಲ್ಲಿ ಎಸ್ಬಿಐ ಶಾಖೆಯಿದ್ದರೂ ಹಣ ಕೊಳ್ಳೆ ಹೊಡೆಯುವ ಉದ್ದೇಶದಿಂದಲೇ ಹೊರ ಜಿಲ್ಲೆಗಳಲ್ಲಿ ಖೊಟ್ಟಿ ಫಲಾನುಭವಿಗಳ ಹೆಸರಿನಲ್ಲಿ ನಗದೀಕರಿಸಲಾಗಿದೆ. ಇದರಲ್ಲಿ ಗ್ರಾಪಂ ಅಧ್ಯಕ್ಷರಾಗಿದ್ದ ಹನುಮಂತಪ್ಪ ಹಾಗೂ ತಾಪಂ ಇಒ ನಾಮದೇವ ರಾಠೋಡ್ ಅವರು ಶಾಮೀಲಾಗಿದ್ದಾರೆಂದು ಆಪಾದಿಸಿದರು.
ಪಲಕನಮರಡಿ ಗ್ರಾಪಂ ವ್ಯಾಪ್ತಿಯ ಮೂಡಲಗುಂಡ ಗ್ರಾಮದ ಮಲ್ಲಮ್ಮ, ಹನುಮಂತಿ ಮತ್ತು ಶಿವಮ್ಮ ಎಂಬುವವರಿಗೆ ತಲಾ 25 ಸಾವಿರದ ಚೆಕ್ ನೀಡಲಾಗಿದೆ. ಆದರೆ ಅವರು ವಸತಿ ಯೋಜನೆ ಅಡಿ ಮನೆಗಳನ್ನೇ ನಿರ್ಮಿಸಿಲ್ಲ. ಆದರೂ ಅವರಿಗೆ ಚೆಕ್ ನೀಡಿರುವುದು ಅನುದಾನದ ದುರ್ಬಳಕೆಯಾಗಿದೆ ಎಂದು ಟೀಕಿಸಿದರು.
ಕ್ರಿಮಿನಲ್ ಮೊಕದ್ದಮೆ ದಾಖಲಿಸಿ: 2011ರಲ್ಲಿ ಗ್ರಾಪಂ.ನಲ್ಲಿ ಅಧ್ಯಕ್ಷ ಸ್ಥಾನಕ್ಕೇರಿದ ಹನುಮಂತಪ್ಪ ಈ ರೀತಿ ಅಕ್ರಮ ಎಸಗುವ ಮೂಲಕ ಕೋಟ್ಯಂತರ ರು. ಅನುದಾನ ಕೊಳ್ಳೆ ಹೊಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಇವರೂ ಸೇರಿದಂತೆ ತಾಪಂ ಇಒ ನಾಮದೇವ ರಾಠೋಡ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ತಪ್ಪಿದಲ್ಲಿ ಸಂಘಟನೆಯಿಂದ ಜಿಪಂ ಎದುರು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು. ಸ್ವಾಮಿ ನಾಯಕ, ಶಾಮಸುಂದರ್ ಇದ್ದರು.