ಶೌಚಾಲಯ ಪ್ರೋತ್ಸಾಹ ಧನ ವಿತರಣೆ
ಕ.ಪ್ರ. ವಾರ್ತೆ ಗುಲ್ಬರ್ಗ ಮಾ.24
ಬೆಂಗಳೂರಿನ ಇನ್ಫೋಸಿಸ್ ಫೌಂಡೇಷನ್ ಹಾಗೂ ಸೇಡಂನ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂಯುಕ್ತಾಶ್ರಯದಲ್ಲಿ ನಗರದ ತಾಜ್ ಸುಲ್ತಾನಪುರ ಗ್ರಾಮದಲ್ಲಿ ಪರಿಶುದ್ಧ ಯೋಜನೆ ಹಾಗೂ ಲೇಬರ್ ನೆಟ್ ಕಂಪನಿ ಸಹಯೋಗದೊಂದಿಗೆ ನಿರ್ಮಿಸಲಾದ ಶೌಚಾಲಯಗಳಿಗೆ ಯೋಜನಾ ಸಂಯೋಜಕ ಸತೀಶ ಕೊಟ್ರೆ, ಲೇಬರ್ ನೆಟ್ ಬೆಂಗಳೂರು ಹಾಗೂ ಪರಿಶುದ್ಧ ಯೋಜನೆಯ ಮಹೇಶ ಬಿರಾದಾರ ಫಲಾನುಭವಿಗಳಿಗೆ ಪ್ರೋತ್ಸಾಹ ಧನ ವಿತರಿಸಿದರು. ಬಯಲು ಶೌಚವನ್ನು ಹೋಗಲಾಡಿಸಲು ಪಣತೊಟ್ಟಿರುವ ಪರಿಶುದ್ಧ ಯೋಜನೆಗೆ ಸಹಕಾರ ನೀಡುವುದರ ಜತೆಗೆ ಅದರ ಕಾರ್ಯವನ್ನು ಪ್ರೋತ್ಸಾಹಿಸಲು ಬೆಂಗಳೂರಿನ ಲೇಬರ್ ನೆಟ್ ಕಂಪನಿಯು ಹಳ್ಳಿಗಳಿಗೆ ಶೌಚಾಲಯ ಮತ್ತು ಮಹತ್ವವನ್ನು ಹಳ್ಳಿ ಜನರಿಗೆ ತಿಳಿಸಲು ಬಂದಿದ್ದಾರೆ ಎಂದು ವ್ಯವಸ್ಥಾಪಕ ಶ್ರೀನಿವಾಸ ದೇಶಮುಖ ತಿಳಿಸಿದರು. ಲೇಬರ್ ನೆಟ್ ಕಂಪನಿ ಕಟ್ಟಡ ಕಟ್ಟುವ ಕಾರ್ಮಿಕರಿಗೆ ತರಬೇತಿ ನೀಡುತ್ತಿದೆ. ಈಗಾಗಲೇ ಜಿಲ್ಲೆಯ ತಾಜ್ ಸುಲ್ತಾನಪುರ, ಯಾದಗಿರಿಯ ಯರಗೋಳ, ಬೀದರ್ನ ಅಣದೂರ ಗ್ರಾಮಗಳಲ್ಲಿ ಸುಮಾರು 500 ಜನ ಕಾರ್ಮಿಕರಿಗೆ ತರಬೇತಿ ನೀಡಿ ಅವರಿಗೆ ಪ್ರಮಾಣ ಪತ್ರ ನೀಡಿದೆ.