371(ಜೆ) ತಿದ್ದುಪಡಿಯಲ್ಲಿ ಲೋಪ ಸರಿಪಡಿಸುವಂತೆ ಕೇಂದ್ರಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ ಟಿ ಗುಲ್ಬರ್ಗ ಟಿ ಮಾ.25
ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯು ವೈಜನಾಥ ಪಾಟೀಲ್ ಅಧ್ಯಕ್ಷತೆಯಲ್ಲಿ ಸಮಾನ ಮನಸ್ಕರ ಸಭೆಯಲ್ಲಿ ಕೇಂದ್ರ ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಲಾಯಿತು.
2012ರ ಚಳಿಗಾಲದ ಸಂಸದೀಯ ಅಧಿವೇಶನದಲ್ಲಿ ಪಾಸು ಮಾಡಿದ 371(ಜೆ) ಕಲಂ ತಿದ್ದುಪಡಿಯಲ್ಲಿ ಹಲವಾರು ಲೋಪದೋಷಗಳಿದ್ದು, ಅವುಗಳನ್ನು ಪ್ರಸ್ತುತ ಬಜೆಟ್ ಅಧಿವೇಶನದಲ್ಲಿ ಸರಿಪಡಿಸಲು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಲಾಯಿತು.
ಕರ್ನಾಟಕ ಸರ್ಕಾರವು ಹೈ-ಕ.ದಲ್ಲಿರುವ ಸರ್ಕಾರಿ ನೌಕರಿಯ ಹುದ್ದೆಗಳನ್ನು ತುಂಬಲು ಕೂಡಲೇ ನಿಯಮಗಳನ್ನು ತಯಾರಿಸಬೇಕು. ನಿಯಮಗಳನ್ನು ತಯಾರಿಸುವವರೆಗೆ ಈ ಭಾಗದ ವಿದ್ಯಾವಂತರಿಗೆ ಗುತ್ತಿಗೆಯ ಆಧಾರದ ಮೇಲೆ ಕೂಡಲೇ ಭರ್ತಿ ಮಾಡಿಕೊಳ್ಳಬೇಕು ಎಂದು ಮನವಿ ಮಾಡಲಾಯಿತು.
ಹೈ-ಕ ಅಭಿವೃದ್ಧಿಗೋಸ್ಕರ ಮೂಲ ಸೌಕರ್ಯಗಳನ್ನು ಒದಗಿಸಲು ಯಾವ ರೀತಿಯ ಹಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭರಿಸಬೇಕೆಂಬುದನ್ನು ಸ್ಪಷ್ಟಿಕರಿಸಬೇಕು. ವಿಧಾನಸಭೆ ಚುನಾವಣೆಯಲ್ಲಿ ನಮ್ಮದೇ ಹೋರಾಟ ಸಮಿತಿಯ ಅಭ್ಯರ್ಥಿಗಳಿಗೆ ಆಯಾ ಕ್ಷೇತ್ರಗಳಲ್ಲಿ ನಿಲ್ಲಿಸಬೇಕೇ ಅಥವಾ ಸಮಾನ ಮನಸ್ಕರ ಪಕ್ಷಗಳ ಜತೆ ಚುನಾವಣಾ ಹೊಂದಾಣಿಕೆ ಮಾಡಿಕೊಳ್ಳಬೇಕೇ ಎಂಬುದನ್ನು ನಿರ್ಧರಿಸಲು ವೈಜನಾಥ ಪಾಟೀಲ್ ಅವರಿಗೆ ಅಧಿಕಾರ ವಹಿಸಿಕೊಡಲು ಸರ್ವಾನುಮತದಿಂದ ಪ್ರಸ್ತಾವನೆ ಕೈಗೊಳ್ಳಲಾಯಿತು.
ಸಭೆಯಲ್ಲಿ ಶಿವರಾಮ ಮೋಘ, ಲಕ್ಷ್ಮಣ ಗೋಗಿ ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡಿದ್ದರು.