ಔರಾದ್(ಮೀ) ಕ್ಷೇತ್ರದಿಂದ ಸ್ಪರ್ಧೆ: ರಾಜೇಂದ್ರ ವರ್ಮಾ
ಕ.ಪ್ರ. ವಾರ್ತೆ ಟಿ ಬೀದರ್ ಟಿ ಮಾ.25
ಕಳೆದ ಮೂರು ದಶಕಗಳಿಂದ ಪಕ್ಷ ಕಟ್ಟಿ ಬೆಳೆಸಿದ್ದಲ್ಲದೆ ಎರಡೆರಡು ಬಾರಿ ಪಕ್ಷದಿಂದ ಜಯಭೇರಿ ಬಾರಿಸಿ ಬಹುಸಂಖ್ಯಾತ ದಲಿತ ಸಮುದಾಯ ಬೆಂಬಲ ಹೊಂದಿರುವ ನಾನು, ಈ ಬಾರಿಯ ಚುನಾವಣೆಯಲ್ಲಿ ಔರಾದ್ ಮೀಸಲು ಕ್ಷೇತ್ರದಿಂದ ಸ್ಪರ್ಧಿಸೋದು ಖಚಿತ ಎಂದು ಮಾಜಿ ಶಾಸಕ ಲಿಡ್ಕರ್ ಅಧ್ಯಕ್ಷ ರಾಜೇಂದ್ರ ವರ್ಮಾ ತಿಳಿಸಿದ್ದಾರೆ.
ಈ ಕುರಿತಂತೆ ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರ ಔರಾದ್ನಲ್ಲಿ ಮುಂಬರುವ ಚುನಾವಣೆಯಲ್ಲಿ ದಲಿತ ವರ್ಗಕ್ಕೆ ಟಿಕೆಟ್ ನೀಡಿ ರಾಜ್ಯಾದ್ಯಂತ ಉತ್ತಮ ಸಂದೇಶ ಕಳುಹಿಸುವಂತೆ ಸಮುದಾಯ ವರಿಷ್ಠರನ್ನು ಆಗ್ರಹಿಸಿರುವ ಹಿನ್ನೆಲೆಯಲ್ಲಿ ಟಿಕೆಟ್ ನನಗೆ ಸಿಗುವ ಎಲ್ಲ ಸಾಧ್ಯತೆಗಳಿಗೆ ಎಂದು ತಿಳಿಸಿದರು.
ವರಿಷ್ಠರಿಗೆ ಮನವರಿಕೆ ಮಾಡಿದ್ದೇನೆ: ಜಿಲ್ಲೆಯಲ್ಲಿ ಒಟ್ಟಾರೆ ಶೇ.22ರಷ್ಟು ದಲಿತ ಸಮುದಾಯಕ್ಕೆ ಸೇರಿದ ಎಡ ಮತ್ತು ಬಲ ಪಂಗಡವರಿದ್ದಾರೆ. ಜಿಲ್ಲೆಯ ಬಿಜೆಪಿಗಷ್ಟೇ ಅಲ್ಲ ರಾಜ್ಯದ ಇತರೆ ಭಾಗಗಳಲ್ಲಿರುವ ಬಿಜೆಪಿ ಅಭ್ಯರ್ಥಿಗಳಿಗೂ ಉತ್ತಮ ಬೆಂಬಲ ಸಿಗಲಿದೆ. ಪ್ರಸಕ್ತ ಚುನಾವಣೆಯಲ್ಲಿ ಟಿಕೆಟ್ ನೀಡುವಂತೆ ಈಗಾಗಲೇ ರಾಷ್ಟ್ರೀಯ ಅಧ್ಯಕ್ಷ ರಾಜನಾಥಸಿಂಗ್, ಮುಖಂಡರಾದ ನಿತಿನ್ ಗಡ್ಕರಿ, ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ಅನಂತಕುಮಾರ, ಸದಾನಂದ ಗೌಡ ಸೇರಿದಂತೆ ಮತ್ತಿತರರನ್ನು ಭೇಟಿಯಾಗಿ ವಸ್ತುಸ್ಥಿತಿ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದರು.
ಕಳೆದ 1999ರಿಂದ ಎರಡು ಬಾರಿ ಹುಲಸೂರು ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ತರುವ ಮೂಲಕ ಜಿಲ್ಲೆಯಲ್ಲಿ ಬಿಜೆಪಿಯ ಪ್ರಗತಿಗೆ ಕಿಂಚಿತ್ತಾದರೂ ಶ್ರಮಿಸಿರುವ ನನಗೆ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿಯೇ ಮೀಸಲು ಕ್ಷೇತ್ರವಾದ ಔರಾದ್ನಿಂದ ಸ್ಪರ್ಧಿಸಲು ಅವಕಾಶ ನೀಡುವಂತೆ ಕೇಳಿದ್ದೆ. ಆದರೆ ಕೊನೆ ಕ್ಷಣದಲ್ಲಿ ಬದಲಾವಣೆಯಾಯಿತು. ಅದಾಗ್ಯೂ ಧೃತಿಗೆಡದ ನಾನು, ಪಕ್ಷದ ಸಕ್ರೀಯ ಕಾರ್ಯಕರ್ತನಾಗಿ ನೀಡಿದ ಜವಾಬ್ದಾರಿಗಳನ್ನು ನಿಭಾಯಿಸುತ್ತ ಬಂದಿದ್ದೇನೆ ಎಂದು ಹೇಳಿದರು.
ವರ್ಮಾ ಎಚ್ಚರಿಕೆ ಮಾತು: ಔರಾದ್ ಮೀಸಲು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಹಾಲಿ ಶಾಸಕರ ಪಾಲಾದರೆ ಹೇಗೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಖಂಡಿತವಾಗಿಯೂ ನನಗೇ ಟಿಕೆಟ್ ಸಿಗುವ ಸಾಧ್ಯತೆಗಳು ಹೆಚ್ಚಿವೆ. ಪಕ್ಷದ ವರಿಷ್ಠರ ಮೇಲೆ ವಿಶ್ವಾಸ ಹೊಂದಿದ್ದೇನೆ. ಪಕ್ಷದ ಆದೇಶಕ್ಕೆ ತಲೆಬಾಗುತ್ತೇನೆ. ಆದರೆ ನನ್ನ ಕಾರ್ಯಕರ್ತರ ಮತ್ತು ಅಭಿಮಾನಿಗಳು ಹೇಳಿದಂತೆ ನಡೆಯಬೇಕಾಗಿಯೂ ಬರಬಹುದು ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ನುಡಿದರು.
ಈಗಾಗಲೇ ಹಲವಾರು ಪಕ್ಷದ ಮುಖಂಡರು ನನ್ನನ್ನು ಆಯಾ ಪಕ್ಷಕ್ಕೆ ಆಹ್ವಾನಿಸಿವೆ. ಟಿಕೆಟ್ ನೀಡುವ ಭರವಸೆಯನ್ನೂ ನೀಡಿವೆ. ಆದರೂ ನಾನು ಅದ್ಯಾವುದಕ್ಕೂ ಸೊಪ್ಪು ಹಾಕದೆ ಪಕ್ಷನಿಷ್ಠೆಯನ್ನು ಬದಲಿಸಿಕೊಂಡಿಲ್ಲ ಮುಂದೆ ಏನಾಗುತ್ತದೋ ಕಾದು ನೋಡಿ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.
ವಾರದೊಳಗೆ ಎಲ್ಲವೂ ಗೊತ್ತಾಗಲಿದೆ: ಔರಾದ್ ಕ್ಷೇತ್ರದ ಸದ್ಯದ ಪರಿಸ್ಥಿತಿ ಕುರಿತಂತೆ ಈಗಾಗಲೇ ಪಕ್ಷದ ವರಿಷ್ಠರಿಗೆ ಮಾಹಿತಿ ನೀಡಲಾಗಿದೆ. ಅವರೂ ಈ ಕುರಿತಂತೆ ಗಂಭೀರವಾಗಿ ಚಿಂತಿಸುತ್ತಿದ್ದಾರೆ. ಕೆಲ ಬಾರಿ ವರದಿಗಳನ್ನೂ ತರಿಸಿಕೊಂಡಿರುವುದು ನನ್ನ ಗಮನಕ್ಕೆ ಬಂದಿದೆ. ಹೀಗಾಗಿ ನನಗೆ ಟಿಕೆಟ್ ನೀಡುವ ಮೂಲಕ ಪಕ್ಷದ ವರಿಷ್ಠರು ದಲಿತ ಸಮುದಾಯಕ್ಕೆ ಆದ್ಯತೆ ನೀಡುತ್ತಾರೆಂಬ ಭರವಸೆ ನನಗಿದೆ. ಎಲ್ಲವೂ ಒಂದು ವಾರದಲ್ಲಿ ತಿಳಿಯಾಗಲಿದೆ ಎಂದು ರಾಜೇಂದ್ರ ಭರವಸೆ ವ್ಯಕ್ತಪಡಿಸಿದರು.
ರಾಷ್ಟ್ರೀಯ ಬಿಜೆಪಿ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಯೂ ಆಗಿರುವ ವರ್ಮಾ ಅವರ ಈ ವಿಚಾರಗಳನ್ನು ಗಮನಿಸಿದ್ದೇಯಾದಲ್ಲಿ ಈ ಬಾರಿಯ ಟಿಕೆಟ್ಗಾಗಿ ಹರಸಾಹಸ ನಡೆಸಿರುವ ಅವರು ಟಿಕೆಟ್ನಿಂದ ವಂಚಿತವಾದ್ರೆ ಬೇರೆ ಪಕ್ಷಕ್ಕೂ ಹಾರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.