ಕಲಿಕೆಗೆ ವಯಸ್ಸಿನ ಮಿತಿಯಿಲ್ಲ: ಸೋಮಯಾಜಿ
ಗುಲ್ಬರ್ಗ/ಶಹಾಬಾದ್: ಮನುಷ್ಯನಿಗೆ ವಿದ್ಯೆ ಕಲಿಕೆಗೆ ಯಾವುದೇ ವಯಸ್ಸಿನ ಇತಿಮಿತಿ ಇಲ್ಲ, ಕಲಿಕೆಗೆ ಸೂಕ್ತ ಅವಕಾಶಗಳು ಇದ್ದರೆ ಅದನ್ನು ಬಳಸಿಕೊಳ್ಳಬೇಕೆಂದು ಎಸ್.ಎಸ್.ಮರಗೋಳ ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ.ಶಂಕರ ಸೋಮಯಾಜಿ ಹೇಳಿದರು.
ನಗರದ ನೃಪತುಂಗ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಶ್ರೀಧರ ಜೋಶಿಯವರ ಮನೆಯಲ್ಲಿ ಹಮ್ಮಿಕೊಂಡ ತಿಂಗಳ ಕಾರ್ಯಕ್ರಮವಾದ ಮನೆಯಂಗಳದ ಅತಿಥಿ ಕಾರ್ಯಕ್ರಮದಲ್ಲಿ ಸೋಮಯಾಜಿಯವರಿಗೆ ಉಸ್ಮಾನಿಯಾ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ಪಡೆದಿದ್ದರಿಂದ ದಂಪತಿಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತ, ಡಾಕ್ಟರೇಟ್ ಪದವಿ ಪಡೆಯಲು ತಮಗೆ ಸಹಕರಿಸಿದ, ತಮ್ಮ ಅನುಭವಗಳನ್ನು ಹೇಳಿದರು.
ನೂತನವಾಗಿ ಆಯ್ಕೆಯಾದ ನಗರಸಭೆ ಸದಸ್ಯರಿಗೆ ನಡೆದ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಅಹ್ಮದ ಪಟೇಲರವರು ವೇದಿಕೆ ಕಳೆದ ಒಂದುವರೆ ವರ್ಷದಿಂದ ಸ್ಥಳೀಯ ಯುವಕರಿಗೆ, ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ ಪ್ರೇರಣಾದಾಯಕವಾದ ಕಾರ್ಯ ನಿರ್ವಹಿಸುತ್ತಿರುವದನ್ನು ಶ್ಲಾಘೀಸಿದರು. ನಗರಸಭೆ ಸದಸ್ಯರಾದ ರಾಮಕುಮಾರ ಸಿಂಘೆ, ಗೀತಾ ಸಾಹೇಬಗೌಡ ಬೊಗುಂಡಿಯವರಿಗೆ ಸನ್ಮಾನಿಸಲಾಯಿತು.
ಸಾಹಿತಿ ಮಂಡಲಗಿರಿ ಪ್ರಸನ್ನ ಪ್ರಾಸ್ತಾವಿಕ ಮಾತನಾಡಿದರು, ಕೆ.ರಮೇಶ ಭಟ್ಟ ಸ್ವಾಗತಿಸಿದರು, ಮರಲಿಂಗ ಪೂಜಾರಿ ವಂದಿಸಿದರು, ಪೂಜಾರಿ ಮೇತ್ರೆ ವಂದಿಸಿದರು.
ವೇದಿಕೆ ಸಂಚಾಲಕ ವಾಸುದೇವ ಚವ್ಹಾಣ, ಗುರುದತ್ತ ಕುಲ್ಕರ್ಣಿ, ಈರಣ್ಣಾ ಕೆಂಬಾವಿ, ಸಿದ್ದಲಿಂಗ ಬಾಳಿ, ಡಾ.ಮಲ್ಲಿನಾಥ ತಳವಾರ, ಶರಣು ಜ್ಯೋತಿ, ಅಖೀಲೇಶ ಹೊನಗುಂಟಿಕರ್, ಅನೀಲ ಮೈನಾಳಕರ್, ಸೋಮಶೇಖರ ನಂದಿಧ್ವಜ, ವಿಶ್ವನಾಥ ಹಡಪದ ಇತರರು ಉಪಸ್ಥಿತರಿದ್ದರು.