ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕೈಗಾರಿಕೆಗೆ ಭೂಮಿ; ರೈತರ ಪರದಾಟ (ಸಂಕ್ಷಿಪ್ತ ಸುದ್ದಿ)

Rashmi Kasaragodu
Updated On : 26 Mar 2013, 11:03 am

ಯಾದಗಿರಿ: ತಾಲೂಕಿನ ಗಡಿಭಾಗದ ಕಡೇಚೂರು ಗ್ರಾಮದಲ್ಲಿ ರಾಜ್ಯ ಸರ್ಕಾರ ಕೈಗಾರಿಕೆ ಸ್ಥಾಪನೆಗೆ ಮುಂದಾಗಿದ್ದು, 3,300 ಎಕರೆ ಭೂ ಸ್ವಾಧೀನ ಮಾಡಿಕೊಂಡಿದೆ. ಆದರೆ ಬಾಡಿಯಾಳ ಹಾಗೂ ಶೆಟ್ಟಿಹಳ್ಳಿ ಗ್ರಾಮದ ರೈತರು ಕೈಗಾರಿಕೆ ಸ್ಥಾಪನೆಗೆ ಭೂಮಿ ನೀಡಿದ್ದು, ಪರಿಹಾರ ಪಡೆಯಲು ಪರದಾಡುತ್ತಿದ್ದಾರೆ. ಕೈಗಾರಿಕೆ ಸ್ಥಾಪನೆ ಹಿನ್ನೆಲೆಯಲ್ಲಿ ಸರ್ಕಾರ ಪ್ರತಿ ಎಕರೆಗೆ 6 ಲಕ್ಷ ಪರಿಹಾರ ನಿಗದಿಪಡಿಸಿದೆ. ಕೆಐಎಡಿಬಿ ರೈತರ 3,300 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಂಡಿದೆ. ಆದರೆ ಪರಿಹಾರ ಮೊತ್ತದ ಚೆಕ್ ನೀಡುವಲ್ಲಿ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂಬುದು ರೈತರ ಆರೋಪ.
ಅಲೆದಿದ್ದೇ ಬಂತು, ಪ್ರಯೋಜನವಾಗಿಲ್ಲ: ಕಳೆದ 8 ತಿಂಗಳ ಹಿಂದೆಯೇ ಭೂಸ್ವಾಧಿನ ಪ್ರಕ್ರಿಯೆ ಮುಗಿದೆ. ಅಧಿಕಾರಿಗಳು ತಿಳಿಸಿದ ಎಲ್ಲ ಜಮೀನಿನ ಮೂಲ ದಾಖಲಾತಿಗಳನ್ನು ರೈತರು ಚಾಚೂ ತಪ್ಪದೆ ಅಧಿಕಾರಿಗಳಿಗೆ ನೀಡಿ ಪರಿಹಾರ ಮೊತ್ತಕ್ಕಾಗಿ ಗಡಿಭಾಗದಿಂದ ಗುಲ್ಬರ್ಗದ ಕೆಐಎಡಿಬಿ ವಿಭಾಗೀಯ ಕಚೇರಿಗೆ ನೂರಾರು ಬಾರಿ ಅಲೆದಾಡಿದ್ದಾರೆ. ಆದರೆ ಇದುವರೆಗೆ ಪರಿಹಾರ ಸಿಗದೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಈ ಕುರಿತು ತಮ್ಮ ನೋವನ್ನು ತೋಡಿಕೊಂಡ ರೈತರು, 'ಮೊದಲು ನಾವು ಕೈಗಾರಿಕೆ ಸ್ಥಾಪನೆಗೆ ಭೂಮಿ ನೀಡಲು ಹಿಂದೇಟು ಹಾಕಿದ್ದೆವು. ಅದಕ್ಕೆ ಕಾರಣ ನಮ್ಮ ಜಮೀನಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿಲ್ಲ. ಆದರೂ ಪ್ರಗತಿಗಾಗಿ ಭೂಮಿ ನೀಡಿದೆವು. ವಿಭಾಗಿಯ ಕಚೇರಿಯಲ್ಲಿ ಅಧಿಕಾರಿಗಳು ರೈತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಸಿಬ್ಬಂದಿ ಕೊರತೆಯಿದೆ ಹಾಗೂ ಸಂಬಂಧಪಟ್ಟ ಕಾಗದ ಪತ್ರಗಳು ನೀಡಿಲ್ಲ ಎಂದು ವಿನಾಕಾರಣ ಅಲೆದಾಡಿಸುತ್ತಿದ್ದಾರೆ' ಎಂದು ಕಡೇಚೂರ ಗ್ರಾಮದ ರೈತರಾದ ಸೂಗೂರಪ್ಪ ಸಾಹುಕಾರ ಹಾಗೂ ವೆಂಕಟರಡ್ಡಿ ಪಾಟೀಲ್ ಆರೋಪಿಸಿದ್ದಾರೆ.
29ರಿಂದ ಶಂಕರಲಿಂಗೇಶ್ವರ ಜಾತ್ರೆ
ಯಾದಗಿರಿ: ಗಡಿಭಾಗದ ಧಾರ್ಮಿಕ ಶ್ರದ್ಧಾ ಕೇಂದ್ರ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿರುವ ಇಡ್ಲೂರು ಗ್ರಾಮದ ಶಂಕರಲಿಂಗೇಶ್ವರ ದೇವರ ಜಾತ್ರೆ ಮಾ. 29ರಿಂದ ಆರಂಭವಾಗಲಿದೆ. ದೇವಸ್ಥಾನದಲ್ಲಿ ಮಾ. 29ರಂದು ಬೆಳಗ್ಗೆ 5 ಗಂಟೆಗೆ ಭಕ್ತರಿಂದ ಅಗ್ನಿಕುಂಡ ನಡೆಯುತ್ತದೆ. ನಂತರ ಪೂಜೆ ಹವನಗಳು ನಡೆಯಲಿವೆ. ಮಾ. 30ರಂದು ಸಾಯಂಕಾಲ ಉಚ್ಯಯ ನಡೆಯಲಿದೆ. ದಿ.31ರಂದು ಸಂಜೆ 5.30ಕ್ಕೆ ಶಂಕರಲಿಂಗೇಶ್ವರ ರಥೋತ್ಸವ ಜರುಗುವುದು. ಜಾತ್ರೆಗೆ ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸಿ ಉದ್ಭವ ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆಯುವರು. ಈ ಜಾತ್ರೆಯಲ್ಲಿ ವಿಶೇಷವಾಗಿ ಜಾನುವಾರುಗಳ ಸಂತೆ ರೈತಾಪಿ ವರ್ಗವನ್ನು ಆಕರ್ಷಿಸುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕೆಂದು ಗ್ರಾಮದ ಬಸವರಾಜಯ್ಯ ಸ್ವಾಮಿ ಇಡ್ಲೂರ ಕೋರಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement