ಗಡಿ ದಾಟಿ ಬಂದ ಬಡವರ ಗಡಿಗೆ
ಕನ್ನಡಪ್ರಭ ವಾರ್ತೆ ಟಿ ಬೀದರ್ ಟಿ ಮಾ.25
ಈಗ ಕಾಲ ಬದಲಾಗಿದೆ. ಬಡವರ ಪಾಲಿನ ಫ್ರಿಡ್ಜ್ ಎಂದೇ ಗುರುತಿಸಲಾಗುವ ಮಣ್ಣಿನ ಗಡಿಗೆ ಜಾಮ್, ಸೂರಾಯಿಗೆಗೆ ಬೇಸಿಗೆ ಬಂತೆಂದರೆ ಎಲ್ಲ ವರ್ಗಗಳಿಂದ ಎಲ್ಲಿಲ್ಲದ ಡಿಮ್ಯಾಂಡ್ ಬರುತ್ತಿದೆ.
ವರ್ಷದ ಕೆಲವೇ ತಿಂಗಳು ವ್ಯಾಪಾರ ವಹಿವಾಟು ಹೊಂದಿರುವ ಗಡಿಗೆ ವ್ಯಾಪಾರಸ್ಥರು(ಕುಂಬಾರರು) ಜನವರಿ ತಿಂಗಳು ಆರಂಭವಾಗುತ್ತಲೇ ವ್ಯಾಪಾರಕ್ಕೆ ಕಳೆ ಕಂಡುಕೊಳ್ಳುತ್ತಾರೆ. ಜೂನ್ನಿಂದ ಡಿಸೆಂಬರ್ವರೆಗೆ 100 ವ್ಯಾಪಾರ ಮಾಡದವರು ಮಾರ್ಚ್ ತಿಂಗಳಿನಲ್ಲಿಯೇ ದಿನಕ್ಕೆ 3ರಿಂದ 4 ಸಾವಿರ ವ್ಯಾಪಾರ ಮಾಡಿಕೊಳ್ಳುತ್ತೇವೆ ಎಂದು ಗಡಿಗೆ ಮಾರಾಟ ಮಾಡುವ ಗಾದಗಿ ಗ್ರಾಮದ ಭೀಮಣ್ಣ ಖುಷಿ ವ್ಯಕ್ತಪಡಿಸುತ್ತಾರೆ.
ನ್ಯೂ ಡಿಸೈನ್..: ನಗರದ ಜಿಲ್ಲಾ ಅಸ್ಪತ್ರೆಯ ಎದುರು ಆಂಧ್ರಪ್ರದೇಶದ ತಾಂಡೂರ, ಕೋಹೀರ್ ಮತ್ತಿತರ ಕಡೆಗಳಿಂದ ಜಾಮ್, ಸೂರಾಯಿಗಳನ್ನು ತಂದಿಡಲಾಗಿದ್ದು, ಇವುಗಳಿಗೆ ಬೇಡಿಕೆ ಹೆಚ್ಚಿದ್ದು ಇಲ್ಲಿಯೂ ಹೊಸ ಮಾದರಿ ಮಡಿಕೆಗಳು ಮಾರುಕಟ್ಟೆಗೆ ಪರಿಚಯಿಸಿದ್ದರಿಂದ ಬಡವರಲ್ಲದೇ ಸಿರಿವಂತರೂ ಜಾಮ್, ಸೂರಾಯಿಗೆ ಮೊರೆ ಹೋಗುತ್ತಿದ್ದಾರೆ.
ಪ್ರತಿ ಜಾಮ್ 120 ರಿಂದ 220ರವರೆಗೆ ಇದ್ದರೆ 1 ಕೊಡಕ್ಕೂ ಕಡಿಮೆ ನೀರು ತುಂಬುವ ಪ್ರತಿಯೊಂದು ಸೂರಾಯಿ 60ರಿಂದ 70ರ ವರೆಗೆ ಮಾರಾಟ ಮಾಡಲಾಗುತ್ತದೆ ಎಂದು ಗಡಿಗೆ ಮಾರಾಟ ಮಾಡುವ ಗಾದಗಿ ಗ್ರಾಮದ ರವಿ ಎಂಬ ಯುವ ವ್ಯಾಪರಸ್ಥ ಹೇಳುತ್ತಾನೆ.
ತಾಂಡೂರ್, ಕೊಹೀರ್ನಿಂದ..: ಬೀದರ್ ಜಿಲ್ಲೆಯಲ್ಲಿ ದೊಡ್ಡ ರಂಜಣಗಿ, ಮಣ್ಣಿನ ಕೊಡ ಮಾತ್ರ ತಯಾರು ಮಾಡಲಾಗುತ್ತದೆ. ನಳ ಹಚ್ಚಿದ ಜಾಮ್ ತಾಂಡೂರ್, ಕೊಹೀರ್ನಲ್ಲಿ ತಯಾರು ಮಾಡಲಾಗುತ್ತಿದ್ದು, ಅಲ್ಲಿಂದ ತಂದು ಮಾರಾಟ ಮಾಡಲಾಗುತ್ತಿದೆಯಂತೆ.
ಜಿಲ್ಲೆಯಲ್ಲಿ ನಿರ್ಮಾಣ ವಾಗುವ ಗಡಿಗೆಗೆ 60ರಿಂದ 120 ಹಾಗೂ ಒಂದು ರಂಜಣೆಗೆಯ ಬೆಲೆ 500ರಿಂದ 800ರ ವರೆಗೆ ಇದೆ ಎನ್ನುತ್ತಾರೆ ಅಲ್ಲಿಯೇ ವ್ಯಾಪಾರ ಮಾಡುವ ನರಸಪ್ಪ ನಾವದಗೇರಿ.
ಸ್ವಲ್ಪ ಯಾಮಾರಿದರೂ ಹಾನಿ: ಈ ಕಾಯಕದಲ್ಲಿ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ. ವ್ಯಾಪಾರ ಮಾಡುತ್ತ ನಮ್ಮ ಗಮನ ಬೇರೆಡೆ ಹೋದರೆ ಸಾಕು ನಮಗೆ ಸಿಗುವ ಲಾಭವನ್ನೇ ಕಳೆದುಕೊಳ್ಳುವಂತಹ ಸ್ಥಿತಿ ಬಂದೊದಗುತ್ತದೆ. ಕೈಯಿಂದ ಜಾರಿ ಬಿದ್ದರೆ ಅಥವಾ ಏನಾದರೂ ತಾಗಿದರೆ ಸಾಕು ಮಣ್ಣಿನಿಂದ ತಯಾರಿಸಿದ್ದ ಇವುಗಳು ಚೂರುಚೂರಾಗಿ ದಿನದ ಒಂದಿಷ್ಟು ದುಡಿಮೆ ನೀರು ಪಾಲಾದಂತೆ.
ಗಡಿಗೆ ಮಾರಾಟದ ಮೇಲೆಯೇ ನಮ್ಮ ಸಂಪೂರ್ಣ ಪರಿವಾರ ಅವಲಂಬಿತವಾಗಿದ್ದು ಬೇಸಿಗೆಯ ಸಮಯದಲ್ಲಿ ಮಾತ್ರ ಮೂರ್ನಾಲ್ಕು ಜನರಿಗೆ ವ್ಯಾಪಾರ ಮಾಡಲು ಇಟ್ಟುಕೊಳ್ಳಲಾಗುತ್ತದೆ. ಮಳೆಗಾಲ ಆರಂಭವಾಗುತ್ತಲೇ ಕೇವಲ ಮನೆಯವರು ಒಬ್ಬರಿಬ್ಬರು ಇರುತ್ತಾರೆ.
ಪ್ರಕೃತಿಯ ಮಹಿಮೆಯೇ ವಿಚಿತ್ರ ಎಂಬಂತೆ ಬೇಸಿಗೆ ಕಾಲದಲ್ಲಿ ಮಣ್ಣಿನಿಂದ ನಿರ್ಮಿಸಿದ ಗಡಿಗೆಯ ನೀರು ಕುಡಿದರೆ ಬಾಯಾರಿಕೆ ಮಾಯವಾಗುತ್ತದೆ. ಅದೇ ಫ್ರಿಡ್ಜ್ ನೀರು ಕುಡಿದರೆ ಮತ್ತೆ ಮತ್ತೆ ಬಾಯಾರಿಕೆಯಾಗುತ್ತದೆ ಎಂಬುದು ಗೋಪಾಲ ಕುಲಕರ್ಣಿ ಅವರ ಅಂಬೋಣ.
ಬಡವರ ಫ್ರಿಡ್ಜ್ಗೆ ಫುಲ್ ಡಿಮ್ಯಾಂಡ್: ಬೇಸಿಗೆಯ ಕಾಲದಲ್ಲಿ ಅನೇಕ ಪಟ್ಟಣಗಳ ಮುಖ್ಯ ರಸ್ತೆಗಳಲ್ಲಿ ಮಣ್ಣಿನ ಗಡಿಗೆ ಇಟ್ಟು ಸಾರ್ವಜನಿಕರಿಗೆ ನೀರು ಕುಡಿಸುವ ಮೂಲಕ ಪುಣ್ಯದ ಕೇಲಸಕ್ಕೆ ಅನೇಕ ಜನರು ಮುಂದಾಗುವದನ್ನೂ ಕಾಣಬಹುದು. ಏನೇ ಇರಲಿ ಬಡವರ ಪಾಲಿನ ಫ್ರಿಡ್ಜ್ ಎಂದೇ ಗುರುತಿಸಲಾಗುವ ಮಣ್ಣಿನ ಗಡಿಗೆ ಜಾಮ್, ಸೂರಾಯಿಗೆಗೆ ಎಲ್ಲ ವರ್ಗಗಳಿಂದ ಎಲ್ಲಿಲ್ಲದ ಡಿಮ್ಯಾಂಡ್ ಬರುತ್ತಿರುವುದು ಉತ್ತಮ ಬೆಳವಣಿಗೆ.