ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಜನರ ನೋವು ಕಾವ್ಯದ ಧ್ವನಿಯಾಗಲಿ

Rashmi Kasaragodu
Updated On : 26 Mar 2013, 11:01 am

ಕನ್ನಡಪ್ರಭ ವಾರ್ತೆ   ಸಿಂಧನೂರು   ಮಾ.25
ಯುವ ಕವಿಗಳು ಸಮಾಜಮುಖಿ ಕವನಗಳನ್ನು ರಚಿಸಬೇಕು, ಕಾವ್ಯ ಸಮಾಜದ ಪ್ರತಿಬಿಂಬವಾಗಿದೆ. ಜನರ ನೋವು ಕಾವ್ಯದ ಧ್ವನಿಯಾಗಬೇಕೆಂದು ಹಿರಿಯ ಪತ್ರಕರ್ತ ಡಿ.ಎಚ್. ಕಂಬಳಿ ಹೇಳಿದರು.
ನಗರದ ಅನಿಕೇತನ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನವರು ಹಮ್ಮಿಕೊಂಡಿದ್ದ ದಿ. ರಾಜಾಸಾಬ ಸಾಹುಕಾರ ಮುಳ್ಳೂರು ಸ್ಮರಣಾರ್ಥ ದತ್ತಿ ಹಾಗೂ ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಕಾವ್ಯದಲ್ಲಿ ಲಯ, ಶಕ್ತಿ ಸಮಾಜದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಂತಹ ಕವನಗಳನ್ನು ರಚಿಸಲು ಯುವ ಕವಿಗಳು ಮುಂದಾಗಬೇಕು ಎಂದರು.
ಕನ್ನಡ ಕಾವ್ಯ ಬೇರೆ ಭಾಷೆಗೆ ಅನುವಾದವಾಗಲಿ: ಹಿರಿಯ ಸಾಹಿತಿ ಎಚ್.ಜಿ. ಹಂಪಣ್ಣನವರು ಕನ್ನಡ ಹಾಗೂ ಇಂಗ್ಲಿಷ್ ಕವನಗಳನ್ನು ವಾಚಿಸುವುದರ ಮೂಲಕ ಬಹುಭಾಷಾ ಕವಿಗೋಷ್ಠಿಯನ್ನು ಉದ್ಘಾಟಿಸಿ, ಭಾರತ ಬಹುಭಾಷೆಗಳನ್ನು ಹೊಂದಿದ ದೇಶ. ಇಲ್ಲಿ ಎಲ್ಲರೂ ಸೌಹಾರ್ದತೆಯಿಂದ ಜೀವನ ಸಾಗಿಸಬೇಕಾದರೆ ಭಾರತೀಯ ಭಾಷೆಗಳನ್ನು ತಿಳಿದುಕೊಳ್ಳಲು ಯತ್ನಿಸಬೇಕು. ಕನ್ನಡ ಭಾಷೆಯಲ್ಲಿರುವ ಕಾವ್ಯ ಬೇರೆ ಭಾಷೆಗೆ ಅನುವಾದವಾಗಬೇಕು. ಭಾರತೀಯ ಇತರ ಭಾಷೆಗಳಲ್ಲಿಯ ಸಾಹಿತ್ಯವು ಕನ್ನಡ ಭಾಷೆಗೆ ಬರಬೇಕು. ಕಾವ್ಯ ರಚಿಸುವುದರ ಜೊತೆಗೆ ಕಾವ್ಯ ವಾಚನ ಸ್ಪಷ್ಟವಾಗಿರಬೇಕೆಂದು ಯುವ ಕವಿಗಳಿಗೆ ಸಲಹೆ ನೀಡಿದರು.
ಸಹಕಾರದಿಂದ ಎಲ್ಲ ಕಾರ್ಯ ಸುಗಮ: ಕಸಾಪ ತಾಲೂಕಾಧ್ಯಕ್ಷೆ ರಮಾದೇವಿ ಶಂಭೋಜಿ, ಇತ್ತೀಚಿಗೆ ಯುವಕ- ಯುವತಿಯರು ಸಾಹಿತ್ಯ ಕ್ಷೇತ್ರದ ಕಾವ್ಯ ರಚನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಸಂತಸದ ಸಂಗತಿ. ಎಲ್ಲರ ಸಹಕಾರದಿಂದ ಸಾಹಿತ್ಯ ಪರಿಷತ್ತಿನ ಕಾರ್ಯಗಳು ಸುಗಮವಾಗಿ ಸಾಗುತ್ತಿವೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ಎಸ್.ದೇವೇಂದ್ರಗೌಡ, ಕೆಆರ್ಎಸ್ ಜಿಲ್ಲಾ ಮುಖಂಡ ಎಚ್.ಎನ್. ಬಡಿಗೇರ್, ಪತ್ರಕರ್ತ ಶ್ಯಾಂಕುಮಾರ್, ಆನಂದ ಪಬ್ಲಿಕ್ ಶಾಲೆಯ ಸಹ ಶಿಕ್ಷಕಿ ರಾಧಾ ಕೌದಿ, ದತ್ತಿ ದಾನಿಗಳ ಪರವಾಗಿ ರಮೇಶ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಕವನ ವಾಚನ: ಕವಯಿತ್ರಿಯರಾದ ಶಕುಂತಲಾ ದೇವೇಂದ್ರಗೌಡ, ಸಂಗೀತಾ ಸಾರಂಗಮಠ, ಬಸವರಾಜೇಶ್ವರಿ, ಬಸಮ್ಮ ತಾಳಿಕೋಟಿ, ಶಿವಗೀತಾ ಸಾನಬಾಳ, ಎಚ್.ಭಾರತಿದೇವಿ, ಕವಿಗಳಾದ ಬಸವರಾಜ ಕುಂಬಾರ್, ಬಸವರಾಜ್ ಹಳ್ಳಿ, ಬಸವರಾಜ ಪೂಜಾರ್, ಬಿ.ಕೊಟ್ರೇಶ್, ಬಾಳಪ್ಪ ಕೆ. ರಮೇಶ ಬಾಲಿ, ಹುಡಸಪ್ಪ ಹುಡಸೂರು, ಪರಮೇಶಪ್ಪ, ಶಿವಾನಂದ ಸಾತಿಹಾಳ್, ಹನುಮಂತಪ್ಪ ಆಮದಿಹಾಳ್, ಮಹಾಂತೇಶ ಟಿ. ಶಂಕರದೇವರು ಹಿರೇಮಠ, ರಾಮಣ್ಣ ಹಿರೇಬೇರಗಿ, ಕನ್ನಡ ಭಾಷೆಯಲ್ಲಿ ಕವನಗಳನ್ನು ವಾಚಿಸಿದರೆ, ವೈ.ನರೇಂದ್ರನಾಥ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ, ಗೌತಮ ಮೆಹತಾ ಅವರು ಹಿಂದಿ ಭಾಷೆಯಲ್ಲಿ ಕವನಗಳನ್ನು ವಾಚಿಸಿ ಗಮನ ಸೆಳೆದರು.
ಪತ್ರಕರ್ತೆ ಶಿವಲೀಲಾ ಹಿರೇಮಠ ಪ್ರಾರ್ಥಿಸಿದರು. ಗೌರವ ಕಾರ್ಯದರ್ಶಿ ಶ್ರೀಶೈಲ ಕೌದಿ ಸ್ವಾಗತಿಸಿದರು. ವಚನಗೀತಾ ವಂದಿಸಿದರು. ಗೌರವ ಕಾರ್ಯದರ್ಶಿ ವೀರೇಶ ಗೋನವಾರ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement