ನಾಳೆ ಅಮರೇಶ್ವರ ರಥೋತ್ಸವ ವೈಭವ
ಕನ್ನಡಪ್ರಭ ವಾರ್ತೆ ಲಿಂಗಸ್ಗೂರು ಮಾ.25
ತಾಲೂಕಿನ ಐತಿಹಾಸಿಕ ಸುಕ್ಷೇತ್ರ ಗುಡಗುಂಟಿ ಅಮರೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಮಾ.27ರಂದು ಸಂಜೆ 6 ಗಂಟೆಗೆ ಮಹಾ ರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ಮಾ.16 ರಂದು ರಾತ್ರಿ ಅಮರೇಶ್ವರ ಅಭಿನವ ಗುರುಗಜದಂಡ ಶ್ರೀಗಳ ನೇತೃತ್ವದಲ್ಲಿ ಹೊನ್ನಳ್ಳಿಯಿಂದ ಕಳಸ, ಯರಡೋಣಿಯಿಂದ ಉತ್ಸವ ಮೂರ್ತಿ, ದೇವರಭೂಪುರದಿಂದ ದೇವಾಲಯಕ್ಕೆ ಆಗಮನ. ಮಾ. 17ರಂದು ದೇವಸ್ಥಾನದ ಪಾದಗಟ್ಟಿಯ ಬಸವಪಟ ಕಂಕಣ ಕಟ್ಟುವುದು. ಮಾ.18ರಿಂದ ಅಮರೇಶ್ವರ ದೇವರಿಗೆ ವಿಶೇಷ ಪೂಜೆ ಆರಂಭವಾಗಿದ್ದು, ಮಾ.25ರಂದು ಸಂಜೆ 4 ಗಂಟೆಗೆ ಪ್ರಥಮ ಉತ್ಸವ, 6 ಗಂಟೆಗೆ ಗಜದಂಡ ಶ್ರೀಗಳು ಪಲ್ಲಕ್ಕಿ ಸಮೇತ ಗುರುಗುಂಟಾ ಸಂಸ್ಥಾನಕ್ಕೆ ಪ್ರಯಾಣ, ರಾತ್ರಿ ಸಂಸ್ಥಾನ ದರ್ಬಾರಿನಲ್ಲಿ ದೇವರ ಕಳಸ ಮೆರವಣಿಗೆ ಹಾಗೂ ಪುರವಂತಿಕೆ ಸೇವೆಗಳು ಜರುಗಿದವು.
ಇಂದು ಕ್ಷೇತ್ರಕ್ಕೆ ಕಳಸ ಆಗಮನ: ಮಾ. 26ರಂದು ಗುರುಗುಂಟಾ ಸಂಸ್ಥಾನದಿಂದ ಅಮರೇಶ್ವರ ಕ್ಷೇತ್ರಕ್ಕೆ ಶ್ರೀಗಳು ಮತ್ತು ಕಳಸ, ಪಲ್ಲಕ್ಕಿಯೊಂದಿಗೆ ದೇವಾಲಯಕ್ಕೆ ಆಗಮನ. ಸಂಜೆ 4.30 ಗಂಟೆಗೆ ದೇವರ ದ್ವಿತೀಯ ಉತ್ಸವ, ಸಂಜೆ 6 ಗಂಟೆಗೆ ಶ್ರೀಗಳ ಜೊತೆ ಕಳಸ, ಉತ್ಸವ ಮೂರ್ತಿ ಗುಂತಗೋಳ ಸಂಸ್ಥಾನಕ್ಕೆ ಪ್ರಯಾಣ, ನಂತರ ಕೃಷ್ಣಾ ನದಿಯಲ್ಲಿ ಸ್ನಾನ, ಅಮರೇಶ್ವರ ಕಟ್ಟೆಯಲ್ಲಿ ಸಂಸ್ಥಾನಿಕರಿಂದ ವಿಶೇಷ ಪೂಜೆಗಳು ಜರುಗಲಿವೆ.
ನಾಳೆ ರಥೋತ್ಸವ: ಮಾ.27ರಂದು ಬೆಳಗ್ಗೆ 6 ಗಂಟೆಗೆ ಗುಂತಗೋಳ ಸಂಸ್ಥಾನದಿಂದ ಅಮರೇಶ್ವರ ದೇವಾಲಯಕ್ಕೆ ಗಜದಂಡ ಶ್ರೀಗಳು, ಕಳಸ, ಉತ್ಸವ ಮೂರ್ತಿ ಆಗಮನ, ಬೆಳಗ್ಗೆ 9 ಗಂಟೆಗೆ ತೃತೀಯ ಉತ್ಸವ, ಮಧ್ಯಾಹ್ನ 3 ಗಂಟೆಗೆ ರಥೋತ್ಸವಕ್ಕೆ ಕಳಸಾರೋಹಣ, ಸಂಜೆ 6 ಗಂಟೆಗೆ ಮಹಾರಥೋತ್ಸವ ಕಾರ್ಯಕ್ರಮಗಳು ಜರುಗಲಿವೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.