ವಲಯ ಘಟಕಗಳ ಸ್ಥಾಪನೆ ಶೀಘ್ರ: ಕಸಾಪ (ಸಂಕ್ಷಿಪ್ತ ಸುದ್ದಿ)
ಮಸ್ಕಿ: ಸಾಹಿತ್ಯ ಚಟುವಟಿಕೆಗಳನ್ನು ವಿಸ್ತರಿಸುವ ಹಿನ್ನೆಲೆಯಲ್ಲಿ ಅಜೀವ ಸದಸ್ಯರು ಹೆಚ್ಚಿರುವ ಸ್ಥಳಗಳಲ್ಲಿ ಸಾಹಿತ್ಯ ಪರಿಷತ್ತಿನ ವಲಯ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಮಹಾಂತೇಶ್ ಮಸ್ಕಿ ಹೇಳಿದರು. ಪಟ್ಟಣದ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ನಡೆದ ಮಸ್ಕಿ ಘಟಕದ ನೂತನ ಕಾರ್ಯಕಾರಿ ಪಟ್ಟಿ ಬಿಡುಗಡೆ ಸಭೆಯಲ್ಲಿ ಮಾತನಾಡಿ, ಶಕ್ತಿನಗರ, ಕವಿತಾಳ, ಸಿರವಾರಗಳಲ್ಲಿ ಕಸಾಪ ಗ್ರಾಮ ಘಟಕಗಳನ್ನು ಶೀಘ್ರದಲ್ಲಿಯೇ ಸ್ಥಾಪಿಸಲಾಗುತ್ತದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಗೌರವಾಧ್ಯಕ್ಷ ಎಸ್.ಶರಣೇಗೌಡ, ಮಸ್ಕಿ ಘಟಕದ ಕಾರ್ಯಾಕಾರಿ ಸಮಿತಿ ಪಟ್ಟಿ ಬಿಡುಗಡೆ ಮಾಡಿ, ಗ್ರಾಮೀಣ ಭಾಗಗಳಲ್ಲಿ ಸಾಹಿತ್ಯಾಭಿರುಚಿ ಬೆಳೆಸುವಲ್ಲಿ ಘಟಕ ಮುಂದಾಗಲಿ ಎಂದು ಮನವಿ ಮಾಡಿದರು. ಜಿಲ್ಲಾ ಗೌರವ ಕಾರ್ಯದರ್ಶಿ ಎಸ್.ದೇವೆಂದ್ರಗೌಡ್ರು ಘಟಕವು ಹಮ್ಮಿಕೊಳ್ಳಬೇಕಾದ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಗೌರವ ಸಲಹೆಗಾರರಾದ ಪತ್ರಕರ್ತ ಉಮೇಶ್ವರಯ್ಯ ಬಿದನೂರಮಠ, ದಯಾನಂದ ಜೋಗಿನ್, ಹನುಮೇಶ ಕುಲಕರ್ಣಿ, ನೂತನ ಪದಾಧಿಕಾರಿಗಳು, ಸಾಹಿತ್ಯಾಭಿಮಾನಿಗಳು ಭಾಗವಹಿಸಿದ್ದರು.