ಕಾಂಗ್ರೆಸ್ ಅಧಿಕಾರಕ್ಕೆ: ಹಂಪನಗೌಡ ವಿಶ್ವಾಸ
ಕ.ಪ್ರ. ವಾರ್ತೆ,ಸಿಂಧನೂರು,ಮಾ.26
ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಅಭೂತಪೂರ್ವ ಜಯ ಗಳಿಸಲು ಸಾಧ್ಯವಾಗಿದೆ. ಇದರ ಬೆನ್ನಲ್ಲಿಯೇ ನಡೆಯುವ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗಳಿಸಿ ಅಧಿಕಾರದ ಗದ್ದು ಹಿಡಿಯಲಿದೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಹಂಚಿನಾಳ ಕ್ಯಾಂಪಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಮಾವೇಶ ಹಾಗೂ ಸೇರ್ಪಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಳೆದ 5 ವರ್ಷದಲ್ಲಿ ಬಿಜೆಪಿ ಹಲವಾರು ಹಗರಣಗಳಲ್ಲಿ ತೊಡಗುವ ಮೂಲಕ ರಾಜ್ಯದ ಖಜಾನೆಯನ್ನು ಲೂಟಿ ಮಾಡಿದೆ. ರಾಜ್ಯ ಮುಖ್ಯಮಂತ್ರಿ ಹಾಗೂ ಮಂತ್ರಿಗಳು ಜೈಲು ಅನುಭವಿಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. 1 ಲಕ್ಷ ಕೋಟಿಗೂ ಅಧಿಕ ಬಜೆಟ್ ಮಂಡಿಸಿದರೂ ಕನಿಷ್ಠ 12 ತಾಸು ವಿದ್ಯುತ್ ನೀಡಲು ಸರ್ಕಾರದಿಂದ ಸಾಧ್ಯವಾಗಿಲ್ಲ. ಮತದಾರರು ಕಾಂಗ್ರೆಸ್‌ಗೆ ಬೆಂಬಲಿಸುವ ಮೂಲಕ ಬಿಜೆಪಿಗೆ ಪಾಠ ಕಲಿಸಲಿದ್ದಾರೆ. ಕೆಜೆಪಿ, ಬಿಎಸ್ಸಾರ್ ಆಟಕ್ಕುಂಟು ಲೆಕ್ಕಕ್ಕಿಲ್ಲವಾಗಿದೆ. ಜೆಡಿಎಸ್ ತಂದೆ- ಮಕ್ಕಳಿಗೆ ಸೀಮಿತವಾಗಲಿದೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಾಗುವುದು. ತುಂಗಭದ್ರಾ, ಕೃಷ್ಣಾ ನದಿಗಳ ಉಳಿದ ಯೋಜನೆಗಳನ್ನು ಪೂರ್ಣಗೊಳಿಸಿ ರೈತರ ಹಿತ ಕಾಯಲಿದೆ. ಸ್ಥಳೀಯವಾಗಿಯೂ ಕಾಂಗ್ರೆಸ್‌ಗೆ ಮತ ನೀಡಬೇಕೆಂದು ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡ ಲಿಂಗರಾಜ ಪಾಟೀಲ್ ಮಾತನಾಡಿದರು. ಈ ವೇಳೆ ಕೆಪಿಸಿಸಿ ಸದಸ್ಯ ಎನ್.ಶಿವನಾಗಪ್ಪ, ಮುಖಂಡರಾದ ಎಂ.ಕಾಳಿಂಗಪ್ಪ, ಯಮನಪ್ಪ ಮಲ್ಲಾಪುರ, ಹನುಮಂತಪ್ಪ ಮುದ್ದಾಪುರ, ಜಿಪಂ ಸದಸ್ಯ ಶಿವನಗೌಡ ಎಲೆಕೂಡ್ಲಿಗಿ, ಮಲ್ಲನಗೌಡ ಕನ್ನಾರಿ, ಎನ್.ಭೀಮನಗೌಡ ಗೊರೇಬಾಳ, ಶರಣಪ್ಪ, ತಿಪ್ಪಣ್ಣ, ಜಿ.ಕೃಷ್ಣಮೂರ್ತಿ, ಲಕ್ಷ್ಮಯ್ಯ, ಎನ್.ವಿ. ಸತ್ಯನಾರಾಯಣ, ಸಿಂಹಾದ್ರಿ ಸತ್ಯನಾರಾಯಣ, ನಗರಸಭಾ ಸದಸ್ಯ ಶೇಖರಪ್ಪ ಗಿಣಿವಾರ, ಇತರರು ಇದ್ದರು.
ಗೊರೇಬಾಳ ಗ್ರಾಪಂ ಮಾಜಿ ಅಧ್ಯಕ್ಷ ದುರ್ಗಾ ಪ್ರಸಾದ, ಮೌನೇಶ, ಮಹಿಬೂಬ್, ಪಿ.ರಾಜು, ಪಾಲಾಪ್ರಸಾದ, ಅಜ್ಮೀರಸಾಬ್, ವೀರಯ್ಯ ಸ್ವಾಮಿ ಸೇರಿದಂತೆ ನೂರಾರು ಜನ ಕಾಂಗ್ರೆಸ್‌ಗೆ ಸೇರ್ಪಡೆಯಾದರು.