ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಜನಸೇವೆಗೆ ಶುದ್ಧ ಹಸ್ತ, ಪ್ರಾಮಾಣಿಕತೆ ಬಂಡವಾಳ

Lingaraj Badiger
Updated On : 27 Mar 2013, 10:40 am

ಕ.ಪ್ರ. ವಾರ್ತೆ,ಲಿಂಗಸ್ಗೂರು,ಮಾ.26
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾಯಿತ ಜನಪ್ರತಿನಿಧಿಗಳು ತಮ್ಮ ವ್ಯಾಪ್ತಿಯ ಅಭಿವೃದ್ಧಿಗೆ ಹಾಗೂ ಜನಸೇವೆಗೆ ಶುದ್ಧಹಸ್ತರಾಗಿ ಮತ್ತು ಪ್ರಾಮಾಣಿಕತೆಯನ್ನೇ ಬಂಡವಾಳವನ್ನಾಗಿಸಿಕೊಂಡು ಶ್ರಮಿಸಬೇಕೆಂದು ರಾಯಚೂರು ಮತ್ತು ಕೊಪ್ಪಳ ಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ ವೈದ್ಯ ಸಲಹೆ ನೀಡಿದರು.
ಸ್ಥಳೀಯ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಓಂ ಕಾಮಧೇನು ಪತ್ತಿನ ಸೌಹಾರ್ದ ಸಹಕಾರ ನಿಯಮಿತದಿಂದ ಹಮ್ಮಿಕೊಂಡಿದ್ದ ಪುರಸಭೆ ನೂತನವಾಗಿ ಆಯ್ಕೆಗೊಂಡ ಬ್ರಾಹ್ಮಣ ಸಮಾಜದ ಸದಸ್ಯರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವದ ಆರ್ಥಿಕತೆಯನ್ನೇ ತನ್ನ ಹತೋಟಿಯಲ್ಲಿಟ್ಟುಕೊಂಡಿದ್ದ ಅಮೆರಿಕ ಇಂದು ಆರ್ಥಿಕವಾಗಿ ಹಿನ್ನೆಡೆ ಅನುಭವಿಸುತ್ತಿದೆ. ಆದರೆ ನಮ್ಮ ದೇಶ ಆರ್ಥಿಕವಾಗಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಇದಕ್ಕೆ ಕಾರಣ ಕೃಷಿ ಮತ್ತು ಸಹಕಾರಿ ಕ್ಷೇತ್ರದ ಪ್ರಾಧಾನ್ಯತೆ ಹಾಗೂ ಕೌಟುಂಬಿಕ ಮತ್ತು ಉದ್ಯೋಗ ಕ್ಷೇತ್ರದ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖ ಕಾರಣವಾಗಿದೆ.
ನಾಗರಿಕರ ಸಮಸ್ಯೆಗೆ ಸ್ಪಂದಿಸಿ: ಈ ನಿಟ್ಟಿನಲ್ಲಿ ಸಹಕಾರಿ ಬ್ಯಾಂಕುಗಳು ಕೇವಲ ಒಂದು ಸಮಾಜಕ್ಕೆ ಸೀಮಿತವಾಗದೆ ಎಲ್ಲ ವರ್ಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಪಥದತ್ತ ಸಾಗಬೇಕು. ಪುರಸಭೆಗೆ ನೂತನವಾಗಿ ಆಯ್ಕೆಗೊಂಡ ಸದಸ್ಯರು ತಮ್ಮ ವಾರ್ಡಿನ ಅಭಿವೃದ್ಧಿಗೆ ಶ್ರಮಿಸುವ ಜೊತೆಗೆ ನಾಗರಿಕರಿಗೆ ಮೂಲ ಸೌಕರ್ಯ ಕಲ್ಪಿಸುವತ್ತ ಗಮನ ಹರಿಸಬೇಕೆಂದು ಕರೆ ನೀಡಿದರು.
ಸಮಾರಂಭದಲ್ಲಿ ಸಹಕಾರಿ ಬ್ಯಾಂಕ್ ಅಧ್ಯಕ್ಷ ರಮೇಶ ಜೋಷಿ, ಉಪಾಧ್ಯಕ್ಷೆ ಪ್ರಭಾವತಿ ಕುಲ್ಕರ್ಣಿ, ವ್ಯವಸ್ಥಾಪಕ ಗೋವಿಂದಾಚಾರ್ಯ ಪುರೋಹಿತ್, ಉಪನ್ಯಾಸಕ ಡಿ.ಡಿ. ಮುತಾಲಿಕ್, ರಾಘವೇಂದ್ರ ಮಠದ ವಿಚಾರಣಾಕರ್ತ ಶ್ಯಾಮಸುಂದರ ಮುತಾಲಿಕ್ ಸೇರಿದಂತೆ ಇದ್ದರು.
ಇದೇ ವೇಳೆ ಪುರಸಭೆ ನೂತನ ಸದಸ್ಯರಾದ ಶಾಂತಾಬಾಯಿ ವಸಂತ ಮಾಧವರಾವ್ ಕುಲ್ಕರ್ಣಿ ಹಾಗೂ ಗುಂಡೂರಾವ್ ಪಾಂಡುರಂಗರಾವ್ ಕುಲ್ಕರ್ಣಿ ಅವರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement