ತುರ್ವಿಹಾಳ ಹೋಬಳಿ ಜನತೆ ತತ್ತರ
ಸಿಂಧನೂರು: ಕಳೆದ ಒಂದು ತಿಂಗಳಿಂದ ವಿದ್ಯುತ್ ಲೋಡ್ ಶೆಡ್ಡಿಂಗ್ ವಿಪರೀತ ಹೆಚ್ಚಿದ ಪರಿಣಾಮ ತಾಲೂಕಿನ ತುರ್ವಿಹಾಳ ಹೋಬಳಿ ಜನತೆ ಹಲವು ಸಮಸ್ಯೆಗಳಿಂದ ತತ್ತರಿಸುತ್ತಿದ್ದಾರೆ.
ಕುಡಿಯುವ ನೀರು, ಹಿಟ್ಟಿನ ಗಿರಣಿ, ಪಂಪ್ ಸೆಟ್ ಮತ್ತಿತರ ಕೆಲಸ ಕಾರ್ಯಗಳಿಗೆ ತೀವ್ರ ತೊಂದರೆ ಉಂಟಾಗಿದೆ. ವಿದ್ಯುತ್ ಕಣ್ಣಾಮುಚ್ಚಾಲೆ ಆಟದಿಂದ ಉಮಲೂಟಿ, ಬುಕ್ಕನಹಟ್ಟಿ, ಗೊರಲೂಟಿ, ವೀರಾಪುರ, ಗುಂಡಾ, ಹೊಗರನಾಳ, ಸಂಕನಾಳ, ಕಲ್ಮಂಗಿ, ಚಿಕ್ಕಬೇರ್ಗಿ, ಹಿರೇಬೇರ್ಗಿ, ಭೋಗಾಪುರ ಸೇರಿದಂತೆ ಇನ್ನಿತರ ಗ್ರಾಮಗಳ ಜನತೆ ಯಾತನೆ ಅನುಭವಿಸುವಂತಾಗಿದೆ. ವಿದ್ಯುತ್ ಸಮರ್ಪಕ ಪೂರೈಕೆಯಾಗದ ಕಾರಣ ಪಂಪ್‌ಸೆಟ್ ಅವಲಂಬಿಸಿದ ರೈತರ ಹೊಲಗಳಲ್ಲಿನ ಬೆಳೆ ಒಣಗುತ್ತಿವೆ. ರಾತ್ರೋ ರಾತ್ರಿ ಗೊತ್ತಾಗದಂತೆ ವಿದ್ಯುತ್ ಕೊಟ್ಟು ಪದೇ ಪದೇ ತೆಗೆಯುತ್ತಿರುವುದರಿಂದ ರೈತರು ಚಿಂತೆಗೀಡಾಗಿದ್ದಾರೆ. ಬೇಸಿಗೆಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಕುಡಿಯವ ನೀರಿನ ಸಮಸ್ಯೆ ಉಂಟಾಗಿದ್ದು, ಇದನ್ನು ಅರಿತು ಜೆಸ್ಕಾಂ ಅಧಿಕಾರಿಗಳು ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕೆಂದು ಬಿಜೆಪಿ ಯುವ ಮುಖಂಡ ಎಂ.ಡಿ.ಇಸ್ಮಾಯಿಲ್ ತುರ್ವಿಹಾಳ ಒತ್ತಾಯಿಸಿದ್ದಾರೆ.