ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಪ್ರಚಾರ ರಂಗು ನೀರಸ

Lingaraj Badiger
Updated On : 27 Mar 2013, 10:38 am

ಕ.ಪ್ರ. ವಾರ್ತೆ,ಲಿಂಗಸ್ಗೂರು/ಮುದಗಲ್, ಮಾ.26
ವಿಧಾನಸಭೆ ಚುನಾವಣೆ ಮಹಾಸಮರಕ್ಕೆ 39 ದಿನ ಮಾತ್ರ ಬಾಕಿ ಉಳಿದಿದ್ದು, ಕೆಲ ಪಕ್ಷಗಳು ಇನ್ನೂ ಅಭ್ಯರ್ಥಿಗಳನ್ನು ಆಯ್ಕೆ ಮಾಡದ ಕಾರಣ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕಾರ್ಯದ ರಂಗು ನೀರಸವೆನಿಸುತ್ತಿದೆ. ಕಾರಣ ವಿವಿಧ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಉತ್ಸಾಹ ಕುಗ್ಗಿದಂತಿದೆ.
ಜಿಲ್ಲೆಯಲ್ಲಿ ರಾಜಕೀಯ ಕೇಂದ್ರ ಬಿಂದುವೆಂದು ಹೆಸರಾದ ಲಿಂಗಸ್ಗೂರು ಕ್ಷೇತ್ರ ಸುಮಾರು 1.88 ಲಕ್ಷ ಮತದಾರರನ್ನು ಹೊಂದಿದ್ದು, ಕ್ಷೇತ್ರದ ಗಣ್ಯರು ವಿವಿಧ ಜಿಲ್ಲೆಗಳ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಶಾಸಕ, ಸಚಿವ, ಸಂಸದರನ್ನು ನೀಡಿದ ಹೆಮ್ಮೆಯ ಕ್ಷೇತ್ರವೆನಿಸಿದೆ. 2008ರ ವಿಧಾಸಭೆ ಚುನಾವಣೆಯಿಂದ ಮೀಸಲು ಕ್ಷೇತ್ರವೆಂದು ಘೋಷಣೆಯಾಗಿದ್ದು, ಕಳೆದ ಬಾರಿ ಮಾನಪ್ಪ ವಜ್ಜಲರು ಬಿಜೆಪಿಯಿಂದ ಸ್ಪರ್ಧಿಸಿ ಹೆಚ್ಚಿನ ಮತಗಳನ್ನು ಪಡೆದು ಆಯ್ಕೆಗೊಂಡಿದ್ದರು.
ಆಕಾಂಕ್ಷಿಗಳ ದಂಡು: ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದಿಂದ ಸ್ಪರ್ಧಿಸಲು ಸುಮಾರು 6 ತಿಂಗಳಿಂದ ಸ್ಥಳೀಯರಷ್ಟೇ ಅಲ್ಲದೆ, ಬೇರೆ ಬೇರೆ ತಾಲೂಕುಗಳಿಂದ ಪ್ರಬಲ ಆಕಾಂಕ್ಷಿಗಳ ದಂಡು ಹರಿದುಬಂದಿದೆ. ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮತದಾರರನ್ನು ತಮ್ಮತ್ತ ಸೆಳೆಯುವಲ್ಲಿ ನಿರತರಾಗುತ್ತಾ ಎಲ್ಲರಲ್ಲಿ ಅಚ್ಚರಿಯನ್ನುಂಟು ಮಾಡಿದ್ದರು.
ವಿಧಾಸಭೆ ಚುನಾವಣೆಗೆ ಮುನ್ನುಡಿ ಎಂಬಂತೆ ಪುರಸಭೆ ವ್ಯಾಪ್ತಿಯ 23 ವಾರ್ಡುಗಳಿಗೆ ಮಾ.7ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದು, ಜೆಡಿಎಸ್‌ಗೆ ಹಿನ್ನಡೆಯಾಗಿದೆ. ಅದರಂತೆ ಕೆಜೆಪಿ ಮತ್ತು ಬಿಎಸ್ಸಾರ್ ಕೂಡ ಪ್ರಥಮ ಬಾರಿಗೆ ಖಾತೆ ತೆಗೆದಿವೆ. ಆದರೂ ಪುರಸಭೆಗೆ ಅಧಿಕಾರ ಚುಕ್ಕಾಣಿ ಹಿಡಿಯಲು ಅತಂತ್ರ ಪರಿಸ್ಥಿತಿ ಬಂದೊದಗಿದೆ. ಈ ಮಿನಿ ಕದನ ಮುಗಿಸಿ ಸೋಲು- ಗೆಲವಿನ ಪರಾಮರ್ಶೆಯಲ್ಲಿ ತೊಡಗಿದ್ದ ವಿವಿಧ ಪಕ್ಷಗಳ ಮುಖಂಡರಿಗೆ ವಿಧಾನಸಭೆ ಚುನಾವಣೆ ಎದುರಾಗಿದ್ದು ವಿಶ್ರಾಂತಿ ಇಲ್ಲದಂತಾಗಿದೆ.
ಕೆಜೆಪಿ, ಬಿಎಸ್ಸಾರ್ ಅಭ್ಯರ್ಥಿ ಮಾತ್ರ ಘೋಷಣೆ: ಈ ಮಹಾಸಮರ ಜಿಲ್ಲೆಯಲ್ಲಿ ಎಲ್ಲರ ಚಿತ್ತ ಲಿಂಗಸ್ಗೂರು ಕ್ಷೇತ್ರದತ್ತ ಎನ್ನುವಂತಾಗಿದ್ದು, ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಲು ಕೆಜೆಪಿಯಿಂದ ಎಚ್.ಬಿ. ಮುರಾರಿ, ಬಿಎಸ್ಸಾರ್‌ನಿಂದ ಸಿದ್ದು ಬಂಡಿ ಈಗಾಗಲೇ ಅಧಿಕೃತ ಅಭ್ಯರ್ಥಿಗಳೆಂದು ಘೋಷಣೆಗೊಂಡು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಶಾಸಕ ಮಾನಪ್ಪ ವಜ್ಜಲರು ಜೆಡಿಎಸ್‌ನಿಂದ ಸ್ಪರ್ಧಿಸುವರೆಂದು ಹೇಳಲಾಗುತ್ತಿದೆ. ಆದರೆ ಇನ್ನು ಅಧಿಕೃತವಾಗಿ ಘೋಷಣೆಯಾಗಿಲ್ಲ.
ಇನ್ನು ಆಡಳಿತಾರೂಢ ಬಿಜೆಪಿಯಿಂದ ಪಾಂಡುರಂಗ ಪಮ್ಮಾರ ಹೆಸರು ಕೇಳಿಬರುತ್ತಿದ್ದು, ಇನ್ನೂ ಅಂತಿಮವಾಗಿಲ್ಲ. ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿಗಳ ಪೈಕಿ ಡಿ.ಎಸ್. ಹುಲಿಗೇರಿ, ಟಿ.ಆರ್.ನಾಯಕ ಮತ್ತು ಪಾಮಯ್ಯ ಮುರಾರಿ ಇವರಲ್ಲಿ ಒಬ್ಬರ ಹೆಸರು ಘೋಷಣೆಯಾಗಿಲಿದೆ ಎನ್ನಲಾಗಿದ್ದು, ಹೋಳಿ ಹಬ್ಬದ ನಂತರ ಅಧಿಕೃತ ಘೋಷಣೆ ಮಾಡುವುದಾಗಿ ಸ್ಪಷ್ಟಪಡಿಸಿದೆ. ಇದರಿಂದ ಈ ಮೂರು ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಪ್ರಚಾರದ ಉತ್ಸಾಹವಿದ್ದರೂ ಮೌನಕ್ಕೆ ಶರಣಾಗಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಸಮಿತಿಯಲ್ಲಿ ಬಣ?: ಅಲ್ಲದೆ ಇತ್ತೀಚಿನ ಕಾಂಗ್ರೆಸ್ ಬೆಳವಣಿಗೆ ಗಮನಿಸಿದರೆ ಬ್ಲಾಕ್ ಕಾಂಗ್ರೆಸ್ ಸಮಿತಿಯಲ್ಲಿ ಎರಡು ಬಣಗಳು ಹುಟ್ಟಿಕೊಂಡು ಮುಖಂಡರು ಕವಲು ದಾರಿಯಲ್ಲಿದ್ದಂತಿದೆ. ಬರುವ ಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್ ಕೊಡಿಸಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಮೇಟಿ ಹಾಗೂ ಕೆಲ ಮುಖಂಡರು ಟಿ.ಆರ್.ನಾಯಕರಿಗೆ ಬೆಂಬಲ ನೀಡಿದರೆ, ಕೆಪಿಸಿಸಿ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ ಹಾಗೂ ಕೆಲ ಮುಖಂಡರು ಗ್ರಾನೈಟ್ ಉದ್ಯಮಿ ಡಿ.ಎಸ್. ಹುಲಿಗೇರಿ ಪರ ನಿಂತಿದ್ದಾರೆ.
ಯಾವ ಮತ ನಿರ್ಣಾಯಕ?: ಇನ್ನು ಜಾತಿ ಲೆಕ್ಕಾಚಾರದಲ್ಲಿರುವ ವಿವಿಧ ಪಕ್ಷದ ಮುಖಂಡರು ಜೆಡಿಎಸ್, ಬಿಎಸ್ಸಾರ್ ಕಾಂಗ್ರೆಸ್ ಮತ್ತು ಕಾಂಗ್ರೆಸ್‌ನಿಂದ ಭೋವಿ ಸಮಾಜದವರು ಸ್ಪರ್ಧಿಸಿದರೆ, ಬಿಜೆಪಿಯಿಂದ ಲಂಬಾಣಿ, ಕೆಜೆಪಿಯಿಂದ ಮಾದಿಗ ಸಮಾಜದ ಅಭ್ಯರ್ಥಿ ಕಣಕ್ಕೆ ಇಳಿದರೆ ಲಿಂಗಾಯತ ಮತ್ತು ನಾಯಕ ಸಮಾಜದ ಮತಗಳು ನಿರ್ಣಾಯಕವಾಗಲಿವೆ.
ಹಣ ಬಲ: ಹಾಲಿ ಶಾಸಕ ಮಾನಪ್ಪ ವಜ್ಜಲ್ ಮತದಾರರಿಗೆ ಹಣದ ಆಮಿಷ ತೋರಿಸಿ ಗೆಲ್ಲಲು ಮುಂದಾಗಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಅವರು ಅಭಿವೃದ್ಧಿಗೆ ಶ್ರಮಿಸಿಲ್ಲ ಎನ್ನುವ ಅಪಸ್ವರವೂ ಇದೆ. ಇವರನ್ನು ಹಣಿಯಲು ಪ್ರತಿ ಪಕ್ಷ ಕಾಂಗ್ರೆಸ್ ರಣತಂತ್ರ ರೂಪಿಸಿ ಹಣ ಬಲಕ್ಕೂ ಸೈ, ಜನ ಬಲಕ್ಕೂ ಸೈ ಎನ್ನುವ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಚುನಾವಣೆಯ ರಂಗು ಬದಲಾಗುತ್ತದೆ.
ಮತ್ತೆ ಕೆಲ ಪಕ್ಷದ ನಿಷ್ಠಾವಂತ ಮುಖಂಡರು ತಮಗೆ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ. ಏತನ್ಮಧ್ಯೆ ಪಕ್ಷದ ಹೈಕಮಾಂಡ್ ಅಂತಿಮವಾಗಿ ಅಭ್ಯರ್ಥಿ ಘೋಷಣೆ ಮಾಡಿದರೆ ಪಕ್ಷದ ಜವಾಬ್ದಾರಿಯುತ ಮುಖಂಡರು ಹಾಗೂ ಕಾರ್ಯಕರ್ತರು ಎಲ್ಲರೂ ಒಗ್ಗಟ್ಟಾಗಿ ಅಭ್ಯರ್ಥಿ ಗೆಲವಿಗೆ ಎಷ್ಟರ ಮಟ್ಟಿಗೆ ಶ್ರಮಿಸುತ್ತಾರೆಂಬುದು ಕಾದು ನೋಡಬೇಕಿದೆ.

- ಅಮರೇಶ ಸ್ವಾಮಿ/ಪಂಪಯ್ಯ ಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement