ಬಿಎಸ್ಸಾರ್ ಕಾಂಗ್ರೆಸ್ ಕಾರ್ಯಕರ್ತರ ಸಭೆ
ಮಸ್ಕಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಮಾಜಿ ಸಚಿವ ಶ್ರೀರಾಮುಲು ಅವರೇ ಕಾರಣ. ಅವರನ್ನು ಬಿಜೆಪಿಯಲ್ಲಿ ಕಡೆಗಣಿಸಲಾಯಿತು ಎಂದು ಮಸ್ಕಿ ಕ್ಷೇತ್ರದ ಬಿಎಸ್ಸಾರ್ ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ಶೇಖರಪ್ಪ ನಾಯಕ ಆರೋಪಿಸಿದರು.
ಪಟ್ಟಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಚುನಾವಣಾ ಪೂರ್ವಭಾವಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಬಿಎಸ್ಸಾರ್ ಕಾಂಗ್ರೆಸ್ ಪಕ್ಷವು ಜನಪರ ನಿಲುವುಗಳನ್ನು ಹೊಂದಿದ್ದು ಕ್ಷೇತ್ರದ ಜನತೆ ಪಕ್ಷದತ್ತ ಮುಖ ಮಾಡುತ್ತಿದ್ದು ಕಾರ್ಯಕರ್ತರಿಗೆ ಶ್ರೀರಾಮುಲು ಅವರ ಸಾಧನೆಗಳನ್ನು ವಿವರಿಸಿ ಗೆಲವಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಮನವಿ ಮಾಡಿದರು.
ಶಾಸಕರು ಕಳೆದ ಐದು ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡದೇ ಕಳೆದ ಎರಡು ತಿಂಗಳಿನಿಂದ ವಿವಿಧ ಕಾಮಗಾರಿಗಳ ಭೂಮಿ ಪೂಜೆಯಲ್ಲಿ ತೊಡಗಿದ್ದಾರೆಂದು ವ್ಯಂಗ್ಯವಾಡಿದರು.
ರಾಜಾಸಾಬ್ ಆಲಂಪುರ, ಸಹ ಸಂಚಾಲಕ ಹಾಗೂ ಮಾಜಿ ತಾಪಂ ಸದಸ್ಯ ಕರಿಯಪ್ಪ ಹಾಲಾಪುರು ಸೇರಿದಂತೆ ಅನೇಕರು ಮಾತನಾಡಿದರು. ಮೌನೇಶ ಮುರಾರಿ ಸ್ವಾಗತಿಸಿದರು. ವೀರೇಶ ನಿರೂಪಿಸಿದರು. ಸಂಜಯ್ ಕುಮಾರ್ ಸೇಠ್ ವಂದಿಸಿದರು. ಕಾರ್ಯಕ್ರಮದಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.