ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬೇಡಿಕೆ- 120 ಲಭ್ಯತೆ- 51 ಮೆಗಾ ವ್ಯಾಟ್

Lingaraj Badiger
Updated On : 27 Mar 2013, 10:46 am

ಕನ್ನಡಪ್ರಭ ವಾರ್ತೆ,ರಾಯಚೂರು,ಮಾ.26
ಬೇಸಿಗೆಯ ಬಿರುಬಿಸಿಲ ದಿನಗಳ ಆರಂಭದ ಜತೆಗೆ ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ ಮತ್ತು ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳ ಘಟಕಗಳು ದುರಸ್ತಿಗೆ ಸಿಲುಕಿರುವುದು ಸಂಕಷ್ಟ ಹೆಚ್ಚಿಸಿವೆ. ಪರಿಣಾಮ ಜಿಲ್ಲಾದ್ಯಂತ ವಿದ್ಯುತ್‌ನ ಮಿತಿಮೀರಿದ ಕಡಿತದಿಂದ ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ಆತಂಕಕ್ಕೆ ಸಿಲುಕುವಂತಾಗಿದೆ.
ಸದ್ಯ ಪಿಯುಸಿ ಪರೀಕ್ಷೆ ಜಾರಿಯಲ್ಲಿದೆ. ಮುಂದಿನ ತಿಂಗಳ ಆರಂಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದೆ. ಆದರೆ ವಿದ್ಯುತ್ ಅಭಾವದ ಸ್ಥಿತಿ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ವಿದ್ಯಾರ್ಥಿಗಳು ಮತ್ತು ಪಾಲಕರು ಭವಿಷ್ಯದ ಆತಂಕದಲ್ಲಿದ್ದಾರೆ.
ಇದು ಪರೀಕ್ಷೆ ಕಾಲ: ಜಿಲ್ಲೆಯಲ್ಲಿ ಕಳೆದ ಅನೇಕ ತಿಂಗಳಿಂದ ದಿನವೂ ವಿದ್ಯುತ್ ಕಡಿತ ಜಾರಿಯಲ್ಲಿದೆ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಡಿತಕ್ಕೆ ಮಿತಿಯೇ ಇಲ್ಲವಾಗಿದೆ. ಜಿಲ್ಲೆಯಲ್ಲಿ ವಿದ್ಯುತ್ ಉತ್ಪಾದಿಸುವ ಘಟಕಗಳಿದ್ದರೂ ಅನಿಯಮಿತ ವಿದ್ಯುತ್ ಕಡಿತ ಮುಂದುವರಿದಿದೆ.
ಜಿಲ್ಲೆಯಲ್ಲಿ ಕಳೆದ ವಾರವಷ್ಟೇ ಆರಂಭಗೊಂಡಿರುವ ಪಿಯುಸಿ ದ್ವಿತೀಯ ಪರೀಕ್ಷೆಗಳು ಮಾ.28 ರವರೆಗೆ ನಡೆಯಲಿವೆ. ಅದೇ ರೀತಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಏ.1ರಿಂದ ಆರಂಭಗೊಳ್ಳಲಿವೆ. ಸದ್ಯ ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆ ಹಿನ್ನೆಲೆಯಲ್ಲಿ ಭವಿಷ್ಯದ ಆತಂಕದಲ್ಲಿಯೇ ವ್ಯಾಸಂಗ ಮಾಡುತ್ತಿದ್ದಾರೆ.
ಪಾಲಕರಲ್ಲಿ ಆತಂಕ: ಆದರೆ ನಗರದಲ್ಲಿ ದಿನವೂ 6ರಿಂದ 8 ತಾಸು ವಿದ್ಯುತ್ ಕಡಿತವಾಗುತ್ತಿದೆ. ಗೊತ್ತು ಗುರಿಯಿಲ್ಲದ ವಿದ್ಯುತ್ ಕಡಿತದಿಂದಾಗಿ ಪಾಲಕರಲ್ಲೂ ಆತಂಕ ಹೆಚ್ಚಿದೆ. ದಿನದ ಬಹುಭಾಗ ಮತ್ತು ರಾತ್ರಿಯ ವೇಳೆಯೂ ವಿದ್ಯುತ್ ಕಡಿತಕ್ಕೆ ಮುಂದಾಗುವುದರಿಂದ ಸಮಸ್ಯೆ ಉಲ್ಬಣಿಸಿದೆ.
ಗ್ರಾಮೀಣ ಪ್ರದೇಶದಲ್ಲಿಯೂ ವಿದ್ಯುತ್ ಕಡಿತಕ್ಕೆ ಕೊನೆಯಿಲ್ಲವಾಗಿದೆ. ಹಗಲು ವೇಳೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಬಹುತೇಕ ಲಭ್ಯವಿರುವುದಿಲ್ಲ. ಹೀಗಾಗಿ ಗ್ರಾಮೀಣ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅವಕಾಶವಿಲ್ಲವಾಗಿದೆ. ಪರಿಣಾಮ ಈ ಬಾರಿಯ ಎರಡೂ ಪರೀಕ್ಷೆಗಳ ಫಲಿತಾಂಶದ ಬಗ್ಗೆ ಪಾಲಕರಲ್ಲಿ ಆತಂಕ ಮೂಡಿದೆ.
ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಹಗಲು ರಾತ್ರಿಯೆನ್ನದೇ ವಿದ್ಯುತ್ ಕಡಿತ ಮಾಡಲಾಗುತ್ತಿದ್ದು, ಅದರಿಂದ ರಾತ್ರಿ ನಿದ್ರೆಯಿಲ್ಲ. ಹಗಲು ಮನಸಿಗೆ ನೆಮ್ಮದಿಯಿಲ್ಲ ಎಂಬುದು ಜನರ ಆರೋಪ. ಮಾರ್ಚ್ ತಿಂಗಳ ಆರಂಭದೊಂದಿಗೆ ಜಿಲ್ಲೆಯಾದ್ಯಂತ ಬೇಸಿಗೆಯ ತಾಪ ಹೆಚ್ಚಳ ಕಂಡಿದೆ. ಕಳೆದೊಂದು ವಾರದಿಂದ ತಾಪಮಾನ 38ರಿಂದ 39 ಡಿಗ್ರಿ ಆಸುಪಾಸಿನಲ್ಲಿದೆ.
ಕಡಿತ ಅನಿವಾರ್ಯ: ಈ ಕುರಿತು “OÚ«Ú­sÚ®Úúڒ¥æàM¦Væ ಮಾತನಾಡಿದ ಜೆಸ್ಕಾಂ ಸೂಪರಿಟೆಂಡೆಂಟ್ ಎಂಜಿನಿಯರ್ ಶಂಕರ್ ತೋಟದ್ ಅವರು, ದಿನಗಳೆದಂತೆ ತಾಪಮಾನ ಏರಿಕೆ ಕಾಣುತ್ತಿರುವುದು ವಿದ್ಯುತ್‌ನ ಬಳಕೆಯ ಪ್ರಮಾಣ ಹೆಚ್ಚಿದೆ. ಅದರಿಂದಾಗಿ ಬೇಡಿಕೆಯಲ್ಲಿ ಏರಿಕೆಯಾಗಿದೆ. ಸದ್ಯ ಜಿಲ್ಲೆಗೆ 120 ಮೆಗಾ ವ್ಯಾಟ್ ವಿದ್ಯುತ್‌ನ ಅವಶ್ಯಕತೆಯಿದೆ. ಆದರೆ ಜಿಲ್ಲೆಗೆ ಕೇವಲ 51 ಮೆಗಾ ವ್ಯಾಟ್ ವಿದ್ಯುತ್ ದೊರೆಯುತ್ತಿದೆ. ಲಭ್ಯವಾಗುವ ವಿದ್ಯುತ್ ಎಲ್ಲರಿಗೂ ದೊರೆಯುವಂತೆ ಮಾಡುವಲ್ಲಿ ವಿದ್ಯುತ್ ಕಡಿತ ಅನಿವಾರ್ಯ ಎಂದು ಹೇಳಿದರು.
ಲಭ್ಯವಾಗುತ್ತಿರುವ 51 ಮೆಗಾ ವ್ಯಾಟ್ ವಿದ್ಯುತ್‌ನಲ್ಲಿಯೇ ಜಿಲ್ಲೆಯ ಜನರ ಬೇಡಿಕೆ ಈಡೇರಿಸುವಂಥ ದುಸ್ಥಿತಿ ಜೆಸ್ಕಾಂ ಅಧಿಕಾರಿಗಳಿಗೆ ಬಂದೊದಗಿದೆ. ಇದುವರೆಗೆ ಜಿಲ್ಲೆಗೆ ಭೇಟಿ ನೀಡಿದ ಬಿಜೆಪಿ ಸರ್ಕಾರದ ಇಂಧನ ಮಂತ್ರಿಗಳು ಜಿಲ್ಲೆಯಲ್ಲಿಯೇ ವಿದ್ಯುತ್ ಉತ್ಪಾದನೆಯಾಗುವುದರಿಂದ ನಿರಂತರ ವಿದ್ಯುತ್ ಒದಗಿಸುವ ಭರವಸೆ ಕೊಡುತ್ತಲೇ ಬಂದಿದ್ದರು. ಆದರೆ ಆ ಭರವಸೆ ಇದುವರೆಗೆ ಈಡೇರಿಲ್ಲ.
ಕುಡಿವ ನೀರಿಗೂ ತತ್ವಾರ: ಪರಿಣಾಮ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ಅಡಚಣೆಯಾದರೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಅಭಾವಕ್ಕೂ ವಿದ್ಯುತ್ ಕಡಿತ ಎಡೆ ಮಾಡಿದೆ. ಹೀಗಾಗಿ ಜನತೆಗೆ ವಿದ್ಯುತ್ ಕಡಿತ ಮತ್ತು ಬೇಸಿಗೆಯ ಬಿರುಬಿಸಿಲ ದಿನಗಳಲ್ಲಿಯೇ ಬದುಕು ಕಳೆಯುವಂತಾಗಿದೆ. ಜತೆಗೆ ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ವಿದ್ಯುತ್ ಅಭಾವದಿಂದ ವ್ಯಾಸಂಗಕ್ಕೆ ಪರದಾಡುವಂತಾಗಿದೆ.
ನೀತಿ ಸಂಹಿತೆಯ ಭೀತಿ ಮತ್ತು ಚುನಾವಣೆ ಎದುರಿಸುವತ್ತ ಗಮನಹರಿಸಿರುವ ಸರ್ಕಾರ ವಿದ್ಯುತ್ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಆಸಕ್ತಿ ತೋರದಿರುವುದು ಸಾರ್ವಜನಿಕರಲ್ಲಿ ಬೇಸರಕ್ಕೆ ಕಾರಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement