ಶಿಕ್ಷಕರ ನಿಯೋಜನೆ ರದ್ದು; ಡಿಡಿಪಿಐ
ರಾಯಚೂರು: ಜಿಲ್ಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ನಿಯೋಜನೆಯನ್ನು ಬೆಂಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ರದ್ದುಗೊಳಿಸಿದ್ದು, ಈ ಹಿನ್ನೆಲೆಯಲ್ಲಿ ನಿಯೋಜನೆ ಮೇಲಿರುವ ಶಿಕ್ಷಕರು ಮಾ. 30ರಂದು ಅವರ ಮಾತೃಶಾಲೆಗೆ ಸೇವೆಗೆ ಹಾಜರಾಗಲು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಡಿಡಿಪಿಐ ಕಚೇರಿಯು ಈಚೆಗೆ ಬೆಂಗಳೂರಿನಲ್ಲಿ ನಡೆದ ಎಲ್ಲ ಜಿಲ್ಲೆಗಳ ಡಿಡಿಪಿಐ ಗಳ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಆಯುಕ್ತರು ಈ ಆದೇಶ ಹೊರಡಿಸಿದ್ದು, ಡಿಡಿಪಿಐ ಮತ್ತು ಬಿಇಒ ಕಚೇರಿಗಳಿಂದ ಅನುಮೋದನೆ ಪಡೆದ ಮತ್ತು ಅನುಮೋದನೆ ಪಡೆಯದೇ ನಿಯೋಜನೆ ಮೇಲೆ ತೆರಳಿರುವ ಎಲ್ಲ ಶಿಕ್ಷಕರು ಮಾ. 30ರಂದು ಸದ್ಯದ ಶಾಲೆಯಿಂದ ಬಿಡುಗಡೆಗೊಂಡು ಮಾತೃಶಾಲೆಗೆ ಮರಳುವಂತೆ ಆದೇಶಿಸಿದ್ದಾರೆ.
ಈ ನಿಟ್ಟಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿರ್ಲಕ್ಷ್ಯ ತೋರಿದಲ್ಲಿ ಅವರನ್ನೇ ಹೊಣೆಯಾಗಿಸಿ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಡಿಪಿಐ ಕಚೇರಿ ಎಚ್ಚರಿಸಿದೆ.