ಎಡದಂಡೆ ಕಾಲುವೆಯಲ್ಲಿ ನೀರು ಸ್ಥಗಿತ ಗಣೇಕಲ್ ಸಂಗ್ರಹ ಕುಸಿತ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ರಾಯಚೂರು ಮಾ.27
ಬೇಸಿಗೆಯ ಬಿರು ಬಿಸಿಲ ದಿನಗಳು ಸಮೀಪಿಸುತ್ತಿದ್ದಂತೆಯೇ ನಗರ ಸೇರಿದಂತೆ ಜಿಲ್ಲಾದ್ಯಂತ ಕುಡಿಯುವ ನೀರಿನ ಬವಣೆ ಹೆಚ್ಚಾಗುವ ಲಕ್ಷಣಗಳು ಕಂಡಿವೆ. ಈಗಾಗಲೇ ಜಿಲ್ಲೆಯ ಕೆಲವೆಡೆ ಟ್ಯಾಂಕರ್ ಮೂಲಕ ನೀರೊದಗಿಸಲಾಗುತ್ತಿದೆ. ಜಿಲ್ಲಾಡಳಿತ ಚುನಾವಣೆಯತ್ತ ಹೆಚ್ಚಿನ ಗಮನ ನೀಡುತ್ತಿರುವುದರಿಂದ ನೀರಿಗಾಗಿ ಪರಿತಪಿಸುವ ಸ್ಥಿತಿ ನಿರ್ಮಾಣವಾಗುವ ಎಲ್ಲ ಸಾಧ್ಯತೆಗಳಿವೆ.
ನಗರದಲ್ಲಿ ಈಗಾಗಲೇ ಕಳೆದ ಎರಡು ತಿಂಗಳಿನಿಂದ ಎರಡು ದಿನಕ್ಕೊಮ್ಮೆ ನೀರು ಜನತೆಗೆ ಲಭ್ಯವಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಇದ್ದರೆ ನೀರು ಇಲ್ಲದಿದ್ದರೆ ನೀರಿಲ್ಲ ಎಂಬಂಥ ಸ್ಥಿತಿ. ಇನ್ನೂ ಕೆಲವೆಡೆ ಟ್ಯಾಂಕರ್ನಿಂದ ನೀರು ದೊರೆಯುತ್ತಿದೆ.
ಕೆರೆ ಭರ್ತಿ ಮಾಡಿ ನೀರು: ಜಿಲ್ಲೆಯ ಬಹುಭಾಗಕ್ಕೆ ತುಂಗಭದ್ರಾ ಮತ್ತು ಕೃಷ್ಣಾ ನದಿಗಳಿಂದ ನೀರೊದಗಿಸಲಾಗುತ್ತದೆ. ಅದರಲ್ಲೂ ತುಂಗಭದ್ರಾ ಎಡದಂಡೆ ಕಾಲುವೆಯ ಮೂಲಕ ಸಿಂಧನೂರು, ಮಾನವಿ ಹಾಗೂ ರಾಯಚೂರು ತಾಲೂಕಿನ ಅನೇಕ ಗ್ರಾಮಗಳಿಗೆ ನೀರೊದಗಿಸಲಾಗುತ್ತದೆ. ರಾಯಚೂರು ನಗರಕ್ಕೂ ಎಡದಂಡೆ ಕಾಲುವೆಯ ಮೂಲಕವೇ ರಾಂಪುರ ಕೆರೆ ಭರ್ತಿ ಮಾಡಿ ನೀರು ಒದಗಿಸಲಾಗುತ್ತದೆ.
ತುಂಗಭದ್ರಾ ಎಡದಂಡೆ ಕಾಲುವೆಗೆ ಮಾ.31ರವರೆಗೆ ನೀರು ಹರಿಸುವ ನಿರ್ಧಾರವನ್ನು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಈ ಹಿಂದೆ ಕೈಗೊಂಡಿತ್ತು. ಆದರೆ ಸಮಿತಿಯ ನಿರ್ಧಾರಕ್ಕೂ ಮುನ್ನವೇ ಜಲಾಶಯ ಬರಿದಾಗುವ ಹಂತಕ್ಕೆ ತಲುಪಿದೆ. ಈಗಾಗಲೇ ಎಡದಂಡೆಯ ಮೈಲ್ 90ರವರೆಗೆ ಮಾತ್ರ ನೀರು ಬಂದು ಸೇರುತ್ತಿದೆ. ಮುಂದೆ ನೀರು ಹರಿಯದೇ ಕಾಲುವೆ ಒಣಗಿದೆ.
ಗ್ರಾಮಗಳಿಗೆ ತಕ್ಕಮಟ್ಟಿಗೆ ನೀರು: ತುಂಗಭದ್ರಾ ಜಲಾಶಯದಿಂದ ಕಳೆದ ಕೆಲ ದಿನಗಳಿಂದ ಆಂಧ್ರಪ್ರದೇಶ ಕರ್ನೂಲು ನಗರಕ್ಕೆ ನೀರೊದಗಿಸುವ ಉದ್ದೇಶದಿಂದ ತನ್ನ ಪಾಲಿನ ನೀರು ಪಡೆಯುತ್ತಿದೆ. ಇದರಿಂದ ಸಿಂಧನೂರು, ಮಾನವಿ ತಾಲೂಕಿನ ನದಿ ದಂಡೆಯ ಗ್ರಾಮಗಳಿಗೆ ತಕ್ಕಮಟ್ಟಿಗೆ ನೀರು ದೊರೆಯುತ್ತಿದೆ. ಆದರೆ ನದಿಯಲ್ಲಿ ನೀರಿನ ಹರಿವು ಸ್ಥಗಿತಗೊಳ್ಳುತ್ತಿದ್ದಂತೆಯೇ ಮತ್ತೆ ಅಭಾವದ ಸ್ಥಿತಿ ತಲೆದೋರಲಿದೆ. ಆಂಧ್ರ ತನ್ನ ಪಾಲಿನ ನೀರು ಪಡೆಯುತ್ತಿರುವುದರಿಂದ ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಕುಸಿತ ಕಂಡಿದೆ. ಜಲಾಶಯದಲ್ಲಿ ಬುಧವಾರ 9.169 ಟಿಎಂಸಿ ನೀರಿತ್ತು.
ಈ ಮಧ್ಯೆ ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆ ನೀರಿನ ಅಭಾವ ಸೃಷ್ಟಿಯಾಗಿದೆ. ಲಿಂಗಸ್ಗೂರು ತಾಲೂಕಿನ ನಾಲ್ಕಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ಈಗಾಗಲೇ ನೀರೊದಗಿಸಲಾಗುತ್ತಿದೆ. ಕಳೆದ ಜನವರಿಯಲ್ಲಿ ಗಣೇಕಲ್ ಜಲಾಶಯವನ್ನು ಭರ್ತಿ ಮಾಡಿಕೊಂಡಿದ್ದರಿಂದ ಆನಂತರದಲ್ಲಿ ಎಡದಂಡೆ ಕಾಲುವೆ ಮೂಲಕ ನೀರು ಹರಿಸಿಕೊಂಡು ಮಾನವಿ, ರಾಯಚೂರು ತಾಲೂಕಿನ ಅನೇಕ ಗ್ರಾಮಗಳ ಕುಡಿಯುವ ನೀರಿನ ಕೆರೆ ಭರ್ತಿ ಮಾಡಲಾಗಿತ್ತು. ಅದೇ ವೇಳೆ ರಾಯಚೂರು ನಗರಕ್ಕೆ ನೀರೊದಗಿಸುವ ರಾಂಪುರ ಕೆರೆಯನ್ನೂ ತುಂಬಲಾಗಿತ್ತು. ಆದರೆ ಆನಂತರದಲ್ಲಿ ಗಣೇಕಲ್ ಜಲಾಶಯವನ್ನು ಭರ್ತಿ ಮಾಡುವ ಕಾರ್ಯ ನಡೆದಿಲ್ಲ ಎಂಬ ಆರೋಪ ರೈತರಿಂದ ಕೇಳಿಬಂದಿದೆ.
8.875 ಅಡಿ ಮಾತ್ರ: ಸದ್ಯ ಗಣೇಕಲ್ ಜಲಾಶಯದಲ್ಲಿ ಕೇವಲ 8.875 ಅಡಿಯಷ್ಟು ನೀರಿದ್ದು, ಅದರಲ್ಲಿ ಮುಂದಿನ ದಿನಗಳಲ್ಲಿ ಬಳಕೆಗೆ ಕೇವಲ 5 ಅಡಿ ನೀರು ಲಭ್ಯವಾಗಲಿದೆ. ಪ್ರತಿ ವರ್ಷ ಎಡದಂಡೆ ಕಾಲುವೆಯಲ್ಲಿ ನೀರಿನ ಹರಿವು ಸ್ಥಗಿತಗೊಳ್ಳುವ ಮುಂಚೆಯೇ ಗಣೇಕಲ್ ಜಲಾಶಯ ಭರ್ತಿ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಪ್ರಸಕ್ತ ವರ್ಷ ಇಂಥ ಯಾವುದೇ ಪ್ರಯತ್ನ ಸದ್ಯಕ್ಕೆ ಕಂಡುಬರುತ್ತಿಲ್ಲ. ಅಷ್ಟೇ ಅಲ್ಲ ತುಂಗಭದ್ರಾ ಜಲಾಶಯದಲ್ಲಿನ ನೀರು ತಳಕಚ್ಚುತ್ತಿರುವುದು ಗಣೇಕಲ್ ಜಲಾಶಯಕ್ಕೆ ನೀರು ಲಭ್ಯವಾಗುವುದು ಬಹುತೇಕ ಅನುಮಾನ.
ಈ ಮಧ್ಯೆ ನಗರಕ್ಕೆ ಕುಡಿಯುವ ನೀರೊದಗಿಸುವ ಕೃಷ್ಣಾ ನದಿಯಲ್ಲೂ ನೀರಿನ ಅಭಾವ ಕಂಡುಬಂದಿದೆ. ನದಿಯು ಬಹುತೇಕ ಬತ್ತಿದ್ದು, ನಗರಾಡಳಿತವನ್ನು ಚಿಂತೆಗೆ ಸಿಲುಕಿಸಿರುವುದಂತೂ ಸತ್ಯ.