ದೇಶದ ಅಭಿವೃದ್ಧಿಗೆ ಬೇಕು ಸೌಹಾರ್ದತೆ
ಕನ್ನಡಪ್ರಭ ವಾರ್ತೆ, ಸಿಂಧನೂರು, ಮಾ.27
ಯುವಶಕ್ತಿ ವ್ಯರ್ಥವಾಗದೆ ಸದ್ಬಳಕೆಯಾಗಬೇಕು. ದೇಶದ ಅಭಿವೃದ್ಧಿಗಾಗಿ ನಾವೆಲ್ಲರೂ ಒಂದಾಗಬೇಕು. ಯಾವುದೇ ಕಾರಣಕ್ಕೂ ಪರಸ್ಪರ ನಮ್ಮ ಭಾವನೆಗಳಲ್ಲಿ ಬಿರುಕು ಉಂಟಾಗಬಾರದು. ಸಾಮರಸ್ಯ, ಸೌಹಾರ್ದತೆಯ ಜೀವನ ಸಾಗಿಸಲು ನಾವು ವಿಶಾಲ ಮನೋಭಾವನೆ ಹೊಂದುವುದು ಅಗತ್ಯ ಎಂದು ಆರ್.ಎಚ್.ನಂ.1ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಹುಸೇನ ಬಾಷಾ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ನ್ಯಾಶನಲ್ ಪದವಿ ಕಾಲೇಜಿನಲ್ಲಿ ಜಿಲ್ಲಾ ಮತ್ತು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ದಿ. ಎಸ್.ಬಸಪ್ಪ ಪಿ.ಗಿರ್ದಾವರ್ ಸ್ಮಾರಕ ದತ್ತಿ ಉಪನ್ಯಾಸದಲ್ಲಿ ಕೋಮು ಸೌಹಾರ್ದತೆ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿ, ಜಗತ್ತಿನಲ್ಲಿ ಭಾರತ ಹೆಚ್ಚಿನ ಸಾಧನೆ ಮಾಡಬೇಕಾದರೆ ಯುವಕರು ದೃಢವಾದ ಸಂಕಲ್ಪ ಮಾಡಬೇಕೆಂದು ತಿಳಿಸಿದರು.
ಸ್ನೇಹಕ್ಕೆ ಬೇಕಿಲ್ಲ ಜಾತಿ- ಮತ: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ಎಸ್.ದೇವೇಂದ್ರಗೌಡ ಮಾತನಾಡಿ, ಬಹು ಸಂಸ್ಕೃತಿಯನ್ನು ಹೊಂದಿದ ಭಾರತದಲ್ಲಿ ಯುವಕರು ವಿದ್ಯಾರ್ಥಿಗಳು ಎಲ್ಲ ಧರ್ಮಗಳ ತಿರುಳನ್ನು ಅರಿತು ಶಾಂತಿ, ಸೌಹಾರ್ದತೆಯಿಂದ ದೇಶಪ್ರೇಮಿಗಳಾಗಿ ಬದುಕುವುದನ್ನು ಕಲಿಯಬೇಕು. ಇಂದು ಸ್ನೇಹಿತರನ್ನಾಗಿ ಮಾಡಿಕೊಳ್ಳಬೇಕಾದರು ಅವರು ಸ್ವಜಾತಿಯವರಾಗಿರಬೇಕೆನ್ನುವ ವಿಚಾರಗಳು ಬರುವುದು ವಿಷಾದದ ಸಂಗತಿ ಎಂದ ಅವರು, ಸರಿಯಾದ ವ್ಯಕ್ತಿತ್ವ ನಿರ್ಮಾಣವಾಗಬೇಕಾದರೆ ಮಹಿಳೆಯರ ಪಾತ್ರ ಹಿರಿದಾಗಿದೆ. ನೆರೆಹೊರೆಯವರನ್ನು ಗೌರವದಿಂದ ಸಂಬಂಧಿಕರಂತೆ ಕಾಣಬೇಕು ಎಂದರು.
ಸಹೋದರತ್ವದಿಂದ ವೈಮನಸ್ಸು ದೂರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಸಾಹಿತಿ ಪಂಪಯ್ಯಸ್ವಾಮಿ ಸಾಲಿಮಠ ಮಾತನಾಡಿ, ಸಹೋದರತ್ವ ಹಾಗೂ ಶಾಂತಿಯುತ ಜೀವನ ಸಾಗಿಸುವುದರಿಂದ ನಮ್ಮಲ್ಲಿಯ ವೈಮನಸ್ಸುಗಳು ದೂರಾಗುತ್ತವೆ. ಹಿಂಸೆಯಿಂದ ಏನನ್ನೂ ಸಾಧಿಸಲಾಗದು. ವಿದ್ಯಾರ್ಥಿಗಳು ಭಾರತದ ಘನತೆಯನ್ನು ಎತ್ತಿ ಹಿಡಿಯುವಂತಹ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನ್ಯಾಶನಲ್ ಪದವಿ ಕಾಲೇಜು ಪ್ರಾಚಾರ್ಯ ಶರಣಪ್ಪ ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ಸಂದರ್ಭದಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳದೆ, ತಾಳ್ಮೆಯಿಂದ ಪರಸ್ಪರ ಸಹಕಾರದಿಂದ ಒಂದಾಗಿ ಉತ್ತಮ ಗುಣಗಳನ್ನು ಬದುಕಲ್ಲಿ ಅಳವಡಿಸಿಕೊಂಡು ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕೆಂದು ತಿಳಿಸಿದರು.
ಸಾಹಿತ್ಯದೆಡೆಗೆ ಒಲವು ಕೊಡಿ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ರಮಾದೇವಿ ಶಂಭೋಜಿ ಪ್ರಾಸ್ತಾವಿಕವಾಗಿ ಮಾತನಾಡಿ, ದತ್ತಿ ದಾನಿಗಳ ಆಶಯ ಈಡೇರಬೇಕಾದರೆ ದತ್ತಿ ಉಪನ್ಯಾಸದ ವಿಷಯವನ್ನು ಅರ್ಥೈಸಿಕೊಂಡು ಜೀವನದಲ್ಲಿ ಸೌಹಾರ್ದತೆಯಿಂದ ಬದುಕಬೇಕು. ವಿದ್ಯಾರ್ಥಿಗಳು ಪಠ್ಯ ವಿಷಯದ ಜೊತೆಗೆ ಸಾಹಿತ್ಯದ ವಿಷಯದ ಕಡೆಗೆ ಗಮನಹರಿಸಬೇಕೆಂದು ಕಿವಿಮಾತು ಹೇಳಿದರು.
ದತ್ತಿ ದಾನಿಗಳಾದ ನ್ಯಾಯವಾದಿ ಪಿ.ನಾಗರಾಜ, ಸುಮಂಗಲಿ ಸಹಕಾರ ಸೌಹಾರ್ದ ಸಹಕಾರಿ ಉಪಾಧ್ಯಕ್ಷೆ ಶಕುಂತಲಾ ಡಿ. ಪಾಟೀಲ ಉಪಸ್ಥಿತರಿದ್ದರು. ಕುಮಾರಿ ಜ್ಯೋತಿ ಪ್ರಾರ್ಥಿಸಿದರು. ಬೀರಪ್ಪ ಶಂಭೋಜಿ ಸ್ವಾಗತಿಸಿದರು. ಯಲ್ಲಪ್ಪ ವಂದಿಸಿದರು. ವೀರೇಶ ಗೋನವಾರ ಕಾರ್ಯಕ್ರಮ ನಿರೂಪಿಸಿದರು.