ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮಹಿಳಾ ಮೀಸಲಾತಿ ಮುಸುಕು?

Rashmi Kasaragodu
Updated On : 28 Mar 2013, 11:36 am

 ವಿಶೇಷ ವರದಿ
ಕನ್ನಡಪ್ರಭ ವಾರ್ತೆ   ರಾಯಚೂರು   ಮಾ.27
ಮಹಿಳೆಯರಿಗೆ ಎಲ್ಲ ರಂಗಗಳಲ್ಲಿ ಮೀಸಲಾತಿ ನೀಡುವ ವಿಚಾರ ಪ್ರಸ್ತಾಪವಾದಾಗ ಅದಕ್ಕೆ ವಿವಿಧ ರಾಜಕೀಯ ಪಕ್ಷಗಳು ಬೆಂಬಲಿಸುವ ಮಾತು ಆಡುತ್ತವೆ. ಆದರೆ ಚುನಾವಣೆಯಲ್ಲಿ ಟಿಕೆಟ್ ನೀಡುವ ವಿಚಾರ ಬಂದಾಗ ರಾಜಕೀಯ ಪಕ್ಷಗಳು ಮಹಿಳೆಯರಿಗೆ ನೀಡಬೇಕಾದ ಆದ್ಯತೆಯನ್ನೇ ಮರೆಯುತ್ತವೆ. ಜಿಲ್ಲೆಯಲ್ಲಿ ಮಹಿಳಾ ಮತದಾರರ ಸಂಖ್ಯೆಯು ಅರ್ಧದಷ್ಟಿದ್ದರೂ ಸದ್ಯ ಚುನಾವಣೆ ಕಣದಲ್ಲಿ ಮಹಿಳಾ ಆಕಾಂಕ್ಷಿಗಳು ಮಾತ್ರ ಕಂಡುಬಂದಿಲ್ಲ.
ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದು, ಮೀಸಲಾತಿಯ ನೆರವಿನಿಂದ ಎಂಬುದು ಸುಳ್ಳಲ್ಲ. ಆಯಾ ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿರದಿದ್ದರೆ ಅವರ ಸ್ಪರ್ಧೆಗೆ ಎಂದಿನಂತೆ ಅವಕಾಶವೇ ದೊರೆಯುತ್ತಿರಲಿಲ್ಲ. ಆದರೆ ಅದೇ ರೀತಿ ವಿಧಾನಸಭೆಗೆ ನಡೆಯಲಿರುವ ಚುನಾವಣೆಗೆ ಮಹಿಳೆಯರ ಸ್ಪರ್ಧೆಗೆ ಅವಕಾಶ ಕಲ್ಪಿಸುವ ಗೋಜಿಗೆ ವಿವಿಧ ರಾಜಕೀಯ ಪಕ್ಷಗಳು ಹೋಗದಿರುವುದು ಸ್ಪಷ್ಟವಾಗಿದೆ.
9,87,793 ಮಹಿಳೆಯರ ಜನಸಂಖ್ಯೆ: ಜಿಲ್ಲೆಯಲ್ಲಿ ಒಟ್ಟು 650858 ಪುರುಷ ಮತದಾರರಿದ್ದಾರೆ. ಮಹಿಳಾ ಮತದಾರರ ಸಂಖ್ಯೆ 642209 ಮತದಾರರಿದ್ದಾರೆ. ಪುರುಷರಿಗೆ ಹೋಲಿಕೆ ಮಾಡಿದರೆ ಜಿಲ್ಲೆಯಲ್ಲಿ ಮಹಿಳಾ ಮತದಾರರ ಸಂಖ್ಯೆಯು ಒಟ್ಟು ಮತದಾರರ ಪ್ರಮಾಣ ಸುಮಾರು ಶೇ.49ರಷ್ಟಿದೆ. ಅಷ್ಟೇ ಅಲ್ಲ ಜಿಲ್ಲೆಯಲ್ಲಿ ಒಟ್ಟು 9,87,793 ಮಹಿಳೆಯರ ಜನಸಂಖ್ಯೆಯಿದ್ದು, ಇದರ ಶೇ.65.01ರಷ್ಟು ಮಹಿಳಾ ಮತದಾರರಿದ್ದಾರೆ.
ಜಿಲ್ಲೆಯ ಒಟ್ಟು 7 ವಿಧಾನಸಭೆ ಕ್ಷೇತ್ರಗಳ ಪೈಕಿ ಯಾವ ಕ್ಷೇತ್ರದಿಂದಲೂ ಈವರೆಗೆ ರಾಜಕೀಯ ಪಕ್ಷಗಳು ಮಹಿಳೆಯರನ್ನು ಚುನಾವಣೆಯಲ್ಲಿ ಕಣಕ್ಕಿಳಿಸುವ ಬಗ್ಗೆ ಘೋಷಿಸಿಲ್ಲ. ಬಹುತೇಕ ಎಲ್ಲ ರಾಜಕೀಯ ಪಕ್ಷಗಳಲ್ಲಿ ಪುರುಷರೇ ಟಿಕೆಟ್ ಆಕಾಂಕ್ಷಿಗಳಾಗಿರುವುದು ಸದ್ಯ ಕಂಡುಬಂದಿದೆ. ಮಹಿಳೆಯರು ಜಿಲ್ಲೆಯ ರಾಜಕೀಯ ಕಣದಲ್ಲಿ ಪುರುಷರಿಗೆ ಪೈಪೋಟಿ ನೀಡುವಷ್ಟು ರಾಜಕೀಯವಾಗಿ ಬೆಳೆಯಲು ಅವಕಾಶವೇ ದೊರೆತಿಲ್ಲ ಎಂಬುದು ಸತ್ಯ.
ಮಹಿಳೆಯರೆ ಹೆಚ್ಚು: ಜಿಲ್ಲೆಯ ರಾಯಚೂರು ವಿಧಾನಸಭೆ ಕ್ಷೇತ್ರದಲ್ಲಿ ಪುರುಷ ಮತದಾರರ ಸಂಖ್ಯೆ 95531 ಆಗಿದ್ದರೆ, ಮಹಿಳಾ ಮತದಾರರ ಸಂಖ್ಯೆ 97553 ಆಗಿದೆ. ಇಲ್ಲಿ 2,022 ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅದೇ ರೀತಿ ಮಾನವಿ ವಿಧಾನಸಭೆ ಕ್ಷೇತ್ರದಲ್ಲಿಯೂ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆಯು 531ರಷ್ಟು ಹೆಚ್ಚಾಗಿದೆ.
ಸದ್ಯ ಮತದಾರರ ಪಟ್ಟಿ ಪರಿಷ್ಕರಣೆ ಜಾರಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಈ ಪ್ರಮಾಣ ಹೆಚ್ಚಳ ಕಾಣುವುದರಲ್ಲಿ ಸಂದೇಹವಿಲ್ಲ. ಆದರೆ ಮುಂದಿನ ವಿಧಾನಸಭೆ ಚುನಾವಣೆ ಕಣದಲ್ಲಿ ಸದ್ಯಕ್ಕೆ ಜಿಲ್ಲೆಯ ಎಲ್ಲಿಯೂ ರಾಜಕೀಯ ಪಕ್ಷಗಳಿಂದ ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವ ಬಗ್ಗೆ ಪ್ರಸ್ತಾಪವಿಲ್ಲವಾಗಿದೆ.
ಈಗಾಗಲೇ ಬೆಂಗಳೂರಿನಲ್ಲಿ ಬೀಡುಬಿಟ್ಟಿರುವ ಟಿಕೆಟ್ ಆಕಾಂಕ್ಷಿಗಳ ಮಧ್ಯೆ ಭಾರೀ ಪೈಪೋಟಿಯೇ ಏರ್ಪಟ್ಟಿದೆ. ಟಿಕೆಟ್‌ಗಾಗಿ ನಡೆಯುತ್ತಿರುವ ಮೇಲಾಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಬೇಕೆಂಬ ವಿಚಾರವನ್ನೇ ಆಯಾ ರಾಜಕೀಯ ಪಕ್ಷಗಳು ಮರೆತಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement