ರಂಗುರಂಗಿನ ಹಬ್ಬ ಹೋಳಿ ಸಂಭ್ರಮ
ಕನ್ನಡಪ್ರಭ ವಾರ್ತೆ ರಾಯಚೂರು ಮಾ.27
ನಗರ ಸೇರಿದಂತೆ ಜಿಲ್ಲಾದ್ಯಂತ ಬುಧವಾರ ಬಣ್ಣದ ಹಬ್ಬ ಹೋಳಿ ಶಾಂತಿಯುತವಾಗಿ ಮತ್ತು ಸಂಭ್ರಮದಿಂದ ಆಚರಿಸಲಾಯಿತು.
ನಗರದಲ್ಲಿ ಮಂಗಳವಾರ ರಾತ್ರಿ ವಿವಿಧೆಡೆ ಯುವಕರು ಕಾಮಣ್ಣ ದಹನ ನಡೆಸಿದರು. ಬುಧವಾರ ಬೆಳಗ್ಗೆ ನಗರ ಸೇರಿ ಜಿಲ್ಲೆಯ ಬಹುತೇಕ ಕಡೆ ಬಣ್ಣದ ಹಬ್ಬ ಹೋಳಿ ಆಚರಣೆ ನಡೆಯಿತು. ಯುವಕ ಯುವತಿಯರು, ಮಕ್ಕಳು ಸೇರಿದಂತೆ ಎಲ್ಲರೂ ಹೋಳಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.
ಯುವಕರು ಪರಸ್ಪರ ಬಣ್ಣ ಎರಚಿ ಸಂಭ್ರಮಿಸುತ್ತಿದ್ದುದು ಎಲ್ಲೆಡೆ ಕಂಡುಬಂದಿತು. ಹೋಳಿ ಸಂದರ್ಭದಲ್ಲಿ ಯುವಕರು ಬೈಕ್, ವಾಹನಗಳಲ್ಲಿ ಸಂಚರಿಸಿ ಬಣ್ಣ ಎರಚಿದ್ದು ಕಂಡುಬಂದಿತು. ಮಹಿಳೆಯರೂ ಸಹ ವಿವಿಧ ಕಾಲನಿಗಳಲ್ಲಿ ಬಣ್ಣದ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.
ನಗರ ಸೇರಿದಂತೆ ಜಿಲ್ಲಾದ್ಯಂತ ನೀರಿನ ಅಭಾವ ಮತ್ತು ಪಿಯುಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯ ಹಿನ್ನೆಲೆ ಸಂಭ್ರಮಕ್ಕೆ ಹಿನ್ನಡೆಯಾಯಿತು. ನಗರದಲ್ಲಿ ಸದ್ಯ ಎರಡು ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದ್ದರೂ ಸಮರ್ಪಕ ನೀರು ದೊರೆಯುತ್ತಿಲ್ಲ. ಹೀಗಾಗಿ ಹೋಳಿ ಆಚರಣೆಗೂ ಮೊದಲೇ ಯೋಚಿಸುವಂತಾಯಿತು.