ಲಿಂಗಸ್ಗೂರಿನಲ್ಲಿ ಹೋಳಿ ಸಂಭ್ರಮಾಚರಣೆ
ಕನ್ನಡಪ್ರಭ ವಾರ್ತೆ ಲಿಂಗಸ್ಗೂರು ಮಾ.27
ಪಟ್ಟಣದಲ್ಲಿ ಹೋಳಿ ಹಬ್ಬದ ನಿಮಿತ್ತ ಪ್ರತಿ ವರ್ಷದಂತೆ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ವಿವಿಧ ಬಗೆಯ ಬಣ್ಣಗಳನ್ನು ಪರಸ್ಪರ ಎರಚುವ ಮೂಲಕ ಸಂಭ್ರಮದಿಂದ ಬುಧವಾರ ಆಚರಿಸಿದರು.
ನಗರದ ವಿವಿಧ ಬಡಾವಣೆಗಳಲ್ಲಿ ಮಹಿಳೆಯರು ಒಬ್ಬರಿಗೊಬ್ಬರು ಬಣ್ಣ ಹಚ್ಚುವುದು ಹಾಗೂ ಮಕ್ಕಳು ಫಿಸ್ತೂಲ್ ಮತ್ತು ಬಾಟಲ್, ಪಿಚಕಾರಿಗಳಲ್ಲಿ ಬಣ್ಣವನ್ನು ತುಂಬಿ ಪರಸ್ಪರ ಎರಚಿ ಆನಂದಿಸುವ ದೃಶ್ಯ ಕಂಡು ಬಂದಿತು.
ವಕೀಲರು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ನೂರಾರು ಜನ ಯುವಕರು ಪ್ರತ್ಯೇಕ ವಾಹನದಲ್ಲಿ ಸಂಗೀತ ಮೇಳ ಅಳವಡಿಸಿ ಚಿತ್ರಗೀತೆಗಳನ್ನು ಹಾಕಿ ನೃತ್ಯ ಮಾಡುತ್ತಾ ಪರಸ್ಪರ ಬಣ್ಣ ಎರಚುತ್ತಾ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾ ಸಂಭ್ರಮದಿಂದ ಆಚರಿಸಿದರು.
ವಕೀಲರ ಸಂಘದ ಅಧ್ಯಕ್ಷ ಮುದುಕಪ್ಪ ನೀರಲಕೇರಿ ವಕೀಲರು, ಮಾನಪ್ಪ ನಾಯಕ ವಕೀಲರು, ಮಹೇಶ ಹಿರೇಮಠ ವಕೀಲರು, ಭೂಪನಗೌಡ ವಕೀಲರು, ಗಿರಿಧರ ಜೋಷಿ ವಕೀಲರು, ಕುಪ್ಪಣ್ಣ ಕೋಠಾ ವಕೀಲರು ಸೇರಿದಂತೆ ಇನ್ನಿತರರು ಹೋಳಿ ಆಚರಣೆಯಲ್ಲಿ ಪಾಲ್ಗೊಂಡಿದ್ದರು.
'ಹೋಳಿ'ಗೆ ನೀತಿ ಸಂಹಿತೆ ಅಡ್ಡಿ: ಚುನಾವಣೆ ಹಿನ್ನೆಲೆಯಲ್ಲಿ ಮಾ.20 ರಿಂದ ನೀತಿ ಸಂಹಿತೆ ಜಾರಿಯಾಗಿದ್ದು, ವಿವಿಧ ರಾಜಕೀಯ ಪಕ್ಷಗಳ ಬಹುತೇಕ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿ ವರ್ಷದಂತೆ ಹೋಳಿ ಹಬ್ಬ ಆಚರಣೆಯಲ್ಲಿ ಪಾಲ್ಗೊಳ್ಳದಿರುವುದು ಕಂಡು ಬಂದಿತು.