31ರಂದು ಸಾಂಸ್ಕೃತಿಕ ಜನೋತ್ಸವ
ಕನ್ನಡಪ್ರಭ ವಾರ್ತೆ ರಾಯಚೂರು ಮಾ.28
ಸದಭಿರುಚಿಯ ಸಿನಿಮಾ, ನಾಟಕ, ಸಂಗೀತವನ್ನು ಜನರ ಮುಂದಿರಿಸುವ ಉದ್ದೇಶದಿಂದ ಆವಿಷ್ಕಾರ ಪ್ರಗತಿ ಪರ ಸಾಂಸ್ಕೃತಿಕ ವೇದಜಿಕೆಯವತಿಯಿಂದ ನಗರದಲ್ಲಿ ಮಾ. 31ರಂದು ರಾಯಚೂರು ಸಾಂಸ್ಕೃತಿಕ ಜನೋತ್ಸವ ಆಯೋಜಿಸಲಾಗಿದೆ.
ಈ ಕುರಿತು ನಗರದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಜಿಲ್ಲಾ ಸಂಚಾಲಕ ಚನ್ನಬಸವ ಜಾನೇಕಲ್, ನಗರದ ರಂಗಮಂದಿರದಲ್ಲಿ ಅಂದು ಸಂಜೆ 6ಕ್ಕೆ ಸಮಾರಂಭವನ್ನು ಖ್ಯಾತ ಕತೆಗಾರ ಡಾ. ಅಮರೇಶ ನುಗಡೋಣಿ ಉದ್ಘಾಟಿಸಲಿದ್ದಾರೆಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆವಿಷ್ಕಾರ ರಾಜ್ಯ ಸಂಚಾಲಕ ಡಾ.ಬಿ.ಆರ್. ಮಂಜುನಾಥ್ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಬೆಂಗಳೂರಿನ ಆವಿಷ್ಕಾರ ತಂಡದಿಂದ ಕಿಡಿಯಾದಳು ಹುಡುಗಿ ಹಾಗೂ ಗುಲ್ಬರ್ಗ ತಂಡದಿಂದ ಅಮೂಲ್ಯ ವಿದ್ಯೆ ಹಾಗೂ ರಾಯಚೂರಿನ ತಂಡಗಳಿಂದ ಬಯಲಾಟ, ನೃತ್ಯರೂಪಕ ಹಾಗೂ ಕೆ. ಕರಿಯಪ್ಪ ಮಾಸ್ತರ್ ಅವರಿಂದ ಪ್ರಗತಿಪರ ಗೀತೆಗಳ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಒಳ್ಳೆಯ ಸಾಹಿತ್ಯ, ಸದಭಿರುಚಿಯ ಚಿತ್ರಗಳು ಇಂದು ಮಾಯವಾಗಿ ಅಶ್ಲೀಲ ಸಾಹಿತ್ಯ, ಕೆಟ್ಟ ಅಭಿರುಚಿಯ ಚಿತ್ರಗಳೇ ಹೆಚ್ಚಾಗಿ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಆವಿಷ್ಕಾರ ಸಂಸ್ಥೆ ವಿನೂತನ ಪ್ರಯೋಗವಾಗಿ ಜನೋತ್ಸವದಲ್ಲಿ ಸದಭಿರುಚಿಯ ನಾಟಕಗಳ ಪ್ರದರ್ಶನ ಆಯೋಜಿಸಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಚೇತನಾ ಬನಾರೆ, ಮಹೇಶ್ ಚೀಕಲಪರ್ವಿ ಸೇರಿದಂತೆ ಇನ್ನಿತರರಿದ್ದರು.