ಎಲ್ಲೆಡೆ ಸಂಭ್ರಮದ ಓಕುಳಿಯಾಟ
ಕನ್ನಡಪ್ರಭ ವಾರ್ತೆ ಸಿಂಧನೂರು ಮಾ.28
ನಗರ ಸೇರಿದಂತೆ ತಾಲೂಕಿನಾದ್ಯಂತ ಹೋಳಿ ಹಬ್ಬದ ನಿಮಿತ್ತ ಯುವಕರು, ಯುವತಿಯರು, ಚಿಕ್ಕ ಮಕ್ಕಳು ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮದಿಂದ ಓಕುಳಿಯಾಡಿದರು.
ಗುರುವಾರ ಬೆಳಿಗ್ಗೆಯಿಂದಲೇ ಆರಂಭವಾದ ಹೋಳಿಯ ರಂಗು ಬಿಸಿಲೇರಿದಂತೆ ರಂಗೇರತೊಡಗಿತು. ಕಳೆದ ವರ್ಷಕ್ಕಿಂತ ಈ ವರ್ಷ ಬಣ್ಣದಾಟ ಆಡುವವರ ಸಂಖ್ಯೆ ಇಳಿಮುಖವಾಗಿತ್ತು.
ಬ್ರಾಹ್ಮಣರ ಓಣಿಯ ಶ್ರೀರಾಮ ಮಂದಿರದ ಎದುರು ಕಾಮದಹನ ಮಾಡಲಾಯಿತು. ನಂತರ ಯುವಕ, ಯುವತಿಯರು ರಂಗಿನಾಟದಲ್ಲಿ ತೊಡಗಿದರು. ಸುಕಾಲಪೇಟೆ, ಆದರ್ಶ ಕಾಲೋನಿ,ನಟರಾಜ ಕಾಲೋನಿ, ಮಹೆಬೂಬಿಯ ಕಾಲೋನಿ, ಪ್ರಶಾಂತ ನಗರ, ಪಿಡಬ್ಲೂಡಿ ಕ್ಯಾಂಪ್, ಅರಗಿನಮರ, ರೈತನಗರ ಕ್ಯಾಂಪ್ಗಳಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ರಂಗಿನಾಟದಲ್ಲಿ ವಿದ್ಯಾರ್ಥಿಗಳು ತೊಡಗಿದ್ದರು. ಕೆಲ ಶಾಲೆಗಳ ವಿದ್ಯಾರ್ಥಿಗಳ ಪರೀಕ್ಷೆಗಳು ಮುಗಿದಿದ್ದರಿಂದ ಅತ್ಯಂತ ಖುಷಿಯಲ್ಲಿ ಬಣ್ಣದಾಟವಾಡಿದರು.