ಏ.1ರಂದು ನೇತ್ರ ಚಿಕಿತ್ಸಾ ಶಿಬಿರ
ಗುಲ್ಬರ್ಗ: ಹೈ-ಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯ ನೇತ್ರ ಚಿಕಿತ್ಸಾ ಶಾಸ್ತ್ರ ವಿಭಾಗ ಹಾಗೂ ಜರ್ಮನಿಯ ಹಮಾರಾ ಬಂಧನ ಸಹಯೋಗದಲ್ಲಿ ಏಪ್ರಿಲ್ 1 ರಂದು ಬೆಳಗ್ಗೆ 10.30 ರಿಂದ 2.30 ಗಂಟೆಯವರೆಗೆ ಸುರುಪುರ ತಾಲೂಕಿನ ಎಚ್.ಕೆ.ಇ. ಸಂಸ್ಥೆಯ ಪದವಿ ಮಹಾವಿದ್ಯಾಲಯದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ ನೇತ್ರ ಚಿಕಿತ್ಸಾ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಂ.ಆರ್. ಪೂಜಾರಿ ಅವರ ನೇತೃತ್ವದಲ್ಲಿ ನೇತ್ರತಜ್ಞ ಡಾ. ವಿಶ್ವನಾಥ ರೆಡ್ಡಿ, ಡಾ. ರಾಜಶ್ರೀ ರೆಡ್ಡಿ, ಡಾ. ಸಂತೋಷ ಪಾಟೀಲ್, ಡಾ. ಪ್ರಜ್ವಲಿ ರೆಡ್ಡಿ, ಡಾ. ಸುಮಿತ ದೇಶಪಾಂಡೆ, ಡಾ. ಕವಿತಾ ಸಲಗರ ಮತ್ತು ಡಾ. ಮಂಜುಳಾ ಮಂಗಾಣಿ ಭಾಗವಹಿಸುವರು. ಕಣ್ಣಿನ ಪೊರೆಯ (ಕ್ಯಾಟರ್ಯಾಕ್ಸ್) ಶಸ್ತ್ರ ಚಿಕಿತ್ಸೆಗೆ ಆಯ್ಕೆಗೊಂಡವರಿಗೆ ಬಸವೇಶ್ವರ ಆಸ್ಪತ್ರೆಯಲ್ಲಿ ಏ. 2 ಮತ್ತು 3 ರಂದು ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಿ ಐ.ಓ.ಎಲ್ ಅಳವಡಿಸಲಾಗುವುದು. ಸರ್ಜರಿಗೆ ಆಯ್ಕೆಗೊಂಡ ರೋಗಿಗಳಿಗೆ ಮತ್ತು ಅವರ ಒಬ್ಬ ಸಹಾಯಕರಿಗೆ ಬಸವೇಶ್ವರ ಆಸ್ಪತ್ರೆಯಲ್ಲಿ 3 ದಿನಗಳ ಕಾಲ ಉಚಿತವಾಗಿ ಊಟ ಮತ್ತು ವಸತಿಯನ್ನು ಒದಗಿಸುವಂತೆ ಉಚಿತವಾಗಿ ಸಾರಿಗೆ ಸೌಲಭ್ಯವನ್ನು ಸಹ ಕಲ್ಪಿಸಲಾಗುವುದು. ಸುತ್ತಮುತ್ತಲಿನ ಗ್ರಾಮಸ್ಥರು ಶಿಬಿರದ ಪ್ರಯೋಜನ ಪಡೆದುಕೊಳ್ಳಲು ಕೋರಲಾಗಿದೆ.
ಚಿಮ್ಮಲಿಗೆ ಸನ್ಮಾನ
ಗುಲ್ಬರ್ಗ: 2011ನೇ ಸಾಲಿನ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗೆ ಆಯ್ಕೆಯಾದ ಸರಸ್ವತಿ ಚಿಮ್ಮಲಿಗೆಯವರಿಗೆ ಬೆಂಗಳೂರಿನಲ್ಲಿ ಸನ್ಮಾನಿಸಲಾಯಿತು. ಡಾ. ಚಂದ್ರಶೇಖರ ಕಂಬಾರ, ಪ್ರೊ. ಜಿ. ವೆಂಕಟಸುಬ್ಬಯ್ಯ, ಶಾಮಲಾ ಜಿ.ಭಾವೆ ಮತ್ತು ಕರ್ನಾಟಕ ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಬಸವರಾಜ ಪ್ರಶಸ್ತಿ ಪುತ್ಥಳಿ, ಪ್ರಶಸ್ತಿ ಫಲಕ ನೀಡಿ ಗೌರವಿಸಿದರು.