ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನೀರಿಗಾಗಿ ಪರದಾಟ, ಕಿತ್ತಾಟ

Rashmi Kasaragodu
Updated On : 29 Mar 2013, 12:03 pm

ಯಾದಗಿರಿ: ಎರಡು ವರ್ಷಗಳ ಬರದಿಂದ ತತ್ತರಿಸಿರುವ ಜಿಲ್ಲೆಯ ಜನತೆಗೆ ಈ ಬಾರಿ ಬಿಸಿಲು ತನ್ನ ವಿರಾಟ್ ರೂಪವನ್ನು ತೋರಿಸುತ್ತಿದೆ. ಜಿಲ್ಲಾ ಕೇಂದ್ರದಲ್ಲಿಯೇ ನಾಗರಿಕರು ಕುಡಿವ ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ.
ವರ್ಷದಿಂದ ಸಮಸ್ಯೆ: ನಗರದಿಂದ ಕೇವಲ 2 ಕಿಮೀ ಅಂತರದಲ್ಲಿ ಭೀಮಾ ನದಿ ಹರಿಯುತಿದ್ದರೂ ಈ ಬಾರಿಯ ಬೇಸಿಗೆಯ ಪ್ರಖರತೆಯಿಂದಾಗಿ ಜನತೆ ನೀರಿಗಾಗಿ ಪರದಾಡುವಂತಾಗಿದೆ. ನಗರದ ವಾರ್ಡ್ ಸಂಖ್ಯೆ 17 ಮತ್ತು 18ರಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ದಿನ ಬೆಳಗಾದರೆ ಸಾಕು ನಾಗರಿಕರು ನೀರಿಗಾಗಿ ಕಿತ್ತಾಡುವಂತಾಗಿದೆ. ವಾರ್ಡ್ 18ರಲ್ಲಿ ಕಳೆದ ಒಂದೂವರೆ ವರ್ಷದಿಂದ ಇದೇ ಸಮಸ್ಯೆ ಇದ್ದು, ನಗರಸಭೆ ಅಧಿಕಾರಿಗಳು ಮಾತ್ರ ಇದಕ್ಕೆ ಸ್ಪಂದಿಸುತ್ತಿಲ್ಲ. ವಾರ್ಡಿನ ನಿವಾಸಿಗಳೆಲ್ಲಾ ಸೇರಿ ಹಲವು ಬಾರಿ ನಗರಸಭೆಯ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ನಿವಾಸಿಗಳು ದೂರುತ್ತಿದ್ದಾರೆ.
ನೆಮ್ಮದಿ ಇಲ್ಲ: ವಾರ್ಡ್ ನಂ.18ರಲ್ಲಿ ಅಂಬೇಡ್ಕರ್ ನಗರ ಬಹುತೇಕ ಕೋಟೆ ವ್ಯಾಪ್ತಿಗೆ ಒಳಪಟ್ಟಿದ್ದು, ಇಲ್ಲಿ ನೀರು ಸರಬರಾಜಾಗಲು ಸಮಸ್ಯೆಯಾಗುತ್ತಿದೆ. ಎತ್ತರ ಪ್ರದೇಶದಲ್ಲಿನ ಬಡಾವಣೆಯ ನಿವಾಸಿಗಳಿಗೆ ಪೈಪ್ನಿಂದ ನೀರು ಬರುತ್ತಿಲ್ಲ. ಹೀಗಾಗಿ ಬರುವ ಅಲ್ಪ ಪ್ರಮಾಣದ ನೀರಿಗಾಗಿ ಪ್ರತಿದಿನ ಬೆಳಗ್ಗೆ 3 ಗಂಟೆಗೆ ಎದ್ದು ಸರದಿಯಲ್ಲಿ ಕಾಯುವಂತಾಗಿದೆ ಎಂದು ಮಹಿಳೆಯರು ಅಳಲು ತೋಡಿಕೊಳ್ಳುತ್ತಿದ್ದಾರೆ. ಕಳೆದ 3 ದಿನಗಳಿಂದ ಈ ಸಮಸ್ಯೆ ಮತ್ತಷ್ಟು ತೀವ್ರಗೊಂಡಿದೆ. ನೀರಿಗಾಗಿ ದಿನವೂ ಜಗಳ ನಡೆಯುತ್ತಿದ್ದು, ಬಡಾವಣೆಯಲ್ಲಿ ಶಾಂತಿ ಇಲ್ಲದಂತಾಗಿದೆ ಎಂದು ನಿವಾಸಿ ಮಲ್ಲಿನಾಥ ಸುಂಗಲಕರ್ ಆರೋಪಿಸಿದ್ದಾರೆ.
ಹಾರಿಕೆ ಉತ್ತರ: ಇತ್ತೀಚೆಗೆ ಈ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ನಿವಾಸಿಗಳೆಲ್ಲ ನಗರಸಭೆ ಪೌರಾಯುಕ್ತರನ್ನು ಭೇಟಿ ಮಾಡಿದಾಗ, ಸದ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ನಾವೇನು ಮಾಡಲು ಆಗುವುದಿಲ್ಲ ಎಂಬ ಹಾರಿಕೆ ಉತ್ತರ ನೀಡಿ ಕಳುಹಿಸಿದ್ದಾರೆ ಎಂದು ಬಡಾವಣೆ ನಿವಾಸಿಗಳು ಆರೋಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement