ರಂಗಭೂಮಿ ಕಲಾವಿದರ ಚೈತನ್ಯ ಶಕ್ತಿ
ಕನ್ನಡಪ್ರಭ ವಾರ್ತೆ ಸಿಂಧನೂರು ಮಾ.28
ರಂಗಭೂಮಿ ಕಲಾವಿದರ ಚೈತನ್ಯ ಶಕ್ತಿಯಾಗಿದೆ ಎಂದು ಖ್ಯಾತ ರಂಗಭೂಮಿ ಕಲಾವಿದೆ ಹಾಗೂ ನಾಟಕ ಅಕಾಡೆಮಿ ಸದಸ್ಯೆ ಸುಮತಿಶ್ರೀ ಅಭಿಪ್ರಾಯಪಟ್ಟರು.
ಅವರು ಇತ್ತೀಚೆಗೆ ಕೋಟೆ ವೀರಣ್ಣ ಕಲ್ಯಾಣ ಮಂಟಪದಲ್ಲಿ ರಾಜ್ಯ ನಾಟಕ ಅಕಾಡೆಮಿ ಹಾಗೂ ರಾಜರಾಜೇಶ್ವರಿ ಜಾನಪದ ಸಾಂಸ್ಕೃತಿಕ ಕಲಾಭಿವೃದ್ಧಿ ಸಂಘ ಜಂಟಿಯಾಗಿ ಏರ್ಪಡಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಹಾಗೂ ರಂಗಗೀತೆಗಳ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಂಗಭೂಮಿ ಹಳೆ ಕಲಾವಿದರು ಸತ್ತ ಮೇಲೆ ಅವರ ಹೆಸರು ಸತ್ತು ಹೋಗುತ್ತವೆ. ಅವರ ಹೆಸರುಗಳು ಅಜರಾಮರವಾಗಿರಬೇಕೆಂದರೆ ಈಗಿರುವ ಹಳೆಯ ರಂಗಭೂಮಿ ಕಲಾವಿದರೆಲ್ಲ ಸೇರಿಕೊಂಡು ಅವರ ಹೆಸರು, ವಿಳಾಸಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಹೊರತರಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಅವರ ಹೆಸರಿನ ವೇದಿಕೆಗಳನ್ನು, ದ್ವಾರಗಳನ್ನು ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದು ಸಲಹೆ ನೀಡಿದರು.
ಮಾಸಾಶನ ಹೆಚ್ಚಿಸಿ: ಕಲಾವಿದರಿಗೆ ಮಾಸಾಶನವನ್ನು ರು. 2000 ಏರಿಸುವಂತೆ ಒತ್ತಾಯಿಸಲಾಗಿದೆ. ನಾಟಕಗಳಲ್ಲಿ ಅಶ್ಲೀಲ ಸಂಭಾಷಣೆ, ನೃತ್ಯಗಳನ್ನು ತೆಗೆಯಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ. ಆದ್ದರಿಂದ ನಾಟಕಕಾರರು, ಕವಿಗಳು ಹೊಸ ನಾಟಕಗಳಲ್ಲಿ ಇವುಗಳಿರದಂತೆ ಎಚ್ಚರಿಕೆ ವಹಿಸಬೇಕು. ನಾಟಕ ಅಕಾಡೆಮಿ, ರಂಗಭೂಮಿ ದಿನಾಚರಣೆಯ ಅಂಗವಾಗಿ ಬಿಜಾಪುರ, ಗಂಗಾವತಿ, ಸಿಂಧನೂರು ಹೀಗೆ ಒಂದೇ ದಿನ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ರಂಗಾಸಕ್ತರು, ರಂಗಕಲಾವಿದರು, ಕಲಾಪೋಷಕರು, ಅಕಾಡೆಮಿಯ ಕಾರ್ಯಕ್ರಮಗಳಿಗೆ ಸಹಕಾರ ನೀಡಬೇಕು ಎಂದು ಕೋರಿದರು.
ರಂಗಕಲೆ ನಶಿಸದು: ಗದುಗಿನ ಹಿರಿಯ ನಾಟಕಕವಿ ಸಿ.ಜೆ.ಬಿ. ಹಿರೇಮಠ ಹುಯ್ಲಗೋಳ ಮಾತನಾಡಿ, ರಂಗಭೂಮಿ ನಶಿಸಿ ಹೋಗುತ್ತದೆ ಎಂದು ಹಲವರು ಹೇಳುತ್ತಾರೆ. ಆದರೆ ಇದು ನಶಿಸಿ ಹೋಗಲು ಸಾಧ್ಯವಿಲ್ಲ. ಕಲಾವಿದರ, ಕವಿಗಳ ನಿರಾಸಕ್ತಿ, ಬೇಜವಾಬ್ದಾರಿತನ ಹಾಗೂ ಪ್ರೇಕ್ಷಕರ ಆಸಕ್ತಿಗೆ ವಿರುದ್ಧವಾಗಿ ನಾಟಕಗಳು ರಂಗಭೂಮಿಯಲ್ಲಿ ಪ್ರದರ್ಶನವಾಗುತ್ತಿರುವುದರಿಂದ ಪ್ರೇಕ್ಷಕರು ನಾಟಕಗಳಿಂದ ದೂರ ಉಳಿಯುತ್ತಿದ್ದಾರೆ. ಹಿಂದೆ ಎಲೆವಾಳ ಸಿದ್ದಯ್ಯ, ಸುಭದ್ರಮ್ಮ ಮನಸೂರು, ಸಿಂಧನೂರಿನ ಹುಸೇನಪ್ಪ, ಇಸ್ಮಾಯಿಲ್ ಸಾಬ್, ವಟಗ ಲ್ ಬಸನಗೌಡ್ರು, ಚಿಲ್ಕರಾಗಿ ತಿಮ್ಮನಗೌಡ್ರು ಈ ಭಾಗದ ರಂಗಭೂಮಿಯ ಮಹತ್ವವನ್ನು ಹೆಚ್ಚಿಸಿದ್ದಾರೆ. ಉದಯೋನ್ಮುಖ ಕಲಾವಿದರಿಗೆ ಅಕಾಡೆಮಿ ಗುರುತಿಸುವ ಕೆಲಸ ಮಾಡುತ್ತಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಮನಸೆಳೆದ ಸಂಭಾಷಣೆ: ಹಿರಿಯ ಕಲಾವಿದ ಚಿಲ್ಕರಾಗಿ ತಿಮ್ಮನಗೌಡ್ರು, ಸಂಸ್ಕಾರ ಭಾರತಿ ಅಧ್ಯಕ್ಷೆ ಮಧುಮತಿ ದೇಶಪಾಂಡೆ ಸಭೆಯನ್ನುದ್ದೇಶಿಸಿ ಮಾತನಾಡಿದರು. ಹವ್ಯಾಸಿ ಕಲಾವಿದ ಇಸ್ಮಾಯಿಲ್ ಸಾಬ್, ವೆಂಕಣ್ಣ ಜೋಶಿ ಶಕುನಿ ಹಾಗೂ ಭೀಮನ ಪಾತ್ರಗಳ ಸಂಭಾಷಣೆ ಹೇಳಿ ರಂಗಾಸಕ್ತರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು. ಹಿರಿಯ ರಂಗಭೂಮಿ ಕಲಾವಿದೆ ಸುಮತಿಶ್ರೀ ಶ್ರೀದೇವಿಯ ಪಾತ್ರದ ಸಂಭಾಷಣೆ ಮಾಡಿದಾಗ ಪ್ರೇಕ್ಷಕರೆಲ್ಲ ರೋಮಾಂಚನಗೊಂಡು ತಮಗರಿಯದಂತೆ ಚಪ್ಪಾಳೆ ಬಾರಿಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಹಿರಿಯ ರಂಗಭೂಮಿ ಕಲಾವಿದೆ ಸುಭದ್ರಮ್ಮ ಮನಸೂರು, ಬಸವಕೇಂದ್ರದ ಗೌರವಾಧ್ಯಕ್ಷ ವೀರಭದ್ರಪ್ಪ ಕುರುಕುಂದಿ, ನಾಗಭೂಷಣಪ್ಪ ಕುರುಕುಂದಿ,ಉಪಾಧ್ಯಕ್ಷ ಹುಸೇನಪ್ಪ, ಪತ್ರಕರ್ತರಾದ ಡಿ.ಎಚ್. ಕಂಬಳಿ, ಪ್ರಹ್ಲಾದ ಗುಡಿ, ಶರಣಪ್ಪ ಬೇರ್ಗಿ, ಶಾಂತವೀರಯ್ಯ ಸ್ವಾಮಿ, ಬಸವರಾಜಗೌಡ ಬೂತಲದಿನ್ನಿ, ಕುಬೇರಗೌಡ ಮತ್ತಿತರರು ಉಪಸ್ಥಿತರಿದ್ದರು. ಅನೇಕ ಕಲಾವಿದರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ರೇವಣಸಿದ್ದಯ್ಯ, ವೆಂಕನಗೌಡ ವಟಗಲ್ ನಿರೂಪಿಸಿದರು. ನಂತರ ಸುಭದ್ರಮ್ಮ ಮನಸೂರು ಅವರಿಂದ ಸುಮಾರು 2 ತಾಸುಗಳ ಕಾಲ ರಂಗಗೀತೆಗಳ ಗಾಯನ ಸಭಿಕರ ಗಮನ ಸೆಳೆಯಿತು.