ರೈತರ ಉಪವಾಸದ ಉಗ್ರರೂಪ
ಕನ್ನಡಪ್ರಭ ವಾರ್ತೆ ಚಿತ್ತಾಪುರ ಮಾ.28
ತಾಲೂಕಿನ ಇಟಗಾ ಗ್ರಾಮದ ಬಳಿ ನಿರ್ಮಾಣಗೊಳ್ಳುತ್ತಿರುವ ಓರಿಯಂಟಲ್ ಸಿಮೆಂಟ್ ಕಂಪನಿ ಗೇಟ್ ಬಳಿ ಇಟಗಾ, ಮೋಗಲಾ, ದಿಗ್ಗಾಂವ ರೈತ ಹೋರಾಟ ಸಮಿತಿ ರೈತರ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಮಧ್ಯೆ ತಹಸೀಲ್ದಾರ್ ಕಚೇರಿಯಲ್ಲಿ ವಾಗ್ವಾದ ನಡೆದು ಕೆಲ ಹೊತ್ತು ತಹಸೀಲ್ದಾರ್ ಕೋಣೆಯಲ್ಲಿ ಧರಣಿ ಕುಳಿತ ಘಟನೆ ಗುರುವಾರ ಜರುಗಿತು.
ಕಂಪನಿ ಗೇಟ್ ಬಳಿ ರೈತರ ಹೋರಾಟ ಸರದಿ ಉಪವಾಸ 8 ದಿನಕ್ಕೆ ಕಾಲಿಟ್ಟು ದಿನದಿಂದ ದಿನಕ್ಕೆ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ರೈತ ಮುಖಂಡ ಮೈನೋದ್ದಿನ್ ಮುನ್ಸಬ್ದಾರ್, ಪ್ರಭಾಕರ್ ವಾಲಿಕಾರ್, ತಮ್ಮಣ್ಣ ಡಿಗ್ಗಿ ನೇತೃತ್ವದಲ್ಲಿ ನೂರಾರು ರೈತರು ಗುರುವಾರ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಲು ಆಗಮಿಸಿದ್ದರು.
ತಹಸೀಲ್ದಾರ್ ಮೌನಕ್ಕೆ ಆಕ್ರೋಶ: ಇಲ್ಲಿನ ರೈತರು ಹೋರಾಟ ನಡೆಸುತ್ತಿರುವುದನ್ನು ಹಾಗೂ ರೈತರಿಗೆ ಆದ ಅನ್ಯಾಯ ಕುರಿತು ವರದಿ ನೀಡುವಂತೆ ಜಿಲ್ಲಾಧಿಕಾರಿ ತಹಸೀಲ್ದಾರರಿಗೆ ಆದೇಶ ನೀಡಿದರೂ ಇದುವರೆಗೆ ತಹಸೀಲ್ದಾರ್ ಮೌನ ವಹಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಈ ಕುರಿತು ಚರ್ಚಿಸಲು ರೈತರು ಕಚೇರಿಗೆ ಬರುವುದಾಗಿ ತಹಸೀಲ್ದಾರರಿಗೆ ತಿಳಿಸಲಾಗಿತ್ತು. ಆದರೆ ಬರುವಷ್ಟರಲ್ಲಿ ಕಚೇರಿಯಲ್ಲಿ ತಹಸೀಲ್ದಾರ್ ಇರಲಿಲ್ಲ. ಇದರಿಂದ ರೊಚ್ಚಿಗೆದ್ದ ರೈತರು ಕೂಡಲೇ ತಹಸೀಲ್ದಾರರು ಚರ್ಚೆಗೆ ಬಂದು ರೈತರ ಮನವಿ ಪತ್ರ ಸ್ವೀಕರಿಸಬೇಕೆಂದು ರೈತ ಮುಖಂಡರು ಆಗ್ರಹಿಸಿದರು.
ಅಧಿಕಾರಿಗಳೊಂದಿಗೆ ವಾಗ್ವಾದ: ಜಿಲ್ಲಾಧಿಕಾರಿ ಬೀಳ್ಕೊಡುಗೆ ಸಮಾರಂಭದ ನಿಮಿತ್ತ ಗುಲ್ಬರ್ಗಕ್ಕೆ ಹೋಗಿದ್ದಾರೆ. ಬಂದ ನಂತರ ಚರ್ಚಿಸಿ ಎಂದು ಇಲ್ಲವೇ ಮನವಿ ಪತ್ರ ನನಗೆ ನೀಡಬೇಕು ಎಂದು ಶಿರಸ್ತೆದಾರ ಶ್ರೀನಿವಾಸ ಚಾಪೆಲ್ ಹೇಳಿದರು. ನಾವು ಬರುವುದಾಗಿ ಹೇಳಿದರೂ ತಹಸೀಲ್ದಾರರು ಗುಲ್ಬರ್ಗಕ್ಕೆ ಹೋಗಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಕಚೇರಿಯಲ್ಲಿ ಧರಣಿ ಕುಳಿತರು.
ಕೆಲವೇ ರೈತರನ್ನು ಕೋಣೆಯೊಳಗೆ ಕುಳಿತುಕೊಳ್ಳಲು ಅವಕಾಶ ನೀಡಲಾಗುವುದು, ಉಳಿದ ರೈತರು ಹೊರ ನಡೆಯಬೇಕು ಎಂದು ಅಧಿಕಾರಿಗಳು ಹೇಳಿದಾಗ, ರೈತರು ಕುಪಿತಗೊಂಡು ಪಿಎಸ್ಐ ಹಾಗೂ ಕಂದಾಯ ಅಧಿಕಾರಿಗಳ ವಿರುದ್ಧ ವಾಗ್ವಾದ ಉಂಟಾಯಿತು.
ತಹಸೀಲ್ದಾರ್ ವರ್ಗಾವಣೆ ಮಾಡಿ: ಸರದಿ ಉಪವಾಸ ನಡೆಯುವ ಸ್ಥಳಕ್ಕೆ ಇದುವರೆಗೆ ಯಾವ ಅಧಿಕಾರಿಗಳು ಭೇಟಿ ನೀಡದೇ ರೈತರ ಹೋರಾಟಕ್ಕೆ ನಿರ್ಲಕ್ಷ್ಯ ತೋರಿದ್ದಾರೆ. ರೈತರ ಜಮೀನುಗಳಿಗೆ ಯೋಗ್ಯ ಬೆಲೆ ಸಿಗಬೇಕು. ತಹಸೀಲ್ದಾರರು ಇತ್ತ ಜಿಲ್ಲಾಧಿಕಾರಿ ಆದೇಶ ಪಾಲಿಸುತ್ತಿಲ್ಲ. ಇನ್ನೊಂದೆಡೆ ರೈತರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಕಂಪನಿಯ ಆಡಳಿತ ಮಂಡಳಿಯೊಂದಿಗೆ ಕೈಜೋಡಿಸಿ ಸಹಾಯ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದರು. ಕೂಡಲೇ ತಹಸೀಲ್ದಾರರನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
ನಂತರ ವಾತಾವರಣ ತಿಳಿಗೊಂಡು ಶಿರಸ್ತೆದಾರ ಶ್ರೀನಿವಾಸ ಚಾಪೆಲ್ ಹಾಗೂ ಪಿಎಸ್ಐ ಸಂಜೀವಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ರೈತರ ಬೇಡಿಕೆ ಈಡೇರುವವರೆಗೆ ಕಂಪನಿ ಗೇಟ್ ಬಳಿ ಸರದಿ ಉಪವಾಸ ಮುಂದುವರೆಯಲಿದೆ ಎಂದು ಎಚ್ಚರಿಕೆ ನೀಡಿದರು.
ರೈತ ಮುಖಂಡರಾದ ಸಿದ್ದಣಗೌಡ ಪೊಲೀಸ್ ಪಾಟೀಲ್, ವಿಠ್ಠಲ್ ಡಿಗ್ಗಿ, ಸುಭಾಷ ಗೌಡ, ನಾಗೇಂದ್ರ ಡಿಗ್ಗಿ, ಚಂದ್ರಕಾಂತ ಡಿಗ್ಗಿ, ಯಂಕಪ್ಪ ಡಿಗ್ಗಿ, ಶೇಖಣ್ಣ ಹಂದರಕಿ, ಮಲ್ಲಪ್ಪ ಮುಡಬೂಳ, ಪುಂಡಲೀಕ ಡಿಗ್ಗಿ, ನಾಗಪ್ಪ ಸೇಡಂ, ರಾಜು ವಾಲೀಕಾರ್, ಸಾಬಣ್ಣ ಮಳಖೇಡಕರ್, ನಾಗೂ ಮೋಗಲಿ, ನಾಗು ನಾಗಚಕ್ರ, ನಿಂಗಣ್ಣ ಕೊಳ್ಳಿ ಭಾಗವಹಿಸಿದ್ದರು.