ಸಂಸ್ಕೃತಿ ಪರಿಚಯಿಸುವ ಕಾರ್ಯ ಶ್ಲಾಘನೀಯ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮಾ.28
ಸಾಂಸ್ಕೃತಿಕ ಲೋಕದಲ್ಲಿ ಪ್ರತಿ ವರ್ಷವೂ ಸಾಂಸ್ಕೃತಿಕ ಲೋಕೋತ್ಸವ ಏರ್ಪಡಿಸುವ ಮೂಲಕ ನಾಡಿನ ಕಲೆ, ಕಲಾವಿದರನ್ನು ಪೋಷಿಸುತ್ತ, ಇಂದಿನ ಯುವ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸುವ ಕಾರ್ಯ ಸುಸಜ್ಜಿತವಾಗಿ ನಡೆಯುತ್ತಿದೆ ಎಂದು ಸಿದ್ಧಲಿಂಗ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.
ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ನಾವದಗಿ(ಬಿ)ದಲ್ಲಿನ ಸಾಂಸ್ಕೃತಿಕ ಲೋಕದಲ್ಲಿ ಜರುಗಿದ ಸಾಂಸ್ಕೃತಿಕ ಲೋಕೋತ್ಸವ, ಸಂಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಖ್ಯಾತ ಚಲನಚಿತ್ರ ನಟ ಬ್ಯಾಂಕ್ ಜನಾರ್ಧನ ಮಾತನಾಡಿ, ಸಾಂಸ್ಕೃತಿಕ ಲೋಕದಲ್ಲಿ ಸಾಂಸ್ಕೃತಿಕ ಲೋಕೋತ್ಸವ ಹಾಗೂ ಸಂಸ್ಕಾರ ಪ್ರಶಸ್ತಿ ಸಮಾರಂಭ ನಾನೆಂದು ನೋಡಿರದಂತಹ ಅಪೂರ್ವ ಸಂಭ್ರಮವಾಗಿದೆ ಎಂದರು.
ಇಲ್ಲಿ ಪ್ರಶಸ್ತಿ ಪಡೆದ ಮಹನೀಯರಿಗೆ ಸರ್ಕಾರ ಗುರುತಿಸುವುದಿಲ್ಲ. ಆದರೆ ಇವರೆಲ್ಲ ಮಹಾನ್ ವ್ಯಕ್ತಿಗಳು ಎಂದು ಹೊಗಳಿದರು. ಕೇವಲ ಚಲನಚಿತ್ರ ಶ್ಯೂಟಿಂಗ್ಗಳಲ್ಲಿ ತೊಡಗಿರುವ ನನಗೆ ವಾಸ್ತವ ಬದುಕಿನ ಸಂಸ್ಕೃತಿ- ಸಂಸ್ಕಾರ ಎಂದರೆ ಇಂದಿನ ಸಮಾರಂಭ ಹಾಗೂ ಇಲ್ಲಿನ ಸಾಂಸ್ಕೃತಿಕ ಲೋಕ ಎನಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಕೃತಾರ್ಥಭಾವ: ಡಾ. ರಾಜೇಂದ್ರ ಯರನಾಳೆ ಅಧ್ಯಕ್ಷತೆ ವಹಿಸಿ, ಸಂಸ್ಕಾರ ಪ್ರಶಸ್ತಿಗೆ ಆಯ್ಕೆಯಾದವರು ರಾಷ್ಟ್ರ ಹಾಗೂ ಅಂತಾರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡದವರು. ಇವರೆಲ್ಲರಿಗೆ ಸಂಸ್ಥೆ ಗುರುತಿಸಿ ಪ್ರಶಸ್ತಿ ನೀಡುವಲ್ಲಿ ಕೃತಾರ್ಥಭಾವವಿದೆ ಎಂದರು.
ಕನ್ನಡ ಕಟ್ಟಿದ, ಸಾಹಿತ್ಯ ಶ್ರೀಮಂತಗೊಳಿಸಿದ ಹಿರಿಯ ಚೇತನ ಡಾ.ಮ.ಗು. ಬಿರಾದಾರ ಅವರು ಪ್ರಶಸ್ತಿ ಸ್ವೀಕರಿಸಿ ಇದೊಂದು ಬಹು ಅಚ್ಚುಕಟ್ಟಾದ ಸಮಾರಂಭವಾಗಿದೆ. ಸಂಸ್ಕಾರ ಪ್ರಶಸ್ತಿಗೆ ಆಯ್ಕೆಯಾದ 10 ಜನರು ತಮ್ಮ ತಮ್ಮ ಕ್ಷೇತ್ರದಲ್ಲಿ ವಿಶಿಷ್ಟ ಸೇವೆಸಲ್ಲಿಸಿದ ಸಾಧಕರಾಗಿದ್ದಾರೆ. ಇಂದು ಸಂಸ್ಕಾರವೆಂದರೆ ಅಂತ್ಯಸಂಸ್ಕಾರ ಮಾತ್ರ ಗೊತ್ತಿರುವ ಹಲವರಿಗೆ ಸಂಸ್ಕಾರವಂತವರಾಗಿ ಮಾಡುವ ಸಾಂಸ್ಕೃತಿಕ ಲೋಕದ ಕಾರ್ಯ ಶ್ಲಾಘನೀಯ ಎಂದರು.
ಪ್ರಶಸ್ತಿ ಪ್ರದಾನ: ಸಂಗೀತ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಪ್ರಶಸ್ತಿ ಸ್ವೀಕರಿಸಿದ ಶರಣು ಗದುಗೆ, ಸಂಗೀತ ಕ್ಷೇತ್ರದಲ್ಲಿ ಹಲವರಿಗೆ ಸಂಸ್ಕಾರಗೊಳಿಸಿದ ಚನ್ನವೀರಪ್ಪ ಬಡಿಗೇರ ಗವಾಯಿ, ಕೃಷಿ ಕ್ಷೇತ್ರದಲ್ಲಿ ವೀರೇಂದ್ರ ಕುಮಸಿ, ಚಿತ್ರಕಲಾ ಕ್ಷೇತ್ರದಲ್ಲಿ ಹೊಸ ಶೈಲಿ ಸೃಷ್ಟಿಸಿ ರಾಷ್ಟ್ರಮಟ್ಟದ ಖ್ಯಾತಿ ಹೊಂದಿರುವ ಡಾ. ವಿಜಯ ಹಾರಗಗುಂಡಗಿ, ಶಿಲ್ಪ, ಕಾಷ್ಟ ಹಾಗೂ ಫೈಬರ್ ಮೊದಲಾದವುಗಳಲ್ಲಿ ಕಲಾಕೃತ ಮಾಡುವ ಈರಣ್ಣ ಕಂಬಾರ, ದೊಡ್ಡಾಟ ಪಾತ್ರಗಳಲ್ಲಿ ಪಾತ್ರ ಮಾಡುವ ಹಾಗೂ ನಿರ್ದೇಶಕ ಚಂದ್ರಶೇಖರ ಹೊಸುರಕರ್, ಮಹಾದೇವಿ ನಂದಿಕೂರ, ಬಸವರಾಜ ಬೂದಿ, ವಿಜಯಕುಮಾರ ಪಾಟೀಲ್ ಅವರಿಗೆ ಪ್ರಶಸ್ತಿ ನೀಡಲಾಯಿತು.
ಸಾಂಸ್ಕೃತಿಕ ಲೋಕೋತ್ಸವದಲ್ಲಿ ಹೇಮಂತ ಅಷ್ಟಗಿಕರ್ ಪ್ರಾಣಿ ಪಕ್ಷಿಗಳ ಧ್ವನಿ ಅನುಕರಣೆ ಮಾಡಿದರು. ಗುಂಡಣ್ಮ ಡಿಗ್ಗಿ ಹಾಸ್ಯ ಮಾಡಿದರು. ರೋಹಿಣಿ, ರಾಖಿ, ಸೃಷ್ಟಿ, ಕಿಶೋರ, ದಿಶಾ ಮೊದಲಾದವರ ನೃತ್ಯ ಮನಸೂರೆಗೊಂಡವು.
ಶಂಕರ ಶಿವಾಚಾರ್ಯ, ಗೌರಿ ಶಂಕರ ಸ್ವಾಮಿ, ವೀರಣ್ಣ ಪಾಟೀಲ್, ಎಂ.ಬಿ. ಅಂಬಲಗಿ, ಡಾ. ಸಿದ್ರಾಮಯ್ಯ ಮಠ, ಡಾ. ಶಿವಶರಣಪ್ಪ ಧಾಬಾ, ಗುಂಡಪ್ಪ ಪಾಟೀಲ್, ಹಾವಗಿರಾವ ಖೇಮಸಟ್ಟೆ, ವಾಣಿಶ್ರೀ ಯರನಾಳೆ, ಗದ್ದೆಪ್ಪ ಭಜಂತ್ರಿ, ರುಕ್ನೊದ್ದೀನ್ ಯಾಸೀನ್ ನೀಯಾಜಿ, ವಿಶ್ವನಾಥ ಹಾಗೂ ನರಸಿಂಹ ಉಪಸ್ಥಿತರಿದ್ದರು.
ಸಂಗಯ್ಯ ಹಳ್ಳದ ಮಠ, ಪೂಜಾ ಹಿರೇಮಠ ಹಾಗೂ ಮಹಾಲಕ್ಷ್ಮೀ ಪ್ರಾರ್ಥನೆ ಗೀತೆ ಹಾಡಿದರು. ಸಾತ್ ಮಹಾಲಿಂಗಪ್ಪ ಗುಂಡಪ್ಪಗೊಳ ಹಾರ್ಮೋನಿಯಂ ನುಡಿಸಿದರು. ಶಿವಲೀಲಾ ಹಳ್ಳದಮಠ ಹಾಗೂ ರೇಣುಕಾ ಕಾರ್ಯಕ್ರಮ ನಿರೂಪಿಸಿದರು.